ಬಿಜೆಪಿ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಪ್ರತಿಭಟನೆ

ಬೆಂಗಳೂರು

       ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿಸಿ ಸರ್ಕಾರ ಅಸ್ಥಿರಗೊಳಿಸಲು ಪದೇ ಪದೇ ಯತ್ನಿಸುತ್ತಿರುವ ಬಿಜೆಪಿ ಮುಖಂಡರ ವಿರುದ್ದ ನಗರದಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಸೇರಿದ ನೂರಾರು ಪಕ್ಷದ ಮುಖಂಡರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯದಲ್ಲಿ ನಾನಾ ಸಮಸ್ಯೆಗಳಿದ್ದು ಅವುಗಳ ಪರಿಹಾರಕ್ಕೆ ಯತ್ನಿಸದೇ ಅಪರೇಷನ್ ಕಮಲ ನಡೆಸಿ ಅಧಿಕಾರ ಹಿಡಿಯಲು ಬಿಜೆಪಿ ಮುಖಂಡರು ಪ್ರಯತ್ನಿಸುದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

          ವಿರೋಧ ಪಕ್ಷದ ನಾಯಕರಾಗಿ ಯಡಿಯೂರಪ್ಪನವರು ಸರ್ಕಾರದ ಗಮನ ಸೆಳೆಯಬೇಕು. ಕೇಂದ್ರ ಸರ್ಕಾರದ ಅನುದಾನ ತರುವ ಪ್ರಯತ್ನ ಮಾಡಬೇಕು.ಆದರೆ, ಕಾಂಗ್ರೆಸ್ ಶಾಸಕರನ್ನು ಕೂಡಿಟ್ಟುಕೊಂಡು ಅವರಿಂದ ರಾಜೀನಾಮೆ ಕೊಡಿಸುವ ಪ್ರಯತ್ನಕ್ಕೆ ಮುಂದಾಗುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಕೊಲೆ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

          ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್‍ಬಿಜೆಪಿಯ ಕುತಂತ್ರಕ್ಕೆ ನಾವಿಂದು ಪ್ರತಿಭಟನೆ ಮಾಡುತ್ತಿದ್ದೇವೆ. ಬಿಜೆಪಿಯ ಕುದುರೆ ವ್ಯಾಪಾರದ ಸಂಚು ನಮ್ಮ ಮುಂದೆ ಯಶಸ್ಸು ಕಂಡಿಲ್ಲ.ಕಾಂಗ್ರೆಸ್ ಶಾಸಕರಿಗೆ ಕೋಟಿ ಕೋಟಿ ಹಣ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

          ಆಪರೇಷನ್ ಕಮಲದ ಹೆಸರಿನಲ್ಲಿ ಈ ಹಿಂದೆ ಯಡಿಯೂರಪ್ಪ ಶಾಸಕರನ್ನು ಖರೀದಿ ಮಾಡಿದ್ದರು.ಈಗ ಅದೇ ರೀತಿ ಶಾಸಕರ ಖರೀದಿಗೆ ಮುಂದಾಗಿದ್ದಾರೆ.ಸಂಕ್ರಾಂತಿ ಹಬ್ಬ ಆಚರಿಸುವ ಬದಲು, ಶಾಸಕರ ಖದೀದಿಯಲ್ಲಿ ಬಿಜೆಪಿ ಮುಂದಾಗಿದೆ.ಮಾಧ್ಯಮದವರು ವಿಕೆಟ್ ಪತನ ಎಂಬಂತೆ ಹೇಳುತ್ತಿದ್ದಾರೆ.ಆದರೆ, ನಮ್ಮ ಪಕ್ಷದ ಶಾಸಕರು ಶಿಸ್ತು ಇಟ್ಟುಕೊಂಡು, ಪಕ್ಷ ದಲ್ಲೇ ಇರುವುದಾಗಿ ತಿಳಿಸಿದ್ದಾರೆ ಎಂದರು.

          ಹಬ್ಬದ ಸಮಯದಲ್ಲಿ ಬಿಜೆಪಿ ನಾಯಕರು ರೆಸಾರ್ಟ್ ರಾಜಕೀಯ ಮಾಡಿದ್ದಾರೆ. ರೆಸಾರ್ಟ್‍ನಲ್ಲಿ ಕುಂತು ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದರು ಕಾಂಗ್ರೆಸ್ ಶಾಸಕರನ್ನು ಖರಿದಿಗೆ ಬಿಜೆಪಿ ಮುಂದಾಗಿತ್ತು. ಇಬ್ಬರೂ ಪಕ್ಷೇತರ ಅಭ್ಯರ್ಥಿಗಳನ್ನು ಬಿಜೆಪಿ ಖರೀದಿ ಮಾಡಿದೆ. ಇಷ್ಟು ಹಣ ಬಿಜೆಪಿ ಹತ್ತಿರ ಎಲ್ಲಿಂದ ಬರುತಿದೆ ಎಂದು ಪ್ರಶ್ನಿಸಿದರು

          ಈ ಹಿಂದಿನ ಲೋಕಾಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರು, ಕಪ್ಪು ಕಣ, ಅಚ್ಚೇದಿನ್ ಬರುತ್ತೇ ಎಂದೆಲ್ಲಾ ಹೇಳಿದ್ದರು.ಆದರೆ, ಇವೆಲ್ಲಾ ಭರವಸೆ ಆಗಿಯೇ ಉಳಿದಿದ್ದು, ಯಾವುದು ಸಹ ಇದುವರೆಗೂ ಜನರಿಗೆ ತಲುಪಿಲ್ಲ ಎಂದು ಕಿಡಿಕಾರಿದರು.

ನಿರಂತರ ಪ್ರಯತ್ನ

       ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಬಿಜೆಪಿ ಜನ ವಿರೋಧಿ ಪಕ್ಷ.ಸಮ್ಮಿಶ್ರ ಸರ್ಕಾರವನ್ನ ಉರಳಿಸುವ ಪ್ರಯತ್ನ ಮಾಡುತ್ತಿದೆ.
ಕೇಂದ್ರ, ರಾಜ್ಯದ ಬಿಜೆಪಿ ಮುಖಂಡರು ಸಮ್ಮಿಶ್ರ ಸರ್ಕಾರವನ್ನು ಉರಳಿಸುವ ನಿರಂತರ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು .

       ಎಲ್ಲರೂ ಸಂಚು ಮಾಡಿ ನಮ್ಮ ಸರ್ಕಾರವನ್ನು ಅಸ್ಥಿರ ಮಾಡಲು ಮುಂದಾಗಿದ್ದರು.ಆದರೆ, ಅದು ಸಾಧ್ಯವಾಗಿಲ್ಲ ಎಂದ ಅವರು,
ಇಂದು ಕೋಮುವಾದಿ ಪಕ್ಷ ವನ್ನುಜನ ದೂರವಿಟ್ಟಿದ್ದಾರೆ.ಇನ್ನೂ, ಕೇಂದ್ರದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ

       ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಮಾತನಾಡಿ, ಯುದ್ಧ ವಿಮಾನ ರಫೆಲ್ ಹಗರಣದಿಂದ ಬಂದ 30 ಸಾವಿರ ಕೋಟಿವನ್ನು ಹೇಗೆ ಖರ್ಚು ಮಾಡಬೇಕು ಎನ್ನುವುದನ್ನು ತೋಚದೆ ಕಾಂಗ್ರೆಸ್ಸಿಗರನ್ನು ಸೆಳೆಯುವ ಯತ್ನ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು

 ಶಾ ನಕಲಿ ಚಾಣಕ್ಯ

        ರಾಜ್ಯ ಮೈತ್ರಿ ಸರ್ಕಾರ ಕೆಡವಿ, ಗೊಂದಲ ಸೃಷ್ಟಿಸಲು ಮುಂದಾಗಿದ್ದ, ಕರ್ನಾಟಕ ಜನರಿಗೆ ಅಪಮಾನ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಹಂದಿ ಜ್ವರ ಬಂದಿದೆ.ಅಲ್ಲದೆ, ಆತ ಬೋಗಸ್ ನಕಲಿ ಚಾಣಕ್ಯ ಎಂದು ಲೇವಡಿ ಮಾಡಿದರು.

       ಸಚಿವ ಯು.ಟಿ.ಖಾದರ್ ಮಾತನಾಡಿ, ಜನಾದೇಶದ ಮೂಲಕ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರ ಕೆಡವಲು ಹೊಂಚು ಹಾಕುತ್ತಿರುವ ಬಿಜೆಪಿಗೆ ಮುಖಭಂಗ ಆಗಿದೆ ಎಂದು ಹೇಳಿದರು.

      ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದು ನಿಜ.ಆದರೆ, ಒಬ್ಬರು ಶಾಸಕರು ಬರಲ್ಲ. ಅಲ್ಲದೆ, ಬಿಬಿಎಂಪಿಯಲ್ಲಿ
ನಾಲ್ಕು ಕಾಪೆರ್ರೇಟ್ ಸದಸ್ಯ ಬೆಂಬಲ ಪಡೆಯಲು ಸಾಧ್ಯವಾಗಿಲ್ಲ.ಇನ್ನೂ ರಾಜ್ಯ ಗೆಲ್ಲಲು ಸಾಧ್ಯವೇ ಎಂದು ವ್ಯಂಗ್ಯವಾಡಿದರು.
ಪ್ರತಿಭಟನೆಯಲ್ಲಿ ಸಚಿವೆ ಜಯಮಲಾ, ಕಾಂಗ್ರೆಸ್ ಮುಖಂಡರಾದ ವಿ.ಆರ್.ಸುದರ್ಶನ, ಚಂದ್ರಶೇಖರ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರ ಸೂಟ್ ಕೇಸ್ ರಾಜಕಾರಣದ ಅಣಕು ಪ್ರದರ್ಶನ ಕೂಡ ನಡೆಯಿತು. ತಲೆಯ ಮೇಲೆ ಸೂಟ್ಕೇಸ್ ಹೊತ್ತುಕೊಂಡ ಕಾರ್ಯಕರ್ತರೊಬ್ಬರು ಬಿಜೆಪಿಯನ್ನು ಹಣ ಕೇಳಿದರೆ ಮತ್ತೆ ಕೆಲವರು ಜೀಪ್ ಮೇಲೆ ಬಿಜೆಪಿ ನಾಯಕರ ಮುಖವಾಡ ಧರಿಸಿ ಸೂಟ್ಕೇಸ್ ಹಿಡಿದುಕೊಂಡು ತರುವ ಮೂಲಕ ಬಿಜೆಪಿಯ ಆಪರೇಷನ್ ಕಮಲವನ್ನು ಖಂಡಿಸಿದರು. ಬೆಂಗಳೂರು ಮೂರು ಲೋಕಸಭಾ ಕ್ಷೇತ್ರಗಳು ಮುಖಂಡರು, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap