ಬೆಂಗಳೂರು
ವಿವಿಧತೆಯಲ್ಲಿ ಏಕತೆಯನ್ನೇ ಸಂವಿಧಾನದ ಸ್ಫೂರ್ತಿಯಾಗಿಸಿಕೊಂಡಿರುವ ಭಾರತೀಯರು ಮಾನವೀಯತೆಯ ಧರ್ಮವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿರುವ ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಯನ್ನು ಎಲ್ಲ ಭಾರತೀಯರು ವಿರೋಧಿಸಬೇಕು. ಈ ಮೂಲಕ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಖ್ಯಾತ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಕರೆ ನೀಡಿದ್ದಾರೆ.
ನಗರದಲ್ಲಿಂದು ಇಲ್ಲಿನ ಮಿಲ್ಸರ್ಸ್ ರಸ್ತೆಯ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ, ಸಿಎಎ ವಿರೋಧಿಸಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶ ವಿಭಜನೆಗೊಂಡಾಗ ನಮ್ಮ ಪೂರ್ವಜರು, ಧರ್ಮಾಧಾರಿತ ಪಾಕಿಸ್ತಾನಕ್ಕೆ ಹೋಗುವುದು ಅಥವಾ ಜಾತ್ಯತೀತ ದೇಶವಾಗಿರುವ ಭಾರತದಲ್ಲಿ ಉಳಿಯುವುದು ಎಂಬ ಆಯ್ಕೆಯಲ್ಲಿ ಭಾರತವನ್ನೇ ಆಯ್ಕೆ ಮಾಡಿಕೊಂಡರು. ಆದರೆ ಇಂದು ನಮ್ಮ ಮುಂದೆ ಭಾರತ ಮಾತ್ರ ಆಯ್ಕೆ ಇರುವುದು. ಇದನ್ನು ಯಾವುದೇ ಕಾರಣಕ್ಕೂ ಛಿದ್ರ ಮಾಡಲು ಅವಕಾಶ ನೀಡುವುದಿಲ್ಲ ಎಂದರು.
ಸಿಎಎ ಮತ್ತು ಎನ್‍ಆರ್‍ಸಿ ಕೇವಲ ಮುಸ್ಲಿಮರಿಗೆ ಮಾತ್ರ ತೊಂದರೆ ನೀಡುವುದಿಲ್ಲ. ಕಾನೂನು ಹೆಸರಿನಲ್ಲಿ ಮುಸ್ಲಿಮರನ್ನು ನಿರಾಶ್ರಿತರಾಗಲು ನಾವು ಬಿಡುವುದಿಲ್ಲ. ನಾವೆಲ್ಲ ಒಟ್ಟಾಗಿ ಎನ್‍ಆರ್‍ಸಿಯನ್ನು ಬಹಿಷ್ಕರಿಸಬೇಕು. ಗಾಂಧೀಜಿಯವರ ಅಸಹಕಾರದ ಮಾದರಿಯಲ್ಲಿ ನಾವು ಕೂಡ ಸರ್ಕಾರಕ್ಕೆ ಯಾವುದೇ ದಾಖಲೆಗಳನ್ನು ಕೊಡದೆ ಅಸಹಕಾರ ಚಳವಳಿ ನಡೆಸಬೇಕು ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರ, ಸಾರ್ವಜನಿಕರು ಪೌರತ್ವ ಸಾಬೀತು ಪಡಿಸಬೇಕು ಎಂದು ಹೇಳುವುದೇ ಮೂರ್ಖತನ. ನಾವು ಏಕೆ,ಪೌರತ್ವ ನೀಡಬೇಕು ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಮುಹಮ್ಮದ್ ಅಲಿ ಜಿನ್ನಾ ಪಾರ್ಟಿ ಎಂದ ಅವರು, ರಾಜಕೀಯ ಪಕ್ಷಗಳು ಮತ ಪಡೆಯುವಾಗ ಎಲ್ಲರೂ ನಮ್ಮವರು ಎನ್ನುತ್ತಾರೆ. ಈಗ ಈ ಕಾಯ್ದೆಯ ವಿರುದ್ಧ ಎಲ್ಲರೂ ಬೀದಿಗೆ ಇಳಿಯಬೇಕು. ಉದ್ದೇಶಪೂರ್ವಕವಾಗಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಭಯ ಹೋಗಲಾಡಿಸಲು ರಾಜಕೀಯ ಫಲಾನುಭವಿಗಳು ಕೆಲಸ ಮಾಡಬೇಕು. ಬರೀ ಮುಸ್ಲಿಮ್ ರು ಬೀದಿಗೆ ಇಳಿಯುವುದು ಸರಿಯಲ್ಲ. ದೇಶದ ಸಂವಿಧಾನದ ವಿರೋಧಿ, ಪ್ರಜಾಪ್ರಭುತ್ವದ ವಿರೋಧಿ ಕಾನೂನು ಇದಾಗಿದೆ ಎಂದರು.
ಸುನ್ನಿ ಜಮಾಯತ್ ನ ಮೌಲಾನ ತನ್ವೀರ್ ಅಹ್ಮದ್ ಹಾಷ್ಮಿ ಮಾತನಾಡಿ, ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ನಡೆಸಿದರೆ ಸಚಿವ ಸಿ.ಟಿ.ರವಿ ಅವರು, ಗೋಧ್ರಾ ಹತ್ಯಾಕಾಂಡ ನೆನಪಿಸಿದ್ದಾರೆ.ಆದರೆ, ನಾವು ಅವರು ಮಾತನಾಡುವ ಮೊದಲು ಯೋಚನೆ ಮಾಡಬೇಕು. ನಾವು ಜಾತ್ಯತೀತ ಹಿಂದೂ, ಕ್ರೈಸ್ತ, ಮುಸ್ಲಿಮರು. ಅವರಂತೆ ಬೆಂಕಿಹಚ್ಚುವ ಕೆಲಸ ಮಾಡುವುದಿಲ್ಲ.ಅಲ್ಲದೆ, ಕರ್ನಾಟಕ ಟಿಪ್ಪು ಸುಲ್ತಾನ್ ಅವರ ಬೀಡಾಗಿದೆ ಎಂದರು.
ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿದೆ. ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟೇ ಅಲ್ಲದೆ. ಡಾ.ಬಿ.ಆರ್.ಅಂಬೇಡ್ಕರ್ ಎಲ್ಲರಿಗೂ ಒಂದೇ ರೀತಿಯ ಹಕ್ಕುನೀಡಿದ್ದು, ಕೇಂದ್ರ ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಲ್ ಸಿಂಥಿಲ್ ಮಾತನಾಡಿ, ಎನ್‍ಆರ್‍ಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ವಿಚಲಿತರಾಗಿದ್ದಾರೆ. ಇದೇ ಕಾರಣದಿಂದ ಸುಮಾರು ಎರಡು ಗಂಟೆಗಳ ಕಾಲ ದೆಹಲಿಯಲ್ಲಿ ಭಾಷಣ ಮಾಡಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಕಾನೂನು ತಾರತಮ್ಯದಿಂದ ಕೂಡಿದೆ ಎಂಬುದು ಎಲ್ಲರಿಗೂ ಅರ್ಥವಾಗಿದೆ. ಇದರ ವಿರುದ್ಧ ದೇಶದೆಲ್ಲೆಡೆ ಜನರು ಬೀದಿಗಿಳಿದಿದ್ದಾರೆ. ಈ ಕಾನೂನನ್ನು ಹಿಂಪಡೆಯದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು.
ಮಿಲ್ಲಿ ಕೌನ್ಸಿಲ್ ನ ಮೌಲಾನ ಮುಸ್ತಫಾ ರಿಫಾಯಿ, ಡಾ. ಸಾದ್ ಬೆಳಗಾಮಿ, ಅಮೀರ್ ಜಾನ್, ಅಬ್ದುಲ್ ರಹೀಮ್, ಇಜಾಝ್ ನದ್ವಿ, ಇಫ್ತಿಕಾರ್ ಖಾಸ್ಮಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
