ಉಳ್ಳವರ ತೆರಿಗೆ ವಿನಾಯಿತಿ ವಿರೋಧಿಸಿ ಪ್ರತಿಭಟನೆ

ದಾವಣಗೆರೆ:

     ಕಾರ್ಪೋರೇಟ್ ಬಂಡವಾಳಗಾರರಿಗೆ ತೆರಿಗೆ ವಿನಾಯಿತಿ ನೀಡುತ್ತಿರುವ ಹಾಗೂ ಪೆಟ್ರೋಲ್, ಡಿಸೆಲ್ ಬೆಲೆ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

      ಇಲ್ಲಿನ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಎಸ್‍ಯುಸಿಐ ಪದಾಧಿಕಾರಿಗಳು, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು

      ಈ ಸಂದರ್ಭದಲ್ಲಿ ಮಾತನಾಡಿದ ಎಸ್‍ಯುಸಿಐ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ರೈತರ ಸಾಲ ಮನ್ನಾ ಮಾಡಿ ಎಂದಾಗ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು, ಬೀಜಗೊಬ್ಬರಗಳಿಗೆ ಸಬ್ಸಿಡಿ ನೀಡಲು ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲು ಹಣವಿಲ್ಲ ಎಂದಿದ್ದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಈಗ ಕಾರ್ಪೋರೇಟ್ ಬಂಡವಾಳಗಾರರಿಗೆ 1.45 ಲಕ್ಷ ಕೋಟಿ ರೂ. ತೆರಿಗೆ ವಿನಾಯಿತಿ ನೀಡಿ ತಾನು ಬಂಡವಾಳಗಾರರ ಪರವಾಗಿದ್ದೇನೆ ಎಂದು ಮತ್ತೆ ನಿರೂಪಿಸಿದೆ ಎಂದು ಆರೋಪಿಸಿದರು.

     ಚುನಾವಣೆಯ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಅಚ್ಚೆ ದಿನ್ ತರುತ್ತೇನೆಂದು ಹೇಳಿದ್ದ ಪ್ರಧಾನಿ ಮೋದಿ ಅವರ ಆಶ್ವಾಸನೆ ಕಪಟತನದಿಂದ ಕೂಡಿದ್ದು, ಜನ ಸಾಮಾನ್ಯರನ್ನು ಹಗಲಿನಲ್ಲಿರುವ ಕತ್ತಲ ಬಾವಿಗೆ ತಳ್ಳಿರುವುದು ಸ್ಪಷ್ಠವಾಗಿದೆ ಎಂದು ಆರೋಪಿಸಿದರು.
ಉತ್ತರಕರ್ನಾಟಕದ ಹಲವು ಜಿಲ್ಲೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಜನ ದಿಕ್ಕಾ ಪಾಲಾಗಿ ನಿರ್ಗತಿಕರಾಗಿದ್ದಾರೆ. ಆಸ್ತಿ-ಪಾಸ್ತಿ, ಮನೆ-ಮಠ ಎಲ್ಲವನ್ನು ಕಳೆದುಕೊಂಡು ರೋಧಿಸುತ್ತಿದ್ದಾರೆ. ಈ ಸಂತ್ರಸ್ತರಿಗೆ ಯದ್ದೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಲ್ಲಿ ಕೇಂದ್ರ ಸರ್ಕಾರ ನಯಾ ಪೈಸೆ ನೀಡದೇ ವಿದೇಶದಲ್ಲಿ ಸಾವಿರಾರುಕೋಟಿ ಹಣವ್ಯಯಿಸಿ ಹೌಡಿ ಮೋದಿ ಕಾರ್ಯಕ್ರಮ ಆಯೋಜಿಸಿರುವುದು ಯಾರ ಉದ್ದಾರಕ್ಕೆ ಎಂದು ಪ್ರಶ್ನಿಸಿದರು.

     ಉತ್ತರ ಕಾರ್ನಾಟಕ ಸೇರಿದಂತೆ ಈಶಾನ್ಯ ಭಾರತದ ಹಲವು ರಾಜ್ಯಗಳು ಪ್ರವಾಹದಲ್ಲಿ ಸಾವಿರಾರುಜನ ನೆಲೆಯಿಲ್ಲದೆ ಬೀದಿಯಲ್ಲಿದ್ದಾಗ ಅವರ ಬಳಿ ಬಂದು ಕಷ್ಠ ಆಲಿಸಲಿಕ್ಕೆ ಸಮಯವಿಲ್ಲದ ಮೋದಿ ಅಮೇರಿಕಾದ ಚುನಾವಣೆ ಪ್ರಚಾರಕ್ಕೆ ಹೋಗಿರುವುದು ಈ ದೇಶದ ಅಸಂಖ್ಯಾತ ಜನರ ದೌರ್ಭಾಗ್ಯವೇ ಆಗಿದೆ. ಚುನಾವಣೆ ಪೂರ್ವದಲ್ಲಿ ಪೆಟ್ರೋಲ್, ಡಿಸೆಲ್ ಬೆಲೆ 50 ರೂ. ಗಡಿದಾಟದಂತೆ ನೋಡಿಕೊಳ್ಳುತ್ತೇನೆ ಎಂದು ಮನಮೋಹನ್ ಸಿಂಗ್ ಸರ್ಕಾರರ ಇಂಧನ ಬೆಲೆ ಹೆಚ್ಚಿಸಿದ್ದಾಗ ಆಕೋಶ ವ್ಯಕ್ತಪಡಿಸಿದ್ದ ಮೋದಿ, ಇಂದು ತಾವು ಬೆಲೆ ಏರಿಕೆ ನಿಯಂತ್ರಿಸದಿರುವುದನ್ನು ಪ್ರಶ್ನಿಸಿದರೆ ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ದೇಶದ ದೊಡ್ಡ ಬಂಡವಾಳಗಾರರಾದ ಅಂಬಾನಿ,ಅದಾನಿ ಟಾಟಾ ಮತ್ತಿತರರ ಋಣ ತೀರಿಸಲು 1.45 ರೂ ಲಕ್ಷಕೋಟಿ ತೆರಿಗೆ ವಿನಾಯಿತಿ ನೀಡಿದ್ದಾರೆ ಮತ್ತು ಅವರ ಗುಲಾಮರಾಗಿ ಮಾರುಕಟ್ಟೆ ಒದಗಿಸಲು ವಿದೇಶ ಸುತ್ತುತಿದ್ದಾರೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಎಸ್‍ಯುಸಿ ಮುಖಂಡರುಗಳಾದ ಮಂಜುನಾಥ ಕುಕ್ಕುವಾಡ, ಬಿ.ಆರ್. ಅಪರ್ಣಾ, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಭಾರತಿ, ಸೌಮ್ಯ, ನಾಗಸ್ಮಿತ, ಪೂಜ, ನೇತ್ರ, ಕಾವ್ಯ, ಸುಧಾ, ತಿಪ್ಪೇಸ್ವಾಮಿ, ಪರಶುರಾಮ್, ಸತೀಶ್, ನಾಗರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link