ಟ್ರಾಯ್ ಹೊಸ ಎಂಆರ್‍ಪಿ ದರ ರದ್ದತಿಗೆ ಆಗ್ರಹ

ದಾವಣಗೆರೆ:

         ಕೇಬಲ್ ಟಿವಿ ಪ್ರಸಾರಕ್ಕೆ ಕೇಂದ್ರ ಸರ್ಕಾರ ಮತ್ತು ಟ್ರಾಯ್ ಆದೇಶಾನುಸಾರ ಡಿ.29ರಿಂದ ಜಾರಿಗೊಳ್ಳುತ್ತಿರುವ ಎಂಆರ್‍ಪಿ ದರ ವಿರೋಧಿಸಿ, ಜಿಲ್ಲಾ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಕೇಬಲ್ ಆಪರೇಟರ್‍ಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

         ನಗರದ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕೇಬಲ್ ಆಪರೇಟರ್ಸ್‍ಗಳು, ಕೇಂದ್ರ ಸರ್ಕಾರ ಹಾಗೂ ಟ್ರಾಯ್ ವಿರುದ್ಧ ಘೋಷಣೆ ಕೂಗುತ್ತಾ ಡಿಸಿ ಕಚೆರಿಗೆ ತೆರಳಿ, ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮಾಯಕೊಂಡ ಎಲ್.ಜಿ.ಉಮಾಶಂಕರ್, ಕೇಂದ್ರ ಸರ್ಕಾರದ ಹೊಸ ಆದೇಶದನ್ವಯ ಜನವರಿಯಿಂದ ಗ್ರಾಹಕರು ಕೇಬಲ್ ಟಿವಿಯಲ್ಲಿ ತಮ್ಮ ಮೆಚ್ಚಿನ ಚಾನಲ್‍ಗಳನ್ನು ವೀಕ್ಷಿಸಲು ಈಗಿನ ದರಕ್ಕಿಂತ ಕನಿಷ್ಟ 5ರಿಂದ 10 ಪಟ್ಟು ಹೆಚ್ಚು ಹಣ ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆರೋಪಿಸಿದರು.  

           ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಡಿಸೆಂಬರ್ 29ರಿಂದ ಜಾರಿಗೆ ಬರುವಂತೆ ನೂತನವಾಗಿ ಚಾನಲ್ ಬೆಲೆ ನಿಗಧಿ ಪಡಿಸಿದೆ. 400ಕ್ಕೂ ಅಧಿಕ ಚಾನೆಲ್‍ಗಳನ್ನು ಹೊಂದಿದವರು 500ರಿಂದ 1,500 ರೂ.ವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ. ಟ್ರಾಯ್ ನಿರ್ದೇಶನದ ಪ್ರಕಾರ ಗ್ರಾಹಕರು ಉಚಿತ ಪ್ರಸಾರದ ವಾಹಿನಿಗಳನ್ನು ನೋಡಲು ತಿಂಗಳಿಗೆ ತೆರಿಗೆ ಸಹಿತ ಕನಿಷ್ಟ 154 ರೂ.ಗಳ ನಿಗಧಿತ ಶುಲ್ಕ ಪಾವತಿಸಬೇಕು. ಇದು ಗ್ರಾಹಕರಿಗೆ ಹೊರೆಯಾಗಲಿದ್ದು, ಕೂಡಲೇ ಟ್ರಾಯ್ ತನ್ನ ಆದೇಶ ಮರು ಪರಿಶೀಲಿಸಬೇಕೆಂದು ಆಗ್ರಹಿಸಿದರು.

         ಟ್ರಾಯ್ ಹೊಸ ಆದೇಶದಂತೆ ಪ್ರಸ್ತುತ ಪ್ರಸಾರಗೊಳ್ಳುತ್ತಿರುವ ಚಾನಲ್‍ಗಳಿಗೆ ಕನಿಷ್ಟ 700 ರೂ. ಹಣವನ್ನು ಗ್ರಾಹಕರು ನೀಡಬೇಕಾಗುತ್ತದೆ. ಸರ್ಕಾರಿ ಸ್ವಾಮ್ಯದ ಸುಮಾರು 20ಕ್ಕೂ ಹೆಚ್ಚು ಚಾನಲ್‍ಗಳ ಜೊತೆಗೆ ಉಚಿತ ಚಾನಲ್‍ಗಳಿಗೆ 130 ರೂ. ಹಾಗೂ ಶೇ.18ರಷ್ಟು ತೆರಿಗೆ ಸೇರಿ ಒಟ್ಟಾರೆ 154 ರೂ.ಗಳನ್ನು ಗ್ರಾಹಕರಿಂದ ಕಡ್ಡಾಯವಾಗಿ ವಸೂಲಿ ಮಾಡಬೇಕಿದೆ. ಇದರ ನಂತರ ಪೇ ಚಾನಲ್‍ಗಳಿಗೆ ಆಯ್ಕೆಗೆ ತಕ್ಕಂತೆ ಹಣ ನೀಡಬೇಕೆಂದು ಟ್ರಾಯ್ ಆದೇಶ ಮಾಡಿದೆ. ಈ ನಿಯಮ ಡಿಟಿಹೆಚ್‍ಗಳಿಗೂ ಸಹ ಅನ್ವಯವಾಗಲಿದೆ. ಟ್ರಾಯ್ ಹೊಸ ಕಾಯ್ದೆಯು ಕೇಬಲ್ ಆಪರೇಟರ್ ಹಾಗೂ ಗ್ರಾಹಕರಿಗೂ ಮಾರಕವಾಗಿದೆ. ಆದ್ದರಿಂದ ಈ ಆದೇಶವನ್ನು ತಕ್ಷಣವೇ ರದ್ದುಪಡಿಸಬೇಕೆಂದು ಆಗ್ರಹಿಸಿದರು.

        ಪ್ರತಿಭಟನೆಯಲ್ಲಿ ಅಸೋಸಿಯೇಷನ್ ಮುಖಂಡರಾದ ರುದ್ರಮುನಿ, ರಾಮಚಂದ್ರ, ಮಂಜುನಾಥ್ ಹದಡಿ, ಉಮಾಶಂಕರ್, ಸುನೀಲ್, ಬಾಬುರಾವ್, ತಿಪ್ಪೇಸ್ವಾಮಿ, ಕರಿಬಸಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link