ಬೆಂಗಳೂರು
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ದ್ವೇಷ ಮತ್ತು ಭೀತಿಯ ರಾಜಕಾರಣವನ್ನು ವಿರೋಧಿಸಿ ಆರಂಭವಾಗಿರುವರಾಷ್ಟ್ರೀಯ ಆಂದೋಲನ ಬೆಂಬಲಿಸಿ ನಗರದಲ್ಲಿ ಗುರುವಾರ ಪ್ರಗತಿಪರ ಮಹಿಳೆಯರು ಚಳುವಳಿ ನಡೆಸಿದರು.
ಮೈಸೂರು ಬ್ಯಾಂಕ್ ವೃತ್ತದ ಬಳಿ ಸೇರಿದ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ (ಐಪ್ಲಾ) ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತೆಯರು ಮಹಿಳೆಯರು, ದೇಶದಲ್ಲಿ ಉತ್ತಮ ಬದಲಾವಣೆಗಾಗಿ ಮತ್ತು ಪ್ರಜಾತಂತ್ರದ ಉಳಿವಿಗಾಗಿ ದ್ವೇಷ ಮತ್ತು ಭೀತಿಯ ರಾಜಕಾರಣ ದಿಕ್ಕರಿಸಿ ಮತದಾನ ಮಾಡಿ ಎಂದು ಕರೆ ನೀಡಿದರು.
ಕಳೆದ 2014ನಿಂದ ಗಲಾಟೆಗಳು ಜಾಸ್ತಿ ಆಗುತ್ತಿವೆ. ನನ್ನ ಅಕ್ಕ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾದಗ ಸಂಭ್ರಮಿಸಿದರು.ಅಷ್ಟೇ ಅಲ್ಲದೆ, ಮಹಿಳೆಯರ ಮೇಲೆ ಅತ್ಯಾಚಾರ ನಡೆದಾಗಲೂ ಸಂಭ್ರಮಿಸುವವರಿದ್ದಾರೆ ಎಂದು ಚಳವಳಿಯಲ್ಲಿ ಪಾಲ್ಗೊಂಡಿದ್ದ ನಿರ್ದೇಶಕಿ, ಹೋರಾಟಗಾರ್ತಿ ಕವಿತಾ ಲಂಕೇಶ್ ಎಂದು ಆರೋಪಿಸಿದರು.
ಜಾತ್ಯತೀತರಿಗೆ ಕರ್ನಾಟಕದ ಚುನಾವಣೆ ಮಹತ್ವದ್ದಾಗಿದೆ. ಗೋವು, ಲವ್ ಜಿಹಾದ್, ಘರ್ ವಾಪಸಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಐದು ವರ್ಷ ಕಳೆದ ಕೇಂದ್ರದ ಆಡಳಿತವನ್ನು ಜನ ನೋಡಿದ್ದಾರೆ. ಇಂತಹ ಪಕ್ಷವನ್ನು ಸೋಲಿಸಬೇಕು. ದೇಶದ ಸಂವಿಧಾನ ರಕ್ಷಣೆಗೆ ಪ್ರತಿ ಕ್ಷಣವನ್ನು ಮೀಸಲಿಡಬೇಕು ಎಂದರು.
ದಲಿತರು, ಬಡವರು, ರೈತರು ಸೇರಿದಂತೆ ಎಲ್ಲರಿಗೂ ಬಿಜೆಪಿ ಮೋಸ ಮಾಡಿದೆ. ಮಹಾತ್ಮ ಗಾಂಧಿ ಹತ್ಯೆ ಮಾಡಿದ ಚಿಂತನೆಯೇ, ಇಂದು ಗೌರಿ ಲಂಕೇಶ್ ಅವರನ್ನು ಹತ್ಯೆಗೈದಿದೆ. ಆದರೆ, ಗೌರಿ ಹತ್ಯೆ ಸಂಭ್ರಮಿಸಿದವರನ್ನು ನಮ್ಮ ಪ್ರಧಾನಿ, ಟ್ವಿಟರ್ನಲ್ಲಿ ಫಾಲೊ ಮಾಡುತ್ತಾರೆ ಎಂದು ಚಳುವಳಿ ನಿರತ ಮಹಿಳೆಯರು ಟೀಕಿಸಿದರು.ಚಳವಳಿಯಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಕೈ ಪದ್ಮಸಾಲಿ, ಸಾಹಿತಿ ಕೆ.ಷರೀಫಾ ಮಲ್ಲಿಗೆ, ಗೌರಿ, ಗೀತಾ ಮೆನನ್ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








