ಗುಬ್ಬಿ
ಎಪಿಎಂಸಿ, ಭೂಸುಧಾರಣೆ, ವಿದ್ಯುತ್ ಕಾಯಿದೆಗಳ ತಿದ್ದುಪಡಿ ಮಾಡುವುದನ್ನು ವಿರೋಧಿಸಿ ಇದೇ ತಿಂಗಳ 27 ರಿಂದ 30 ರವರೆಗೆ ನಾಲ್ಕು ದಿನಗಳ ರಾಜ್ಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ರೈತಸಂಘ ಸಜ್ಜಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿನ ರೈತಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೋನಾ ನಿಯಂತ್ರಣದಲ್ಲಿ ವಿಫವಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ ಹೊಡೆತದ ಸಮಸ್ಯೆಗಳ ಮಧ್ಯೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಒಂದೊಂದಿಗೆ ಕಾಯಿದೆ ತಿದ್ದುಪಡಿ ಮಾಡುತ್ತಾ ರೈತರನ್ನು ಬೀದಿಗೆ ತರಲುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ದೇಶದ ಬಹುಸಂಖ್ಯಾತ ರೈತರು ಈ ಕೊರೋನಾ ಹೊಡೆತದಿಂದ ನಲುಗಿದ್ದಾರೆ. ಬೆಳೆದ ಬೆಳೆಗೆ ಮಾರುಕಟ್ಟೆ ಸಿಗದೇ ಪರದಾಡಿದ್ದಾರೆ. ಕೋಟ್ಯಾಂತರ ರೂಗಳ ನಷ್ಟ ಅನುಭವಿಸಿದ ರೈತರ ಪರ ನಿಲ್ಲದ ಸರ್ಕಾರ ಬಂಡವಾಳಶಾಹಿಗಳಿಗೆ ಮಣೆ ಹಾಕುವ ಕೆಲಸ ಮಾಡುತ್ತಿದೆ. ಕಾರ್ಪೋರೇಟ್ ಕಂಪೆನಿಗಳಿಗೆ ಕೃಷಿ ನೀಡಿದರೆ ನಿಜವಾದ ರೈತಾಪಿ ವರ್ಗ ಎಲ್ಲಿಗೆ ಹೋಗಬೇಕಿದೆ. ಈ ನಡುವೆ ಕೊಬ್ಬರಿಗೆ 10,300 ನಿಗದಿ ಮಾಡಿರುವುದು ಸರಿಯಷ್ಟೇ. ಆದರೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ 5 ಸಾವಿರ ರೂಗಳ ಪ್ರೋತ್ಸಾಹಧನ ಸೇರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ರೈತರ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸಲು ಹುನ್ನಾರ ನಡೆಸಿರುವ ಕೇಂದ್ರ ಬಡ ರೈತನ ಮನೆಗೂ ಮೀಟರ್ ಹಾಕಿ ಹಣ ಸುಲಿಗೆ ಮಾಡುವ ವಿದ್ಯುತ್ ಕಾಯಿದೆ ತಿದ್ದುಪಡಿ ತರುತ್ತಿದೆ. ಬೀಜ ಕಾಯಿದೆಯಲ್ಲೂ ರೈತನು ಕಡ್ಡಾಯ ಕುಲಂತರಿ ಬೀಜ ಬಳಸಬೇಕಿದೆ. ಭೂ ಸುಧಾರಣೆ ಹೆಸರಿನಲ್ಲಿ ಬಡವನ ಜಮೀನನ್ನು ಸಿರಿವಂತರ ಪಾಲು ಮಾಡಲು ಕಾಯಿದೆ ತರಲಾಗುತ್ತಿದೆ. ಕೃಷಿ ಮಾಡುವ ಜಮೀನು ಬಂಡವಾಳದಾರರ ಪಾಲಾಗಲಿದೆ.
ಶೇ.40 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಭೂ ಹೀನರ ಪಟ್ಟಿಗೆ ಮತ್ತಷ್ಟು ಮಂದಿ ರೈತರನ್ನು ಸೇರ್ಪಡೆ ಮಾಡಲಿದ್ದಾರೆ. ಈ ಜತೆಗೆ ಬಗರ್‍ಹುಕುಂ ಮೂಲಕ ಬಡವರ ಜಮೀನು ಸಕ್ರಮಗೊಳಿಸಲು ಸಲ್ಲದ ತಕರಾರು ಹೇರಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಬಿಟ್ಟರೆ ಇನ್ನಾವುದೇ ಯೋಜನೆ ಗ್ರಾಮೀಣ ಭಾಗಕ್ಕೆ ನೀಡಿಲ್ಲ ಎಂದು ದೂರಿದರು.
ರೈತ ವಿರೋಧಿ ನೀತಿಯನ್ನು ಅನುರಿಸುವ ಹಲವು ಕಾಯಿದೆ ತಿದ್ದುಪಡಿಯನ್ನು ವಿರೋಧಿಸಿ ಸಾವಿರ ಗ್ರಾಮ ಪಂಚಾಯಿತಿ ಮುಂದೆ ನಾಲ್ಕು ದಿನಗಳ ಕಾಲ ಧರಣಿ ನಡೆಸಲಾಗುವುದು. ಗುಬ್ಬಿ ತಾಲ್ಲೂಕಿನಲ್ಲಿ 10 ಗ್ರಾಮ ಪಂಚಾಯಿತಿಗಳ ಮುಂದೆ ಧರಣಿ ನಡೆಸುವ ಜತೆಗೆ ಇದೇ ತಿಂಗಳ 29 ರಂದು ಜಿಲ್ಲೆಯ ಶಿರಾ, ಗುಬ್ಬಿ, ತುಮಕೂರು ಗ್ರಾಮಾಂತರ ಹಾಗೂ ತುಮಕೂರು ನಗರ ಶಾಸಕರ ಮನೆ ಮುಂದೆ ಧರಣಿ ಮತ್ತು ಸಂಸದರ ಮನೆ ಮುಂದೆ ಕೂಡಾ ಧರಣಿ ನಡೆಸಿ ಜಿಲ್ಲಾಧಿಕಾರಗಳ ಕಚೇರಿ ಮುಂದೆ ಸಮಾವೇಶಗೊಂಡು ಮನವಿ ಸಲ್ಲಿಸಲಾಗುವುದು ಎಂದ ಅವರು ಈ ಹೋರಾಟಕ್ಕೆ ಬರುವ ರೈತರು, ಕೃಷಿ ಕಾರ್ಮಿಕರು, ದಲಿತರು ಹಾಗೂ ಚಿಂತಕರು ಕೋವಿಡ್-19 ಜಾಗೃತಿ ಬಗ್ಗೆ ಅರಿವು ಹೊಂದಿರೆಬೇಕು. ದೈಹಿಕ ಅಂತರ ಕಾದುಕೊಂಡು ಧರಣಿಯಲ್ಲಿ ಪಾಲ್ಗೊಳ್ಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಎನ್.ವೆಂಕಟೇಗೌಡ, ಕಾರ್ಯಾಧ್ಯಕ್ಷ ಸಿ.ಜಿ.ಲೋಕೇಶ್, ಕಾಳೇಗೌಡ, ಯತೀಶ್, ಮಂಜಣ್ಣ, ಬಸವರಾಜು ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ