ಹರಪನಹಳ್ಳಿ:
ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಎಲ್ಲ ಸಿಬ್ಬಂದಿಗಳು ತಾಲೂಕು ಆರೋಗ್ಯ ಕೇಂದ್ರದಲ್ಲಿ ಸಂಬಳದ ವಿಳಂಬ ನೀತಿ ಬಗ್ಗೆ ಪ್ರಶ್ನಿಸಿ ದಿಡೀರ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಟಾವೈರಸ್ ಲಸಿಕೆ ಕುರಿತು ಕರೆಯಲಾಗಿದ್ದ ತರಬೇತಿಯನ್ನು ಭಹಿಷ್ಕರಿಸಿ ತಾಲೂಕು ವೈದ್ಯಾಧಿಕಾರಿಗೆ ಶೀಘ್ರವೇತನ ನೀಡುವಂತೆ ಮನವಿ ಸಲ್ಲಿಸಿ ಪ್ರತಿಭಟನೆಗೆ ಮುಂದಾದರು.
ಕಳೆದ 5 ತಿಂಗಳಿನಿಂದ ಸಂಬಳವಾಗಿಲ್ಲ ತರಬೇತಿ ನೆಪದಲ್ಲಿ ಎಲ್ಲರೂ ಸೇರುವ ನಿರೀಕ್ಷೆಯಿಂದಲೇ ಬಂದಿದ್ದೇವೆ, ತರಬೇತಿ ನೀಡುವುದಕ್ಕೂ ಮುನ್ನ ಸಂಬಳದ ವಿಳಂಬ ನೀತಿ ಏಕೆ ಎಂದು ಪ್ರಶ್ನಿಸಿದರು. ಈಗಾಗಲೇ ಜುಲೈ 15 ರಂದು ಪ್ರತಿಭಟನೆ ಮಾಡುವುದಾಗಿ ಮನವಿ ಮಾಡಿದ್ದರೂ ತಾಲೂಕು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ನಿರ್ಲಕ್ಷ ಧೋರಣೆ ಹೊಂದಿದ್ದಾರೆ. ಜುಲೈ 24 ನೇ ಬುಧುವಾರದಂದು ಸೇವೆಗಳನ್ನು ಸ್ಥಗಿತಗೊಳಿಸಿ ಸಮಸ್ಯೆ ತೀರುವವರೆಗೂ ಪ್ರತಿಭಟನೆ ಕೈಗೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಕರ್ನಾಟಕ ರಾಜ್ಯ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಬಾಗಲಾರ್ ಮಾತನಾಡಿ ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆಯಾದಾಗಿನಿಂದ ನಮಗೆ ಸಮಸ್ಯೆ ಎದುರಾಗಿದೆ. ಜಿಲ್ಲಾ ಬದಲಾವಣೆ ನೆಪವೊಡ್ಡಿ 5 ತಿಂಗಳಿನಿಂದ ಸಂಬಳ ನೀಡಿಲ್ಲ. ಜಿಲ್ಲಾ ಪಂಚಾಯಿತಿ ಲೆಕ್ಕ ಶೀರ್ಷಿಕೆ 26 ಮತ್ತು 27 ರಲ್ಲಿ ಹಣ ಬಂದಿರುವುದು ತಿಳಿದು ಬಂದಿದೆಯಾದರೂ ವೇತನ ಮಾತ್ರ ಕೈಗೆಟುಕದಂತಾಗಿದೆ ಎಂದರು.
ಹೆಚ್ಚಿನ ಆರೋಗ್ಯ ಸಹಾಯಕರು ಮತ್ತು ಸಿಬ್ಬಂದಿ ಲೆಕ್ಕ ಶೀರ್ಷಿಕೆ 02 ಮತ್ತು 03 ರಲ್ಲಿ ಇಲಾಖೆಯಿಂದ ಹಣ ಬಿಡುಗಡೆ ಮಾಡಿಲ್ಲ. ಸಂಬಳ ನೀಡಲು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹಾಗೂ ರಾಜ್ಯ ನೌಕರ ಸಂಘದ ಸಂಘಟನಾ ಕಾರ್ಯದರ್ಶಿ ಚನ್ನವ್ವ. ವೈ. ಸೋಮನಕಟ್ಟೆ ಮಾತನಾಡಿ. ಪ್ರತೀ ಗ್ರಾಮಗಳಿಗೆ ಮನೆ ಮನೆಗೂ ಹೋಗಿ ಆರೋಗ್ಯ ಸೇವೆ ನೀಡುವ ಆರೋಗ್ಯ ಸಹಾಯಕಿಯರಿಗೆ ವೇತನ ವಿಳಂಬ ಮಾಡಿದ್ದರಿಂದ, ಅವರ ಮಕ್ಕಳ ಶಾಲಾ ಶುಲ್ಕ ಕಟ್ಟಲಾಗದೆ, ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಗಿದೆ. ಗ್ರಾಮಗಳಿಗೆ ತೆರಳಲು ಬಸ್ ಚಾರ್ಜ್ ಕೂಡ ಇಲ್ಲದಂತಾ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
ಗರ್ಭಿಣಿಯರ ಮಾಹಿತಿಯನ್ನು ಆನ್ ಲೈನ್‍ನಲ್ಲಿ ಅಪ್ ಲೋಡ್ ಮಾಡಲು ತಿಳಿಸಿದ್ದಾರೆ ಆದರೆ ನೆಟ್‍ವರ್ಕ್‍ಗಾಗಿ ರೀಚಾರ್ಜ್ ಕೂಡ ಮಾಡಿಸಿಲ್ಲ. ನಮಗಾದರೂ ಸಂಬಳವಾಗಿದ್ದರೆ ಅದರಲ್ಲೇ ಕರೆನ್ಸಿ ಹಾಕಿಸಿಕೊಳ್ಳುತ್ತಿದ್ದೆವು. ಕೂಡಲೇ ವೇತನ ನೀಡದಿದ್ದರೆ ತಿಂಗಳ ವರಧಿಯನ್ನೂ ಸಹ ಸಲ್ಲಿಸುವುದಿಲ್ಲ ಎಂದು ಹೇಳಿದರು. ಸಿಬ್ಬಂಧಿಗಳ ಸಂಬಳದ ಬಗ್ಗೆ ಜಿಲ್ಲಾಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಶೀಘ್ರದಲ್ಲೆ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಾಲೂಕು ವೈದ್ಯಾಧಿಕಾರಿ ರೇಣುಕಾನಂದ ಮೆಣಸಿಕಾಯಿ ಹೇಳಿದರು.