ಕಳಪೆ ಕಾಮಗಾರಿ ನಿಲ್ಲಿಸಲು ಆಗ್ರಹ..!

ತುರುವೇಕೆರೆ:

    ತಾಲೂಕಿನ ಮಲ್ಲಾಘಟ್ಟ ಕೆರೆ ನಾಲಾ ಪುನರುಜ್ಜೀವನ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಕಾಂಗ್ರೇಸ್ ಮುಖಂಡ ಬಿ.ಎಸ್. ವಸಂತಕುಮಾರ್ ಹಾಗೂ ಅಚ್ಚಕಟ್ಟು ಪ್ರದೇಶದ ರೈತ ಮುಖಂಡರುಗಳು ಸ್ಥಳಕ್ಕಾಗಮಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.

   ಕೆಲ ದಿನಗಳ ಹಿಂದೆ ಶಾಸಕರು ನಾಲಾ ಆಧುನೀಕರಣ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಚಾಲನೆ ದೊರಕಿಸಿದ್ದರು. ಅದರಂತೆ ಬಲದಂಡೆ ನಾಲಾ ಪುನರುಜ್ಜೀವನ ಕಾಮಗಾರಿ ನೆಡೆಸುವ ಸಲುವಾಗಿ ಗುತ್ತಿಗೆದಾರರು ಹಿಂದೆ ಇದ್ದ ಚಪ್ಪಡಿ ಕಲ್ಲುಗಳನ್ನು ತೆರವುಗೊಳಿಸಿ ಕಾಮಗಾರಿ ನಿರ್ವಹಿಸಲು ಮುಂದಾಗಿದ್ದರು. ಕಾಮಗಾರಿ ಗುಣಮಟ್ಟದ ಬಗ್ಗೆ ಸ್ತಳೀಯ ಮುಖಂಡರುಗಳು ಹಾಗೂ ರೈತರುಗಳು ಅಸಮಾಧಾನ ವ್ಯಕ್ತಪಡಿಸಿ ಗುಣಮಟ್ಟದ ಕಾಮಗಾರಿ ಮಾಡಿಸುವಂತೆ ಸ್ಥಳಕ್ಕೆ ಆಗಮಿಸಿದ ಎ.ಇ.ಇ. ದೇವರಾಜ್‍ರವರನ್ನು ಒತ್ತಾಯಿಸಿದರು.

    ಸ್ಥಳೀಯ ಕಾಂಗ್ರೇಸ್ ಮುಖಂಡ ಬಿ.ಎಸ್. ವಸಂತಕುಮಾರ್ ಮಾತನಾಡಿ ನಾಲೆ ಆಧುನೀಕರಣಕ್ಕೆ ಚಾಲನೆ ದೊರಕಿರುವುದು ಅತ್ಯಂತ ಸಂತಸದ ಸಂಗತಿ. ಆದರೇ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರ ಕಳಪೆ ಗುಣಮಟ್ಟದ ಕಬ್ಬಿಣ, ಸಿಮೆಂಟ್ ಬಳಸುತ್ತಿದ್ದಾರೆ, ಬಾಕ್ಸ್ ಕಾಂಕ್ರೀಟ್ ಹಾಕುವ ಬದಲಿಗೆ ಮನಸೋ ಇಚ್ಚೆ ಕಾಂಕ್ರೀಟ್ ಹಾಕಲು ಮುಂದಾಗಿದ್ದಾರೆ, ಕಳಪೆ ಕಾಮಗಾರಿ ಬಗ್ಗೆ ಹೇಮಾವತಿ ನಾಲಾ ಎಂಜಿನಿಯರ್‍ಗಳು ಮೌನ ಸಂಶಯಕ್ಕೆ ಎಡೆ ಮಾಡಿದೆ.

    ಗುಣಮಟ್ಟದ ಕಾಮಗಾರಿ ಬಗ್ಗೆ ಖಾತರಿ ದೊರಕದ ಹೊರೆತು ಕಾಮಗಾರಿ ಮಾಡಲು ಬಿಡುವುದಿಲ್ಲ, ಅಗತ್ಯ ಬಿದ್ದರೇ ಅಚ್ಚುಕಟ್ಟು ಪ್ರದೇಶದ ರೈತರೊಂದಿಗೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಕಳಪೆ ಸಿಮೆಂಟ್:

    ಅಧಿಕೃತವಾಗಿ ಯಾವ ಸಿಮೆಂಟ್ ಯಾವ ಕಂಪೆನಿಯದ್ದು ಎಂದು ನಮೂದಾಗದ ಚೀಲಗಳಲ್ಲಿದ್ದ ಸಿಮೆಂಟ್‍ನ್ನು ಕಾಮಗಾರಿಗೆ ಬಳಕೆ ಮಾಡಲಾಗುತ್ತಿದೆ. 53 ಗ್ರೇಟ್ ಸಿಮೆಂಟ್ ಬಳಕೆ ಮಾಡಬೇಕಾದ ಜಾಗದಲ್ಲಿ 43 ಗ್ರೇಡ್ ಸಿಮೆಂಟ್ ಬಳಸಲಾಗುತ್ತಿದೆ. ಒಟ್ಟಾರೇ ಕಾಮಗಾರಿಗೆ ನಿಗದಿ ಪಡಿಸಿದ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿರುವ ಗುತ್ತಿಗೆದಾರರು ಕಳಪೆ ಕಾಮಗಾರಿ ನಿರ್ವಹಿಸಲು ಮುಂದಾಗಿದ್ದಾರೆ ಎಂದು ಮಲ್ಲಾಘಟ್ಟ ಯುವರೈತ ಪುಟ್ಟರಾಜ್ ಆರೋಪಿಸಿದರು.

    ಸ್ಥಳಕ್ಕೆ ಧಾವಿಸಿದ ಎಂಜಿನಿಯರ್ ದೇವರಾಜ್ ಮತ್ತು ಸಿಬ್ಬಂದಿ ಗುಣಮಟ್ಟದ ಕಾಮಗಾರಿ ನೆಡೆಸುವಂತೆ ಗುತ್ತಿಗೆದಾರರರಿಗೆ ಸೂಚನೆ ನೀಡುವುದಾಗಿ ತಿಳಿಸಿದರು. ಇದ್ಕಕೆ ಒಪ್ಪದ ಸ್ಥಳೀಯ ಮುಖಂಡರುಗಳು ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿ ಒತ್ತಾಯಿಸಿದ್ದರಿಂದ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.ಈ ಸಂದರ್ಬದಲ್ಲಿ ಸ್ಥಳಿಯ ಗ್ರಾ.ಪಂ. ಸದಸ್ಯರಾದ ಸುದರ್ಶನ್, ದೇವರಾಜ್, ಮುಖಂಡ ತಿಮ್ಮಪ್ಪ, ಯುವ ಮುಖಂಡರುಗಳಾದ ವಿನಯ್, ಗುರುರಾಜ್ ಸೇರಿದಂತೆ ಅನೇಕ ಮುಖಂಡರುಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link