ಟಿಪ್ಪು ಜಯಂತಿಗೆ ಅಪಸ್ವರ ಎತ್ತುವುದು ನೀಚ ಕೃತ್ಯ

ದಾವಣಗೆರೆ:

      ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ, ತನ್ನ ಮಕ್ಕಳನ್ನೇ ಒತ್ತೆಯಾಳಾಗಿಟ್ಟ ಮಹಾನ್ ದೇಶಪ್ರೇಮಿ ಟಿಪ್ಪು ಸುಲ್ತಾನ್ ಅವರ ಜಯಂತಿಗೆ ಅಪಸ್ವರ ಎತ್ತುತ್ತಿರುವುದು ನಿಜಕ್ಕೂ ನೀಚಕೃತ್ಯವಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

        ನಗರದ ಪ್ರೌಢಶಾಲಾ ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೈಯಕ್ತಿಕ ಹಿತಾಸಕ್ತಿಗಾಗಿ ಹಾಗೂ ಮತಬ್ಯಾಂಕ್‍ಗಾಗಿ ಟಿಪ್ಪು ಜಯಂತಿಯನ್ನು ವಿರೋಧಿಸುವ ಭರದಲ್ಲಿ ಜನಾಂಗಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸುತ್ತಿರುವುದು ಅತ್ಯಂತ ನೀಚ ಕಾರ್ಯವಾಗಿದ್ದು, ಇದನ್ನು ಎಲ್ಲರೂ ಖಂಡಿಸಬೇಕೆಂದು ಕಿವಿಮಾತು ಹೇಳಿದರು.

       ಟಿಪ್ಪು ಆಡಳಿತದಲ್ಲಿ ಉಳುವವನೇ ಭೂಮಿ ಒಡೆಯ ಕಾನೂನು ಜಾರಿಗೆ ತಂದು ಲಕ್ಷಾಂತರ ಬಡವರಿಗೆ ಭೂಮಿಯ ಹಕ್ಕು ನೀಡಿದ್ದರು. ರೇಷ್ಮೆ ಬೆಳೆಗೆ ಉತ್ತೇಜನ ನೀಡುವುದು ಸೇರಿದಂತೆ ಮನುಕುಲಕ್ಕೆ ಒಳಿತಾಗುವ ನೂರಾರು ಕಾರ್ಯಗಳನ್ನು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಮಾಡಿದ್ದಾರೆ. ಹೀಗಾಗಿ ಈ ಮಹಾತ್ಮನ ಜಯಂತಿಯನ್ನು ಎಲ್ಲಾ ಸಮುದಾಯದವರು ಸೇರಿ ಒಟ್ಟಾಗಿ ಸೇರಿ ಆಚರಿಸುವಂತಾಗಬೇಕೆಂದು ಆಶಯ ವ್ಯಕ್ತಪಡಿಸಿದರು.

      ಟಿಪ್ಪು ಸುಲ್ತಾನ್ ಅವರು ದೇಶಕಂಡ ಅಪ್ರತಿಮಾ ಹೋರಾಟಗಾರನಾಗಿದ್ದು, ಬ್ರಿಟೀಷರಿಗೆ ಸಿಂಹ ಸ್ವಪ್ನರಾಗಿದ್ದರು. ಇಂಥಹ ದೇಶ ಪ್ರೇಮಿಯ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮ ದೇಶದ ಹೆಮ್ಮೆಯ ಸಂಕೇತವಾಗಿದೆ. ಮಹಾತ್ಮ ಗಾಂಧಿಜೀ ಮನುಕುಲದ ಒಳಿತಿಗಾಗಿ ಸರ್ವಜನಾಂಗದ ಶಾಂತಿಗಾಗಿ ಸ್ವಾತಂತ್ರ ತಂದುಕೊಟ್ಟರು. ಆದರೆ, ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾಗುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಕೆಲಸವಾಗಿದೆ ಎಂದರು.

      ಕೆಲವರು ಮತಬ್ಯಾಂಕ್‍ಗಾಗಿ ಸಹೋದರರಂತೆ ಬದುಕುತ್ತಿರುವ ಹಿಂದೂ ಮುಸ್ಲಿಮರನ್ನು ವಿಂಗಡಿಸುವ ಮೂಲಕ ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಸ್ವತಂತ್ರ ಬದುಕು ರೂಪಿಸಿಕೊಳ್ಳುವ ಹಕ್ಕಿದೆ. ಪ್ರಧಾನಿ ಮೋದಿ ಸರ್ವರೂ ಸಮಾನರು ಎಂದು ಭಾಷಣ ಮಾಡುತ್ತಾರೆ. ಆದರೆ, ಮೋದಿಯ ಪಕ್ಷದವರೇ ಇಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಮೋದಿ ಅವರ ಡೋಂಗಿತನಕ್ಕೆ ಸಾಕ್ಷಿಯಾಗಿದೆ ಎಂದರು.

       ದಾವಣಗೆರೆ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಮುಸ್ಲಿಂ ಬಾಂಧವರಿದ್ದರೂ ಈ ಕಾರ್ಯಕ್ರಮಕ್ಕೆ ಬೆರಳೆಣಿಕೆಯಲ್ಲಿ ಸೇರಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ಟಿಪ್ಪು ಜಯಂತಿ ಆಚರಿಸಬೇಕೆಂದು ಕರೆ ನೀಡಿದರು.

       ನವದೆಹಲಿ ಕೇಂದ್ರ ದಕ್ಷಿಣ ವಲಯ ಸಾಂಸ್ಕತಿಕ ಕೇಂದ್ರದ ಸದಸ್ಯ, ರಂಗಕರ್ಮಿ ರವೀಂದ್ರನಾಥ್ ಸಿರಿವರ ಟಿಪ್ಪು ಸುಲ್ತಾನ್ ಕುರಿತು ವಿಶೇಷ ಉಪನ್ಯಾಸ ನೀಡಿದರು.

        ಜಿಲ್ಲಾ ಸುನ್ನಿ ಉಲ್ಮಾ ಸಮಿತಿ ಅಧ್ಯಕ್ಷ ಮೌಲಾನಾ ಮಹಮದ್ ಹನೀಫ್ ರಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಮೇಯರ್ ಶೋಭಾ ಪಲ್ಲಾಗಟ್ಟೆ, ಉಪಮೇಯರ್ ಚಮನ್‍ಸಾಬ್, ವಕ್ಫ್ ಮಂಡಳಿ ಅಧ್ಯಕ್ಷ ಮಹಮದ್ ಸಿರಾಜ್, ಸಾಧಿಕ್ ಪೈಲ್ವಾನ್, ಅಮಾನುಲ್ಲಾಖಾನ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಸುಮತಿ ಜಯಪ್ಪ ನಿರೂಪಿಸಿದರು. ಕುಮಾರ ಬೆಕ್ಕೇರಿ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link