ಉದ್ಧವ್ ಠಾಕ್ರೆ ಭಾವಚಿತ್ರ ದಹಿಸಿ ಪ್ರತಿಭಟನೆ

ದಾವಣಗೆರೆ:

      ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಡಿ ವಿವಾದ ಕೆದಕುವ ಮೂಲಕ ಭಾಷಾ ಸೌಹಾರ್ಧತೆ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಉದ್ಧವ್ ಠಾಕ್ರೆ ಭಾವಚಿತ್ರ ದಹಿಸುವ ಮೂಲಕ ಪ್ರತಿಭಟನೆ ನಡೆಸಿದರು.

      ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿ ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾ ಘಟಕದ ಕಾರ್ಯಕರ್ತರು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾವಚಿತ್ರ ದಹಿಸಿ, ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟಿಕೆಯ ವಿರುದ್ಧ ಘೋಷಣೆ ಕೂಗುತ್ತಾ, ಮೆರವಣಿಗೆ ಮೂಲಕ ಮಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಎನ್.ವೆಂಕಟೇಶ, ಬೆಳಗಾವಿಯಲ್ಲಿ ಮರಾಠಿಗರನ್ನು ಮತ ಬ್ಯಾಂಕ್ ಮಾಡಿಕೊಂಡಿರುವ ರಾಜಕಾರಣಿಗಳ ಕುಮ್ಮಕ್ಕಿನಿಂದ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ಆಳವಾಗಿ ಬೇರೂರಿವೆ. ಬೆಳಗಾವಿ ಗಡಿ ವಿಚಾರದಲ್ಲಿ ಈ ಎರಡೂ ಸಂಘಟನೆಗಳು ಕನ್ನಡಿಗರ ಶವಯಾತ್ರೆ ಮಾಡುವುದು, ಬಂದೂಕು ತೋರಿಸಿ ಹೆದರಿಸುವಂತಹ ಕೃತ್ಯಗಳಿಂದ ಉಗ್ರಗಾಮಿ ಸಂಘಟನೆಗಳಂತೆ ವರ್ತಿಸುತ್ತಾ ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುತ್ತಲೇ ಬಂದಿವೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಡಿ ವಿವಾದ ಕೆದಕುವ ಮೂಲಕ ಭಾಷಾ ಸೌಹಾರ್ಧತೆ ಹಾಳು ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.

    ಗಡಿ ವಿವಾದಕ್ಕೆ ಸಂಬಂಧಿಸಿದ ಮಹಾಜನ್ ವರದಿ ಸರ್ಕಾರದ ಕೈ ಸೇರಿ 64 ವರ್ಷಗಳೇ ಕಳೆದಿದ್ದರೂ, ಈವರೆಗೆ ಆಡಳಿತ ನಡೆಸಿದ ಯಾವುದೇ ಸರ್ಕಾರಗಳು ವರದಿ ಅನುಷ್ಠಾನಕ್ಕೆ ಪ್ರಯತ್ನಿಸಿಲ್ಲ. ಹೀಗಾಗಿ ಗಡಿ ವಿವಾದ ಬಗೆಹರಿಸುವಲ್ಲಿ ಕರ್ನಾಟಕ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

     ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಸರ್ಕಾರವು ನಿರಂತರವಾಗಿ ಕುತಂತ್ರ ನಡೆಸಿಕೊಂಡು ಬಂದಿದೆ. ಆದರೂ ಸರ್ಕಾರದ ಕುತಂತ್ರಗಳನ್ನು ಹಿಮ್ಮೆಟ್ಟಿಸಲು ಕರ್ನಾಟಕ ರಾಜ್ಯ ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿರುವ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸಬೇಕು. ಅದರ ಅಧ್ಯಕ್ಷರನ್ನಾಗಿ ಬೆಳಗಾವಿ ಭಾಗದವರನ್ನೇ ನೇಮಿಸಬೇಕು. ಇದರ ಜೊತೆಗೆ ಗಡಿ ಉಸ್ತುವಾರಿಗಳನ್ನು ನೇಮಕ ಮಾಡಬೇಕು. ಕೇಂದ್ರ ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಿ, ಗಡಿ ವಿವಾದ ಬಗೆಹರಿಸಬೇಕೆಂದು ಅವರು ಆಗ್ರಹಿಸಿದರು.

   ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಕ್ಕೊಗೊಂದಿ ಹೆಚ್.ಬಿ.ರುದ್ರೇಗೌಡ್ರು, ಜಿಲ್ಲಾ ಉಪಾಧ್ಯಕ್ಷ ಶೇರ್ ಅಲಿ, ಮುಖಂಡರಾದ ಗಿರೀಶ ಗಿರಿ, ಬಿ.ಮಂಜುನಾಥ, ಆನಂದ, ಅಕ್ಬರ್, ಅರುಣಕುಮಾರ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link