ಬೆಂಗಳೂರು
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಂದಿದುರ್ಗದ ಖುದ್ದೂಸ್‌ಸಾಬ್ ಈದ್ಗಾ ಮೈದಾನಲ್ಲಿ ಸೋಮವಾರ ನಡೆದ ಬೃಹತ್ ಸಮಾವೇಶದ ಹಿನ್ನಲೆಯಲ್ಲಿ ಉತ್ತರ,ಪೂರ್ವ ವಿಭಾಗದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.
ಬೃಹತ್ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ್‍ಯಾಲಿ ಮತ್ತು ಕಾಲ್ನಡಿಗೆ ಮೂಲಕ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಬಂದಿದ್ದರಿಂದ ನಂದಿದುರ್ಗ,ಜಯಮಹಲ್,ಜೆಸಿ ನಗರ,ಆರ್‌ಟಿನಗರ,ಹೆಬ್ಬಾಳ,ಪುಲಕೇಶಿನಗರ ಬಾಣಸವಾಡಿ ಇನ್ನಿತರ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ನಿಗಧಿತ ವೇಳೆ ಕಚೇರಿ ಕೆಲಸಗಳಿಗೆ ತೆರಳುವವರು ಪರದಾಡಿದರು.
ನಗರದ ನಾಲ್ಕು ದಿಕ್ಕುಗಳಿಂದ ಮೆರವಣಿಗೆ ಸಾಗಿದ್ದರಿಂದ ಗೀತಾ ಜಂಕ್ಷನ್, ಸೌತ್‌ಎಂಡ್ ಸರ್ಕಲ್,ಮಿನರ್ವ ಸರ್ಕಲ್- ಟೌನ್‌ಹಾಲ್- ಮೈಸೂರು ಬ್ಯಾಂಕ್ ಸರ್ಕಲ್ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.ಚಿಕ್ಕಬಾಣಾವರ-ಬಾಗಲಗುಂಟೆ-ಗೊರಗುಂಟೆಪಾಳ್ಯ-ಯಶವಂತಪುರ ಸರ್ಕಲ್-ಕಾವೇರಿ ಥಿಯೇಟರ್-ಜಯಮಹಲ್ ಮೂಲಕ ಮೆರವಣಿಗೆ ಸಾಗಿದ್ದರಿಂದ ಈ ರಸ್ತೆಗಳಲ್ಲೂ ಬೆಳಿಗ್ಗೆ ಟ್ರಾಫಿಕ್ ಕಿರಿಕಿರಿ ಉಂಟಾಗಿತ್ತು.
ಲಗ್ಗೆರೆ-ರಾಜಾಜಿನಗರ- ನವರಂಗ- ರೇಸ್‌ಕೋರ್ಸ್-ಮೇಖ್ರಿ ವೃತ್ತ- ಜಯಮಹಲ್ ಮತ್ತೊಂದು ಮೆರವಣಿಗೆ ಬರಲಿದೆ. ನಾಗವಾರ-ಥಣಿಸಂದ್ರ ಮಾರ್ಗ, ಬಾಣಸವಾಡಿ, ಕೆ ಆರ್ ಪುರಂ,ಇಂದಿರಾನಗರ, ಜೆಬಿ ನಗರ,ಹಳೆವಿಮಾನ ನಿಲ್ದಾಣ ರಸ್ತೆ, ಹಲಸೂರು ಮಾರ್ಗ, ಹಿಸೂರು, ಬನ್ನೇರುಘಟ್ಟ ಮೂಲಕವೂ ರ್‍ಯಾಲಿ ನಡೆದಿದ್ದು ಇಲ್ಲೂ ಕೂಡ ಕೆಲ ಕಾಲ ರಸ್ತೆ ಸಂಚಾರ ಅಸ್ಥವ್ಯಸ್ಥಗೊಂಡಿದ್ದು ವಾಹನ ಸವಾರರು ಪರದಾಡುವಂತಾಗಿತ್ತು.
ಹೆಚ್ಚಿನ ಸಂಚಾರ ಪೊಲೀಸರನ್ನು ನಿಯೋಜಿಸಿ ಟ್ರಾಫಿಕ್ ಜಾಮ್ ತೆರವುಗೊಳಿಸಲು ಸುಗಮ ಸಂಚಾರಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಸಂಚಾರ ದಟ್ಟಣೆ ಕಿರಿಕಿರಿ ಮಾತ್ರ ವಾಹನ ಸವಾರರಿಗೆ ತಪ್ಪಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
