ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ

ತುಮಕೂರು

    ಪ್ರಗತಿಪರ, ರೈತರಪರ, ಕಾರ್ಮಿಕರಪರ ಇರುವ ಕಾಯಿದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವ ಸರ್ಕಾರದ ಕ್ರಮ ವಿರೋಧಿಸಿ, ತಿದ್ದುಪಡಿ ವಾಪಾಸ್ ಪಡೆಯಲು ಒತ್ತಾಯಿಸಿ, ಗುರುವಾರ (ಆ.20) ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜಿಲ್ಲಾ ಜೆಡಿಎಸ್‍ನಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

     ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಶಾಸಕ ಡಿ.ಸಿ.ಗೌರಿಶಂಕರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರು, ಕಾರ್ಮಿಕರಿಗೆ ಮಾರಕವಾಗಿರುವ ಕಾಯಿದೆಯ ತಿದ್ದುಪಡಿಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್.ಡ.ಕುಮಾರಸ್ವಾಮಿ ನೇತೃತ್ವದಲ್ಲಿ ಸದನದಲ್ಲೂ ಜೆಡಿಎಸ್ ಶಾಸಕರು ಹೋರಾಟ ಮಾಡುವರು ಎಂದು ಹೇಳಿದರು.

     ಕರ್ನಾಟಕ ಭೂಸುಧಾರಣೆ ಕಾಯಿದೆ 1961, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯಿದೆ ಹಾಗೂ ಕಾರ್ಮಿಕ ಕಾಯಿದೆಗಳಿಗೆ ಸುಗ್ರೀವಾಜ್ಞೆ ಮೂಲಕ ಸರ್ಕಾರ ತಿದ್ದುಪಡಿ ತಂದು ಈ ವರ್ಗಗಳಿಗೆ ಮರಣ ಶಾಸನ ಬರೆಯಲು ಹೊರಟಿದೆ. ಅಧಿವೇಶನದಲ್ಲಿ ಚರ್ಚೆ ಮಾಡದೆ, ಪ್ರತಿಪಕ್ಷಗಳ ಅಭಿಪ್ರಾಯ ಗಣನೆಗೆ ತೆಗೆದುಕೊಳ್ಳದೆ, ರೈತ ಮುಖಂಡರ ಸಭೆ ಕರೆದು ಚರ್ಚಿಸದೆ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯಿದೆಗೆ ತಿದ್ದಪಡಿ ತಂದಿರುವುದು ರಾಜ್ಯ ಬಿಜೆಪಿ ಸರ್ಕಾರದ ರೈತರ ಹಿತ ಕಾಪಾಡುವುದಾಗಿ ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ರೈತರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.
ಭೂಸುಧಾರಣೆ ಕಾಯಿದೆ ತಿದ್ದುಪಡಿ, ಕಾರ್ಮಿಕ ಕಾಯಿದೆ ತಿದ್ದುಪಡಿ, ಎಪಿಎಂಸಿ ಕಾಯಿದೆ ತಿದ್ದುಪಡಿ ವಿರುದ್ಧ ಈಗಾಗಲೇ ರಾಜ್ಯದ್ಯಂತ ರೈತರು, ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ಕಾಯಿದೆಗಳ ಮಾರಕ ತಿದ್ದುಪಡಿಯನ್ನು ವಾಪಾಸ್ ಪಡೆಯಬೇಕು ಎಂದು ಶಾಸಕ ಗೌರಿಶಂಕರ್ ಒತ್ತಾಯಿಸಿದರು.

     ಇತ್ತೀಚೆಗೆ ಅಗಲಿದ ಶಿರಾ ಶಾಸಕ ಬಿ.ಸತ್ಯನಾರಾಯಣ ಅವರಿಗೆ ಗುರುವಾರ ಬೆಳಿಗ್ಗೆ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಮತ್ತಿತರ ಮುಖಂಡರು ಭಾಗವಹಿಸುವರು. ನಂತರ, ಜಿಲ್ಲಾಧಿಕಾರಿಗಳ ಕಚೇರಿವರೆಗೆ ದೇವೇಗೌಡರ ಮುಂದಾಳತ್ವದಲ್ಲಿ ಪಾದಯಾತ್ರೆ ತೆರಳಿ ಅಲ್ಲಿ, ವಿವಿಧ ಕಾಯಿದೆಗಳಿಗೆ ತಂದಿರುವ ಮಾರಕ ತಿದ್ದುಪಡಿ ವಾಪಸ್ ಪಡೆಯಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಈ ವೇಳೆ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು. ಮನವಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಮಧ್ಯಾಹ್ನ 12.30ರಿಂದ 1.30ರವರೆಗೆ ಸಮಯ ನೀಡಿದ್ದಾರೆ ಎಂದು ಗೌರಿಶಂಕರ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap