ಬೆಂಗಳೂರು
ನಗರದಲ್ಲಿ ನಿರ್ಮಿಸಲಿರುವ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ವಿರೋಧಿಸಿ 50ಕ್ಕೂ ಅಧಿಕ ನಾಗರಿಕ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಈ ಯೋಜನೆಯನ್ನು ರದ್ದುಗೊಳಿಸ ಬೇಕು. ಇಲ್ಲದಿದ್ದರೆ, ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದರು.
ಬಿಎಂಟಿಸಿಯ 6,300 ಬಸ್‍ಗಳು ಕೇವಲ ಶೇ 0.5ರಷ್ಟು ರಸ್ತೆಯ ಜಾಗವನ್ನು ಅಕ್ರಮಿಸಿಕೊಳ್ಳುತ್ತವೆ. ಕಾರುಗಳು ಬಸ್‍ನ ಎರಡು ಸಾವಿರ ಪಟ್ಟು ಹೆಚ್ಚು ಜಾಗವನ್ನು ಅಕ್ರಮಿಸಿಕೊಳ್ಳುತ್ತವೆ. ಸಾರ್ವಜನಿಕ ಸಾರಿಗೆಯನ್ನು ಉತ್ತಮಪಡಿಸುವುದು ಬಿಟ್ಟು ಕಾರಿನವರಿಗೆ ದಾರಿ ಮಾಡಲು ಸರ್ಕಾರ ಹೊರಟಿದೆ ಎಂದು ಪ್ರತಿಭಟನಾಕಾರರು ದೂರಿದರು.
ಎಲಿವೇಟೆಡ್ ಕಾರಿಡಾರ್ ಯೋಜನೆಯಿಂದ ನಗರದ ಕಬ್ಬನ್ ಉದ್ಯಾನಕ್ಕೆ ಹಾನಿಯಾಗಲಿದೆ. ಇದು ಕರ್ನಾಟಕದ ಉದ್ಯಾನ, ಆಟದ ಮೈದಾನ ಮತ್ತು ಮುಕ್ತ ಜಾಗಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಯೋಜನೆಗೆ ಸಂಬಂಧಿಸಿದ ಟೆಂಡರ್ ರದ್ದುಪಡಿಸಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹ ಮಾಡಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಿಂದೆ ಒಳ್ಳೆಯ ಕೆಲಸ ಮಾಡಿದ್ದರು. ಆದರೆ ಇಂದು ಅವರಿಗೆ ಎಲಿವೇಟೆಡ್ ಕಾರಿಡಾರ್ ವ್ಯಸನ ಶುರುವಾಗಿದೆ. ಹಿಂದಿನ ಸರ್ಕಾರ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮುಂದಾದಾಗ ಅವರನ್ನು ಭೇಟಿ ಮಾಡಿದ್ದೆವು. ಅಂದಿನ ಸರ್ಕಾರದ ಕ್ರಮವನ್ನು ಟೀಕಿಸಿದ್ದರು. ಸದ್ಯ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಆಸಕ್ತಿ ವಹಿಸಿರುವುದು ದುರಂತ ಎಂದು ಟೀಕಿಸಿದರು.
ಎನ್ವಿರಾನ್‍ಮೆಂಟ್ ಸಪೋರ್ಟ್ ಗ್ರೂಪ್‍ನ (ಇಎಸ್‍ಜಿ) ಲಿಯೊ ಸಲ್ದಾನ, ಆರ್.ಕೆ.ಮಿಶ್ರಾ ಎಂಬಾತ ದಿಢೀರ್ ಯೋಜನೆಯ ನೀಲನಕ್ಷೆಯನ್ನು ತೆಗೆದುಕೊಂಡು ಹೋಗಿ ಉಪಮುಖ್ಯಮಂತ್ರಿಯವರ ಮುಂದೆಯಿಟ್ಟ ಕ್ಷಣದಲ್ಲಿ ಹೈಪವರ್ ಸಮಿತಿಯ ಒಪ್ಪಿಗೆ ಇಲ್ಲದೆ. ಬಹುಕೋಟಿ ಯೋಜನೆ ಜಾರಿಗೆ ಮುಂದಾಗಿರುವುದು ಸರಿಯಿಲ್ಲ ಎಂದು ನಟ, ಹೋರಾಟಗಾರ ಪ್ರಕಾಶ್ ಬೆಳವಾಡಿ ದೂರಿದರು.
ಪತ್ರ ಚಳುವಳಿ…!
ಸಿಟಿಜನ್ಸ್ ಫಾರ್ ಬೆಂಗಳೂರು ಸಂಸ್ಥೆ ಪತ್ರ ಚಳವಳಿ ಶುರು ಮಾಡಿದ್ದು, 50,000 ಪತ್ರಗಳನ್ನ ಸಿಎಂಗೆ ತಲುಪಿಸಲಾಗಿದೆ.ಇಷ್ಟು ದೊಡ್ಡ ಎಲಿವೇಟೆಡ್ ಕಾರಿಡಾರ್ ಯೋಜನೆ ಮಾಡೋಕೆ ಹೊರಟಿರೋದು ಜನರ ತೆರಿಗೆ ದುಡ್ಡಲ್ಲಿ. ಜನರ ದುಡ್ಡು ಬೇಕು, ಜನರ ಅಭಿಪ್ರಾಯ ಮಾತ್ರ ಬೇಡ್ವಾ ಅಂತ ಸಿಟಿಜನ್ ಫಾರ್ ಬೆಂಗಳೂರು ಸಂಸ್ಥೆಯ ಪ್ರತಿನಿಧಿಗಳು ಪ್ರಶ್ನೆ ಮಾಡಿದ್ದಾರೆ.ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರ ವಿರುದ್ಧ ಪ್ರತಿಭಟನಾಕಾರರು, ರೇವಣ್ಣ ಎಲಿವೇಟೆಡ್ ಕಾರಿಡಾರ್ ಬೇಡಣ್ಣ ಘೋಷಣೆಯ ಫಲಕ ಪ್ರದರ್ಶನ ಮಾಡಿ ಆಕ್ರೋಶ ಹೊರ ಹಾಕಿದರು.
ಸಹಿ ಸಂಗ್ರಹ…!
ವಿವಾದಿತ ಎಲಿವೇಟೆಡ್ ಕಾರಿಡಾರ್ ಯೋಜನೆಯು ನಗರದ ಹಸಿರು ನಾಶ ಮಾಡುವುದನ್ನು ವಿರೋಧಿಸಿ ನಡೆಸಿದ ಆನ್‍ಲೈನ್ ಅಭಿಯಾನದಲ್ಲಿ ಒಂದು ಲಕ್ಷದಷ್ಟು ಸಹಿ ಸಂಗ್ರಹ ನಡೆದಿದೆ.ಟೆಂಡರು ರದ್ದು ಮಾಡಿ ಅಭಿಯಾನಕ್ಕೂ ಸಾವಿರಾರು ನಾಗರೀಕರು ಕೈ ಜೋಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
