ಕೊರಟಗೆರೆ
ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿ, ಚುನಾವಣೆಯಲ್ಲಿ ರೈತರ ಹೆಸರಿನಿಂದ ಗೆದ್ದಿರುವ ಪ್ರಧಾನಿ ನರೇಂದ್ರ ಮೋದಿ ಮುಕ್ತ ಆಮದು ಒಪ್ಪಂದ ಜಾರಿಗೆ ತರುವ ಯೋಜನೆ ರೂಪಿಸಿ ರೈತರ ಆರ್ಥಿಕ ಶಕ್ತಿಯನ್ನು ಕುಗ್ಗಿಸುತ್ತಿದ್ದಾರೆ ಎಂದು ಆರೋಪಿಸಿ ಸಾವಿರಾರು ರೈತರು ಕಂದಾಯ ಇಲಾಖೆಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮುಕ್ತ ಆಮದು ಒಪ್ಪಂದಕ್ಕೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇರಿಸಿ ಕರ್ನಾಟಕ ರಾಜ್ಯದ ಕೋಟ್ಯಂತರ ರೈತರಿಗೆ ಅನ್ಯಾಯ ಮಾಡಿದರೆ, ಕೇಂದ್ರ ಸರಕಾರದ ವಿರುದ್ದ ತುಮಕೂರು, ಬೆಂಗಳೂರು ಮತ್ತು ದೆಹಲಿನಲ್ಲಿ ಪ್ರತಿಭಟನೆಯ ಮೂಲಕ ರೈತರ ಒಗ್ಗಟ್ಟು ಮತ್ತು ಶಕ್ತಿಯನ್ನು ತೋರಿಸುತ್ತೇವೆ ಎಂದು ಪ್ರಧಾನಿ ಮೋದಿಯವರಿಗೆ ಎಚ್ಚರಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಈಶ್ವರಯ್ಯ ಮಾತನಾಡಿ, ರಾಜ್ಯದ 14 ಒಕ್ಕೂಟಗಳಿಂದ ಪ್ರತಿದಿನ 85 ಲಕ್ಷ ಲೀಟರ್ ಹಾಲು ಶೇಖರಣೆಯಾಗಿ, ಕೆಎಂಎಫ್ ಮಾರುಕಟ್ಟೆಯ ಮೂಲಕ ರಾಷ್ಟ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸರಬರಾಜು ಆಗುತ್ತಿದೆ. ರಾಜ್ಯದ ಕೊಟ್ಯಂತರ ರೈತ ಕುಟುಂಬ ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದಾರೆ. ದೇಶದ ಆರ್ಥಿಕ ಪ್ರಗತಿಗೆ ರೈತನ ಪಾತ್ರವು ಬಹಳಷ್ಟಿದೆ ಎಂದು ತಿಳಿಸಿದರು.
ಕರ್ನಾಟಕದಿಂದ ಆಯ್ಕೆಯಾದ ಸಂಸದರಿಗೆ ನರೇಂದ್ರ ಮೋದಿಯನ್ನು ಪ್ರಶ್ನಿಸುವ ಶಕ್ತಿಯಿಲ್ಲವೆ? ರೈತ ವಿರೋಧಿ ನೀತಿಯನ್ನು ಪಕ್ಷಾತೀತವಾಗಿ ರಾಜಕೀಯ ಮುಖಂಡರು ಖಂಡಿಸಬೇಕು. ಕೊರಟಗೆರೆ ಕ್ಷೇತ್ರದ 126 ಸಹಕಾರ ಸಂಘದ ರೈತರ ಶಕ್ತಿಯನ್ನು ಇಂದು ಪ್ರತಿಯೊಬ್ಬರು ನೋಡಿದ್ದಾರೆ. ಕರುನಾಡಿನ ರೈತರಲ್ಲಿ ಒಗ್ಗಟ್ಟಿನ ಬಲವಿದೆ. ನಮ್ಮ ರೈತರ ಅನ್ನಕ್ಕೆ ಕೈ ಹಾಕಿದರೆ ಅದರ ಪರಿಣಾಮ ಎದುರಿಸಲು ಸಹ ಸಿದ್ದರಾಗಬೇಕು ಎಂದು ಎಚ್ಚರಿಕೆ ನೀಡಿದರು.
ಹೊಸಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, ಪಶು ಸಂಗೋಪನೆಯಿಂದ ಲಕ್ಷಾಂತರ ಕುಟುಂಬಗಳು ಜೀವನ ಮಾಡುತ್ತಿವೆ. ನಮ್ಮ ದೇಶದ ರೈತರು ಉತ್ಪಾದನೆ ಮಾಡುವ ಸ್ವದೇಶಿ ಉತ್ಪನ್ನಗಳ ಪೂರೈಕೆ ಮತ್ತು ಬಳಕೆಗಾಗಿ ಕ್ರಮ ಕೈಗೊಳ್ಳಬೇಕಾದ ಕೇಂದ್ರ ಸರಕಾರವು, ವಿದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವ ಆಮದು ಯೋಜನೆಗೆ ರೈತರ ವಿರೋಧವಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪಟ್ಟಣದ ಸರಕಾರಿ ಬಸ್ ನಿಲ್ದಾಣದಿಂದ ಪ್ರಾರಂಭವಾದ ಪ್ರತಿಭಟನೆಯಲ್ಲಿ ಭಾಗವಹಿಸಿದ 3 ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕ ರೈತರು ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಪಟ್ಟಣ ಪಂಚಾಯಿತಿ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಂದಾಯ ಇಲಾಖೆಗೆ ಮುತ್ತಿಗೆ ಹಾಕಿ ತಹಸೀಲ್ದಾರ್ ಗೋವಿಂದರಾಜು ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶ್ರೀನಿವಾಸ್, ಹನುಮಂತರಾಜು, ರಾಜಣ್ಣ, ಶಿವಣ್ಣ, ಕಾವಲಪ್ಪ, ಅಂಬಿಕಾ, ರಂಗನಾಥ, ಗೀತಾ, ನರಸಿಂಹಮೂರ್ತಿ, ಕಲ್ಲೇಶಪ್ಪ, ದೊಡ್ಡಯ್ಯ, ಶ್ರೀನಿವಾಸ, ಮಂಜುನಾಥ, ಲಕ್ಷ್ಮೀಶ್, ರಂಗಧಾಮಯ್ಯ, ವಸಂತರಾಜು, ರಂಜಿತ್, ಚಿನ್ನಪ್ಪರೆಡ್ಡಿ, ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ