ದಾವಣಗೆರೆ :
ವಿಧವೆಯರ ಮಾಶಾಸನವು ಯಾವ ಕಾಂಗ್ರೆಸ್ಸಿನ ವಿಧವೆಯ ಖಾತೆಗೆ ಹೋಗಿದೆ ಎಂಬುದಾಗಿ ಹೇಳುವ ಮೂಲಕ, ದೇಶದ ವಿಧವೆಯರನ್ನು ಅಪಮಾನಿಸಿರುವ ಪ್ರಧಾನಿ ನರೇಂದ್ರ ಮೋದಿಯ ಹೇಳಿಕೆ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ದೇಶದ ಅತ್ಯುನ್ನತ ಗೌರವ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ವಿಧವೆಯರ ಮಾಶಾಸನವು ಯಾವ ಕಾಂಗ್ರೆಸ್ಸಿನ ವಿಧವೆಯ ಖಾತೆಗೆ ಹೋಗಿದೆ ಎಂಬುದಾಗಿ ಹೇಳಿಕೆ ನೀಡುವ ಮೂಲಕ ಇಡೀ ದೇಶದ ವಿಧವಾ ಮಹಿಳೆಯರ ಮನಸ್ಸಿಗೆ ನೋವುಂಟು ಮಾಡಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವ ಮಹಿಳೆಯೂ ಸಹ ವಿಧವೆಯಾಗಲು ಬಯಸುವುದಿಲ್ಲ. ಆದರೆ, ವಿಧಿಯಾಟಕ್ಕೆ ಯಾರೂ ಸಹ ಹೊಣೆಗಾರರಲ್ಲ. ಕಾಂಗ್ರೆಸ್‍ನ ಅಧಿನಾಯಕಿ ಸೋನಿಯಾ ಗಾಂಧಿ ಅವರ ಪತಿ, ದಿವವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು 1991ರಲ್ಲಿ ಜನರ ಮಧ್ಯೆಯೇ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಆದರೂ, ಎದೆಗುಂದದ ಸೋನಿಯಾ ಗಾಂಧಿಯವರು ಧೈರ್ಯದಿಂದ ಮುಂದೆ ಬಂದು, ದೇಶದ ಒಳಿತಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹವರ ಬಗ್ಗೆ ವಿಧವೆ ಎಂಬುದಾಗಿ ಜರಿದು ದೇಶದ ವಿಧವೆಯರಿಗೆ ಅಪಮಾನ ಮಾಡಿರುವ ನರೇಂದ್ರ ಮೋದಿ ತಕ್ಷಣವೇ ತಮ್ಮ ಹೇಳಿಕೆಯನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.
ವಿಜಯೋತ್ಸವ:
ಇದೇ ಸಂದರ್ಭದಲ್ಲಿ ಮಂಗಳವಾರ ಹೊರ ಬಿದ್ದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೈಯದ್ ಖಾಲೀದ್ ಅಹ್ಮದ್, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್, ಶಿವರಾಂ, ರಾಜ್ಯ ಯುವ ಕಾಂಗ್ರೆಸ್ ವಕ್ತಾರ ಮೈನುದ್ದೀನ್ ಹೆಚ್.ಜೆ, ನಾಗರಾಜ್, ಪ್ರವೀಣ್, ಸದ್ದಾಂ, ಚಂದ್ರು, ಸೈಯದ್, ಮುಸ್ತಾಫ, ಜಮೀರಾಬಿ, ಜಬೀವುಲ್ಲಾ, ಸುಭಾನ್, ನದೀಮ್, ಸಂತೋಷ್, ಸಾಧಿಕ್ ಖಾನ್, ಮಧುಗೌಡ, ಸಮೀ, ಜಮೀರ್, ನಂಜಾ ನಾಯ್ಕ, ರಿಯಾಜ್, ಜಾಬೀರ್, ಗೋವಿಂದ್, ಜಯಪ್ರಕಾಶ್ ಮತ್ತಿತರರು ಹಾಜರಿದ್ದರು.