ಕುಣಿಗಲ್ :
ತಾಲ್ಲೂಕಿನ ಹುಲಿಯೂರುದುರ್ಗ ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ಅವ್ಯವಹಾರ ನಡೆದಿದ್ದರೂ ಮೇಲ್ಮಟ್ಟದ ಅಧಿಕಾರಿಗಳು ಗಮನಹರಿಸದಿರುವುದು ವಿಪರ್ಯಾಸ. ಪಿ.ಡಿ.ಒರ ಸರ್ವಾಧಿಕಾರಿ ವರ್ತನೆ ಹಾಗೂ ಅವ್ಯವಹಾರವನ್ನು ಖಂಡಿಸಿ ಸ್ವತಃ ಗ್ರಾಮಪಂಚಾಯಿತಿಯ ಸದಸ್ಯರೇ ಪಂಚಾಯಿತಿಗೆ ಬೀಗ ಜಡಿದು ಪಿಡಿಒ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟಿಸಿದ ಘಟನೆ ನಡೆಯಿತು.
ಇಲ್ಲಿನ ಪಂಚಾಯಿತಿಗೆ 8 ವರ್ಷದ ಹಿಂದೆ ಕಾಲಿಟ್ಟ ಪಿಡಿಒ ವಿನಾಯಕ್ ಪಂಚಾಯಿತಿಗೆ ಆಯ್ಕೆ ಯಾಗಿ ಬಂದ ಜನಪ್ರತಿನಿಧಿಗಳಿಗೆ ಸ್ಪಂದಿಸದೆ ಬರೀ ಸಬೂಬು ಹೇಳುತ್ತ ಸರ್ವಾಧಿಕಾರಿಯಂತೆ ನಡೆದುಕೊಳ್ಳುವ ಮೂಲಕ ಇಲ್ಲಿನ 22 ಸದಸ್ಯರ ಪೈಕಿ 13ಕ್ಕೂ ಹೆಚ್ಚು ಜನ ಸದಸ್ಯರ ವಿರೋಧ ಕಟ್ಟಿಕೊಂಡು ಪಂಚಾಯಿತಿಗೆ ಬೇಕಾಬಿಟ್ಟಿ ಹೋಗುವ ಪರಿಪಾಠವನ್ನು ರೂಢಿಸಿಕೊಂಡು ಗ್ರಾಮಸ್ಥರ ಬೇಡಿಕೆಗೂ ಸ್ಪಂದಿಸದೆ ಇರುವುದರಿಂದ ಇಲ್ಲಿನ ಜನಸಾಮಾನ್ಯರಿಗೂ ಹಾಗೂ ಇಲ್ಲಿನ ಜನಪ್ರತಿನಿಧಿಗಳಿಗೂ ತಲೆಬಿಸಿಯಾಗಿದ್ದಾರೆ.
ಪಿಡಿಒನ ತೊಘಲಕ್ ದರ್ಬಾರ್ : 14ನೇ ಹನಕಾಸು ಯೋಜನೆಯ ಕ್ರಿಯಾ ಯೋಜನೆ ಮಾಡದೆ 14ಲಕ್ಷ ದುರುಪಯೋಗ, ದೂರವಾಣಿ ಟವರ್, ಜಿಯೋ ಇನ್ನಿತರೆ ಕೇಬಲ್ ಅಳವಡಿಸಲು ಬಂದ ಲಕ್ಷಾಂತರ ಅವ್ಯಹಾರ ಹಾಗೂ ವರ್ಗ 1 ರಲ್ಲಿಯೂ ಸಂತೆ ಸುಂಕದ ಹಣ ತಿಂಗಳಿಗೆ 58 ಸಾವಿರದಂತೆ ಒಂದು ವರ್ಷದ ಹಣವನ್ನು ಪಂಚಾಯಿತಿ ಖಾತೆಗೆ ಜಮಾ ಮಾಡದೆ ದುರುಪಯೋಗದ ವಂಚನೆಯ ಆರೋಪ ಮಾಡುವ ಮೂಲಕ ಸದಸ್ಯರು ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯಿತಿಯ ಸದಸ್ಯ ಸುರೇಶ್ ನೇತೃತ್ವದಲ್ಲಿ ಬುಧವಾರ ಉಪಾಧ್ಯಕ್ಷೆ ಸೇರಿದಂತೆ ಸಮಾವೇಶ ಗೊಂಡ 13ಕ್ಕೂ ಹೆಚ್ಚು ಗ್ರಾ.ಪಂ. ಸದಸ್ಯರು ಪಂಚಾಯಿತಿಯ ಮುಂದೆ ಶಾಮಿಯಾನ ಹಾಕಿ ಧರಣಿ ಸತ್ಯಾಗ್ರಹ ನಡೆಸುವುದಕ್ಕೂ ಮುನ್ನ ಪಂಚಾಯಿತಿಗೆ ಬೀಗ ಹಾಕಿ ಪಿ.ಡಿ.ಒ ವಿರುದ್ಧ ಕ್ಕಾರ ಕೂಗಿದರು. ಪ್ರತಿಭಟನಾಕಾರರನ್ನು ಕುರಿತು ಮಾತನಾಡಿದ ಸದಸ್ಯ ಸುರೇಶ್ ಪಿಡಿಒ ವಿನಾಯಕ್ ಎಂಬ ಈ ಭ್ರಷ್ಟ ಅಧಿಕಾರಿಯ ವಿರುದ್ಧ ಸಂಪೂರ್ಣ ತನಿಖೆ ನಡೆಸಿ ಈತನ ಮೇಲೆ ಶಿಸ್ತುಕ್ರಮ ಜರುಗಿಸಬೇಕು, ಚುನಾಯಿತ ಪ್ರತಿನಿಧಿಗಳಿಗೆ ಸರ್ಕಾರದ ಮಾಹಿತಿಗಳನ್ನ ನೀಡಿ ಆ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವ ಬದಲು ತನ್ನ ವಿವೇಚನೆಗೆ ಬಂದಂತೆ ಕೆಲಸ ಮಾಡುತ್ತ ಸದಸ್ಯರ ಹಾಗೂ ಜನ ಸಾಮಾನ್ಯರ ಕೈಗೆ ಸಿಗದ ಕುಸುಮದಂತಾಗಿದ್ದಾರೆ.
ಇಂತಹ ಅಧಿಕಾರಿಯಿಂದ ಈ ಗ್ರಾಮ ಅಭಿವೃದ್ಧಿ ಕಾಣದಂತಾಗಿದೆ. ಬರಿ ಬೋಗಸ್ ಬಿಲ್ ಮಾಡುವುದು ಹಾಗೂ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಈ ಖಾತೆ ಮಾಡುವ ಮೂಲಕ ಬಾರಿ ಗೋಲ್ಮಾಲ್ ಮಾಡುತ್ತಿದ್ದಾರೆ. ಈತನ ಬಗ್ಗೆ ಕುಣಿಗಲ್ ಇ.ಒ. ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿಗಳಿಗೂ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಇವರು ಕೂಡಲೇ ಈತನ ಮೇಲೆ ಸಂಪೂರ್ಣ ತನಿಖೆ ನಡೆಸಿ ಭ್ರಷ್ಟಾಚಾರದಲ್ಲಿ ವಂಚಿಸಿರುವ ಹಣವನ್ನು ಪಂಚಾಯಿತಿಗೆ ಕಟ್ಟಿಸಿ, ಈತನ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಹಿಳಾ ಸದಸ್ಯರ ಅಳಲು: ಅದೇ ರೀತಿ ಉಪಾಧ್ಯಕ್ಷೆ ಲಲಿತಮ್ಮ, ಸದಸ್ಯೆ ಅನುಸೂಯ ಮಾತನಾಡಿ ಪಿಡಿಒ ನಾವು ಮೂರೂವರೆವರ್ಷ ಅಧಿಕಾರ ಮುಗಿಸಿದ್ದೇವೆ. ಒಂದು ದಿನವು ಸಹ ಖುದ್ದು ನಮ್ಮ ಬ್ಲಾಕ್ನ ಜನರ ಸಮಸ್ಯೆಗಳ ಬಗ್ಗೆ ಸ್ಪಂಧಿಸದೆ ಬರೀ ತಾರತಮ್ಯ ಮಾಡುತ್ತ ಇಲ್ಲ ಸಲ್ಲದ ಸಬೂಬು ಹೇಳುತ್ತಲೇ ಬಂದರೂ, ನಾವು ಮಹಿಳಾ ಸದಸ್ಯರಾಗಿದ್ದು ನಮ್ಮ ಭಾಗದ ಜನರು ಕೇಳುವ ಅಭಿವೃದ್ದಿ ಕೆಲಸಗಳನ್ನ ಮಾಡದೆ ಅವರ ಕೈಯಲ್ಲಿ ಬಾಯಿಗೆ ಬಂದಂತೆ ಬೈಯಿಸಿಕೊಳ್ಳುತ್ತಿದ್ದೇವೆ. ಇದು ಯಾವ ಕರ್ಮ ಎಂದು ಪಿಡಿಒಗೆ ಹಿಡಿ ಶಾಪ ಹಾಕಿದರು. ಅಲ್ಲದೆ ಭಾಗ್ಯಮ್ಮ, ಪಂಕಜಮ್ಮ ಅವರು ಸಹ ಅಸಮಾಧಾನ ವ್ಯಕ್ತಪಡಿಸಿದರು.
ಅನ್ಯಾಯದ ಬಗ್ಗೆ ಪ್ರಶ್ನಿಸಿದರೆ ಸ್ವಂತ ಚೆಕ್ ನೀಡುವ ಪಿಡಿಒ:
ಸದಸ್ಯ ಧನಂಜಯ ಮಾತನಾಡಿ ಕುಡಿಯುವ ನೀರು ಪೈಪ್ಲೈನ್ ಸೇರಿದಂತೆ ಕೊಳವೆ ಬಾವಿಯ ಹಣ ಮಂಜೂರು ಮಾಡಿ ಎಂದರೆ ಅವರ ಸ್ವಂತ ಚೆಕ್ ನೀಡುತ್ತಾರೆ. ಅಂತಹ ಹಲವು ಚೆಕ್ಗಳು ಬೌನ್ಸ್ ಆಗುತ್ತಿವೆ. ಜನಪ್ರತಿನಿಧಿಗಳಿಗೆ ಸ್ಪಂದಿಸದ ಇವರು ಜನಸಾಮಾನ್ಯರ ಕೆಲಸವನ್ನು ಹೇಗೆ ಮಾಡುತ್ತಾರೆ. ನಾವೇ ವಾರಗಟ್ಟಲೆ ಕಾದು ಈ ಆಸಾಮಿಯನ್ನ ಹಿಡಿಯಬೇಕಾಗಿದೆ. ಬರೀ ಆ ಕೋರ್ಟ್ ಈ ಕೋರ್ಟ್ – ಮೀಟಿಂಗ್ ಅಂತ ಹೇಳುವ ಇವರು ತಂಬ್ಪ್ರೆಶ್ ಮಿಷಿನ್ಅನ್ನು ಕೆಡಿಸಿದ್ದಾರೆ. ಇವರು ಹಾಜರಾತಿಯಲ್ಲಿ ಗೈರಾಗಿದ್ದರೂ ಬಂದಾಗ ಎಲ್ಲವನ್ನು ಹಾಜರಿ ಎಂದು ನಮೂದಿಸಿಕೊಳ್ಳುತ್ತಾರೆ.
ಇವರ ಹಾಜರಾತಿಯ ಬಗ್ಗೆ ಸಿಸಿಕ್ಯಾಮರಾ ಪರಿಶೀಲಿಸಿದರೆ ತಿಳಿಯುತ್ತದೆ. ಇಂತಹ ಭ್ರಷ್ಟ ಅಧಿಕಾರಿ ಹಾಗೂ ಅಸಮರ್ಥರು ಇಲ್ಲಿಗೆ ಬೇಡವೆ ಬೇಡ, ಸಂಪೂರ್ಣ ತನಿಖೆ ನಡೆಸಿ ಈತನ ಮೇಲೆ ಶಿಸ್ತು ಕ್ರಮ ಜರುಗಿಸಿ ಎಂದು ಸಿ.ಇ.ಒ ಹಾಗೂ ಇಒ ಸ್ಥಳಕ್ಕೆ ಬರುವಂತೆ ಆಗ್ರಹಿಸಿ ಪಟ್ಟುಹಿಡಿದರು.
ಸದಸ್ಯರ ಮನವೊಲಿಸಿದ ಇ.ಒ.: ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಇಒ ಶಿವರಾಜಯ್ಯ ಸದಸ್ಯರ ಮನವೊಲಿಸಲು ಹರಸಾಹಸ ಪಡಬೇಕಾಯಿತು. ಅವರು ಕೇಳುವ ಪ್ರಶ್ನೆಗಳಿಗೆ ತಡಬಡಾಯಿಸಿದ ಇ.ಒ. ಕೊನೆಗೂ ಸಮಾಧಾನ ಪಡಿಸಿ ಕಚೇರಿ ಬೀಗ ತೆಗೆಸಿ ಸಭೆಮಾಡಿ ಸಭೆಯಲ್ಲಿ ಪಿಡಿಒ ವಿನಾಯಕ್ ವಿರುದ್ದ ಸದಸ್ಯರು ಆರೋಪಿಸಿದ ಹೇಳಿಕೆಗಳನ್ನ ಬರೆದು ಆತನ ಮೇಲೆ ಮೂರು ದಿನದಲ್ಲಿ ಸಂಪೂರ್ಣ ತನಿಖೆ ನಡೆಸಿ ನಂತರ ಶಿಸ್ತುಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು.
ಪ್ರತಿಭಟನೆಯಲ್ಲಿ ಸದಸ್ಯರಾದ ಎನ್.ಸಿ.ಬಾಬು, ಚಂದ್ರಶೇಖರ್, ರವಿ, ಹಿರಿಯ ಸದಸ್ಯ ಕುಂಟಯ್ಯ, ಮನು, ನಾಗೇಶ್ ಹಾಗೂ ಹೆಚ್.ದುರ್ಗ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷ ನಟರಾಜ್, ಕಾರ್ಯದರ್ಶಿ ದೊಡ್ಡಮಾದಪ್ಪ, ಕುಮಾರ್, ಶಿವಕುಮಾರ್, ಪ್ರಶಾಂತ್, ಪರಿಸರ ಪ್ರೇಮಿ ಶಿವಪ್ಪ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
