ತುರುವೇಕೆರೆ
ರೈತರಿಗೆ ಮಾರಕವಾದ ಭೂಸುಧಾರಣಾ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಇದೇ 21ರ ಸೋಮವಾರ ಅಸಂಖ್ಯಾತ ರೈತರೊಡಗೂಡಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಗೋವಿಂದರಾಜ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಮಾಡುವುದಾಗಿ ಹೇಳಿಕೊಂಡ ಸರ್ಕಾರಗಳು ಲಾಕ್‍ಡೌನ್ ಜಾರಿಗೊಳಿಸಿದವು. ಲಾಕ್‍ಡೌನ್ ನೆಪದಲ್ಲಿ ರಾಜ್ಯದ ಜನತೆಯನ್ನು, ರೈತಾಪಿಗಳನ್ನು ಉಸಿರು ಕಟ್ಟುವ ವಾತಾವರಣಕ್ಕೆ ದೂಡಿದವು. ಸಂಕಷ್ಟದ ಕಥೆ ಹೇಳಿಕೊಂಡು ಬಂಡವಾಳ ಶಾಹಿಗಳ ಹಿತಕಾಯುವುದಕ್ಕಾಗಿ ಭೂಸುಧಾರಣಾ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾದವು.
ಕಾಯ್ದೆಗೆ ತಿದ್ದುಪಡಿ ತರುವ ಮುನ್ನ ರಾಜ್ಯ ಸರ್ಕಾರವು ರೈತರೊಂದಿಗೆ ಸಾಧಕ ಭಾದಕಗಳ ಬಗ್ಗೆ ಚರ್ಚೆ ನೆಡೆಸಬೇಕಿತ್ತು. ದೇಶದ ಬೆನ್ನೆಲುಬಾದ ರೈತನ ಅಭಿಪ್ರಾಯ ದಿಕ್ಕರಿಸಿ ಕಾಯ್ದೆ ಜಾರಿಗೆ ಆತುರ ತೋರುವ ಮೂಲಕ ರೈತ ವಿರೋಧಿ ನೀತಿ ಅನುಸರಿಸಿದೆ ಎಂದು ದೂರಿದರು.
ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೆ 21 ರ ಸೋಮವಾರ ರೈತರ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ. ಆನಂತರ ವಿಧಾನಸೌಧ ಮುತ್ತಿಗೆ ಹಾಕುವ ಮೂಲಕ ರೈತ ವಿರೋಧಿ ಕಾಯ್ದೆಗಳ ವಾಪಸಾತಿಗೆ ಒತ್ತಾಯಿಸಲಾಗುವುದು.
ಸ್ವಾತಂತ್ರ್ಯಉದ್ಯಾನವನದಲ್ಲಿ 10 ದಿನಗಳ ಕಾಲ ಕಾಯ್ದೆ ಕುರಿತಾದ ಸಾಧಕ ಭಾದಕಗಳ ಬಗ್ಗೆ ಚರ್ಚೆ ನೆಡೆಸಲಾಗುವುದು. ಈ ವೇಳೆ ಹೋರಾಟಗಾರರಾದ ಮೇಧಾಪಾಟ್ಕರ್, ಯೋಗೇಂದ್ರಯಾಧವ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಪ್ರೋ. ರವಿವರ್ಮಕುಮಾರ್ ಮತ್ತಿತರು ಭಾಗಿಯಾಗಲಿದ್ದಾರೆ. ಅನ್ನದಾತನ ಉಳಿವಿಗಾಗಿ ರೈತರು, ಪ್ರಗತಿಪರ ಚಿಂತಕರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್‍ಗೌಡ, ಕೊಟ್ಟೂರನಕೊಟ್ಟಿಗೆಶ್ರೀನಿವಾಸ್, ರಹಮತ್, ಕುಮಾರ್. ಕಾಳೇಗೌಡ, ಚಂದ್ರು, ಜಾಫರ್, ಎಂ.ಎಲ್.ಗೌಡ ಸೇರಿದಂತೆ ಅನೇಕ ರೈತ ಮುಖಂಡರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ