ಚಿತ್ರದುರ್ಗ:
ಬಲವಂತವಾಗಿ ಹಿಂದಿ ಭಾಷೆಯನ್ನು ಹೇರಿದರೆ ಮತ್ತೊಮ್ಮೆ ಗೋಕಾಕ್ ಚಳುವಳಿಯಾದೀತೆಂದು ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಗಾಂಧಿವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಹಿಂದಿ ಭಾಷೆಯುಳ್ಳ ಕಾರ್ಡ್‍ಗಳನ್ನು ದಹಿಸಿದರು.ಸೆ.14 ನ್ನು ಕೇಂದ್ರ ಸರ್ಕಾರ ಹಿಂದಿ ದಿನವನ್ನಾಗಿ ಆಚರಿಸುವ ಬದಲು ಭಾರತದ ಭಾಷಾ ಸಮಾನತೆಯ ದಿನವನ್ನಾಗಿ ಆಚರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿ ಕೇಂದ್ರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಕರ್ನಾಟಕದ ಪ್ರತಿಯೊಂದು ರಂಗದಲ್ಲಿಯೂ ರಾಷ್ಟ್ರ ಭಾಷೆ ಹೆಸರಿನಲ್ಲಿ ಹಿಂದಿಯನ್ನು ಬಲವಂತವಾಗಿ ಕೇಂದ್ರ ಸರ್ಕಾರ ಹೇರುತ್ತಿದೆ. ಒಕ್ಕೂಟ ರಾಜ್ಯಗಳು ಕಟ್ಟುವ ತೆರಿಗೆ ರೂಪದ ಸಾವಿರಾರು ಕೋಟಿ ರೂ.ಹಣದಲ್ಲಿ ಸಿಂಹಪಾಲು ಹಣವನ್ನು ಕೇವಲ ಹಿಂದಿಗೆ ನೀಡಿ ಉಳಿದ ಪ್ರಾದೇಶಿಕ ಭಾಷೆಗಳನ್ನು ಕೀಳಾಗಿ ಕಾಣುತ್ತಿರುವುದನ್ನು ಸಹಿಸಲು ಆಗುವುದಿಲ್ಲ. ಒಂದು ವೇಳೆ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಹೇರಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಒಕ್ಕೂಟ ಭಾರತದಲ್ಲಿ ಒಂದೊಂದು ರಾಜ್ಯವೂ ತನ್ನದೆ ಆದ ಭಾಷೆ ಮತ್ತು ಸಂಸ್ಕತಿಯನ್ನು ಹೊಂದಿದೆ. ಹಿಂದಿ ಭಾಷೆಗಿಂತಲೂ ಪುರಾತನ ಹಾಗೂ ಪ್ರಾಚೀನ ಭಾಷೆಗಳ ಇತಿಹಾಸ ಹಲವು ರಾಜ್ಯಗಳಿಗಿದೆ. ಕೇಂದ್ರ ಸರ್ಕಾರದ ಸಂಪರ್ಕ ಭಾಷೆಯಾದ ಮಾತ್ರಕ್ಕೆ ಹಿಂದಿಗೆ ರಾಷ್ಟ್ರೀಯ ಮಾನ್ಯತೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕನ್ನಡ ವಿರೋಧಿ ನೀತಿ ಕ್ರಮ ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ನಗರಾಧ್ಯಕ್ಷ ಎಂ.ತಿಪ್ಪೇಸ್ವಾಮಿ, ಮಹಿಳಾಧ್ಯಕ್ಷೆ ವೀಣಗೌರಣ್ಣ, ಬಿ.ಅನೀಲ್, ಶಿವುಗೂಳಿ, ಹನುಮಂತರಾಯ ಚೌಳೂರು, ಚರಣ್, ರಘು, ಜನಾರ್ಧನ್, ಮಲ್ಲಿಕಾರ್ಜುನ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ