ಎಕ್ಸಿಸ್ ಬ್ಯಾಂಕ್ ನೀತಿ ಖಂಡಿಸಿ ಪ್ರತಿಭಟನೆ

ಚಿತ್ರದುರ್ಗ:

        ಬೆಳಗಾವಿಯಲ್ಲಿ 180 ರೈತರ ಮೇಲೆ ಕೇಸು ದಾಖಲಿಸಿ ಕಲ್ಕತ್ತ ಕೋರ್ಟ್‍ಗೆ ಎಳೆದಿರುವ ಎಕ್ಸಿಸ್ ಬ್ಯಾಂಕ್ ನೀತಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಚಿತ್ರದುರ್ಗದ ಎಕ್ಸಿಸ್ ಬ್ಯಾಂಕ್ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

        ಹಿರೇಕಬ್ಬಿಗೆರೆಯ ಚಿಕ್ಕಬಸಮ್ಮನವರಿಗೆ ಎಕ್ಸಿಸ್ ಬ್ಯಾಂಕ್ ನೀಡಿರುವ ಮೂರು ಲಕ್ಷ ರೂ.ಗಳ ಸಾಲದ ನೋಟಿಸನ್ನು ಬ್ಯಾಂಕ್ ಮುಂದೆ ದಹನಗೊಳಿಸಿದ ರೈತರು ಅಪ್ಪಿತಪ್ಪಿಯೂ ಇನ್ನು ಮುಂದೆ ಜಿಲ್ಲೆಯಲ್ಲಿ ಯಾರಾದರೂ ರೈತರಿಗೆ ನೋಟಿಸ್ ನೀಡಿದ್ದೇ ಆದಲ್ಲಿ ಇಲ್ಲಿಂದ ನಿಮ್ಮ ಬ್ಯಾಂಕನ್ನು ಎತ್ತಂಗಡಿ ಮಾಡಬೇಕಾದೀತು ಹುಷಾರ್ ಎಂದು ಎಚ್ಚರಿಸಿದರು.

         ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ ರೈತರಿಗೆ ಸಾಲ ನೀಡುವಾಗ ಆಸ್ತಿಯನ್ನು ಅಡವಾಗಿಟ್ಟುಕೊಳ್ಳಿ ಇಲ್ಲವೇ ಬೇರೆಯವರ ಗ್ಯಾರೆಂಟಿಯನ್ನಾದರೂ ಪಡೆದುಕೊಳ್ಳಿ ಎರಡು ನೀತಿ ಅನುಸರಿಸುವುದು ಸರಿಯಲ್ಲ.

         ಜಿಲ್ಲೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇನ್ನು ಮುಂದೆ ಸಾಲ ತೀರುವಳಿ ಮಾಡುವಂತೆ ನೋಟಿಸ್ ನೀಡುವುದಾದರೆ ಆಯಾ ಜಿಲ್ಲಾಧಿಕಾರಿಗೆ ಇಲ್ಲವೇ ಸರ್ಕಾರಕ್ಕೆ ಬ್ಯಾಂಕ್‍ಗಳು ನೋಟಿಸ್ ನೀಡಬೇಕು. ಸರ್ಕಾರವೇ ಸಾಲದ ಹೊರೆ ಹೊರಬೇಕು. ರೈತ ವಿರೋಧಿ ನೀತಿ ಅನುಸರಿಸಿದರೆ ಸಹಿಸಿಕೊಂಡು ಸುಮ್ಮನಿರುವುದಿಲ್ಲ. ರಾಜ್ಯದ 28 ಜಿಲ್ಲೆಗಳ ಆರುವರೆ ಲಕ್ಷ ರೈತರ ಸಾಲದ ಜವಾಬ್ದಾರಿಯನ್ನು ಸರ್ಕಾರವೆ ವಹಿಸಿಕೊಳ್ಳಬೇಕು ಎಂದು ಗುಡುಗಿದರು.

        ದೇಶಕ್ಕೆ ಅನ್ನ ಕೊಡುವ ರೈತನನ್ನು ಈ ರೀತಿ ಅವಮಾನಿಸುವುದು ಯಾವ ನ್ಯಾಯ. ರೈತ ಬೆಳೆದ ಬೆಳೆಯನ್ನು ಅಧಿಕಾರಿಗಳು, ರಾಜಕಾರಣಿಗಳು, ಬ್ಯಾಂಕ್‍ನವರು ತಿನ್ನುವುದಿಲ್ಲವೇ ಎಂದು ಪ್ರಶ್ನಿಸಿದ ಘಚಘಟ್ಟದ ಸಿದ್ದವೀರಪ್ಪ ಚಿತ್ರದುರ್ಗ ಜಿಲ್ಲೆಯ ರೈತರನ್ನು ಬೇರೆ ಜಿಲ್ಲೆ ಬೇರೆ ರಾಜ್ಯಗಳ ಕೋರ್ಟ್‍ಗೆ ಎಳೆಯುವುದಾದರೆ ಅಂತಹ ಬ್ಯಾಂಕ್‍ಗಳು ನಮ್ಮ ಊರಿನಲ್ಲಿ ನಮ್ಮ ನಾಡಿನಲ್ಲಿ ಇರುವುದು ಬೇಡ. ನಮ್ಮ ಅಹವಾಲುಗಳನ್ನು ರಿಸರ್ವ್ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿ ಸರ್ಕಾರ ಮತ್ತು ಬ್ಯಾಂಕ್‍ಗಳು ಮಾತುಕತೆ ನಡೆಸಿ ರೈತರ ಸಂಪೂರ್ಣ ಸಾಲ ಮನ್ನ ಮಾಡಬೇಕು.

        ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ ಬೆಳಗಾವಿಯಲ್ಲಿ 180 ರೈತರ ಮೇಲೆ ಕೇಸು ದಾಖಲಿಸಿ ಕಲ್ಕತ್ ಕೋರ್ಟ್‍ಗೆ ಹಾಜರಾಗುವಂತೆ ಐದು ರೈತರಿಗೆ ವಾರೆಂಟ್ ಹೊರಡಿಸಿರುವುದು ಅತ್ಯಂತ ಖಂಡನೀಯ. ರೈತ ದೇಶಕ್ಕೆ ಅನ್ನ ನೀಡಿದರೆ, ಯೋಧ ದೇಶದ ಗಡಿ ಕಾಯುತ್ತಾನೆ. ಈ ಇಬ್ಬರು ದೇಶದ ಎರಡು ಕಣ್ಣುಗಳಿದ್ದಂತೆ ಅದಕ್ಕಾಗಿ ಇನ್ನು ಮುಂದೆ ಯಾವುದೇ ಬ್ಯಾಂಕ್‍ಗಳು ರೈತರಿಗೆ ನೋಟಿಸ್ ನೀಡಿದ್ದೇ ಆದಲ್ಲಿ ಇಲ್ಲಿ ನೀವು ಇರುವುದಿಲ್ಲ. ನಿಮ್ಮ ಬ್ಯಾಂಕು ಇರುವುದಿಲ್ಲ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿದರು.

       ಚಿತ್ರದುರ್ಗ ತಾಲೂಕು ರೈತ ಸಂಘದ ಅಧ್ಯಕ್ಷ ರಾಜಶೇಖರಪ್ಪ, ಕಾರ್ಯದರ್ಶಿ ಮಂಜುನಾಥ್, ರಾಮರೆಡ್ಡಿ, ಚಳ್ಳಕೆರೆ ತಾಲೂಕು ಅಧ್ಯಕ್ಷ ಶ್ರೀಕಂಠಪ್ಪ, ಮಲ್ಲಿಕಾರ್ಜುನ್, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಬಸವರಾಜಪ್ಪ, ಹಸಿರುಸೇನೆಯ ಯರ್ರಿಸ್ವಾಮಿ, ರಾಮಲಿಂಗಪ್ಪ, ರಂಗಸ್ವಾಮಿ, ಶಂಕರಪ್ಪ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link