ಸರ್ಕಾರದ ವೈಫಲ್ಯಗಳ ಕುರಿತು ಸದನದಲ್ಲಿ ಹೋರಾಟ: ಬಿ ಎಸ್ ವೈ

ಬೆಂಗಳೂರು

          ರಾಜ್ಯ ಸರ್ಕಾರದ ಆರು ತಿಂಗಳ ವೈಫಲ್ಯಗಳ ಬಗ್ಗೆ ಸದನದ ಒಳಗೆ ಮತ್ತು ಹೊರಗಡೆ ಹೋರಾಟ ತೀವ್ರಗೊಳಿಸಲು ಬಿಜೆಪಿ ತೀರ್ಮಾನಿಸಿದೆ.

          ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ಇದಕ್ಕೂ ಮುನ್ನ ಬರ ಹಾಗೂ ನೆರೆ ಪರಿಸ್ಥಿತಿ ಬಗ್ಗೆ ಆರು ತಂಡಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡು ಸದನದಲ್ಲಿ ಹೋರಾಟಕ್ಕೆ ಅಣಿಯಾಗಲು ನಿರ್ಧರಿಸಿದೆ.

        ಡಿಸೆಂಬರ್ 10 ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಜನಪರ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ಸರ್ಕಾರದ ವಿರುದ್ಧ ಹೋರಾಟ ಬಲಗೊಳಿಸಲು ಉದ್ದೇಶಿಸಿದೆ.

         ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ರಾಜ್ಯದಲ್ಲಿ ನೆರೆ ಮತ್ತು ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನೆಡಸಲು ಬಿಜೆಪಿಯ ಆರು ತಂಡಗಳು ಡಿಸೆಂಬರ್ 3 ರಿಂದ 5 ರವರೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿವೆ. ಮತ್ತೊಂದು ತಂಡ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಪರಿಸ್ಥಿತಿಯ ನಂತರ ನಡೆಯುತ್ತಿರುವ ಪರಿಹಾರ ಕಾಮಗಾರಿಗಳನ್ನು ಪರಿಶೀಲಿಸದೆ ಎಂದರು.

          ಡಿಸೆಂಬರ್ 3, 4 ಮತ್ತು 5ರಂದು ಐದು ತಂಡಗಳಲ್ಲಿ ರಾಜ್ಯದ ಬರ ಅಧ್ಯಯನ ನಡೆಯಲಿದೆ. ಬಿಜೆಪಿ ನಾಯಕರಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ವಿಧಾನಸಭೆ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ನೇತೃತ್ವದ ತಂಡ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ ಎಂದರು.

         ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ನೇತೃತ್ವದ ಮತ್ತೊಂದು ತಂಡ ಕೊಡಗಿನಲ್ಲಿ ನೆರೆಪರಿಹಾರ ಕಾಮಗಾರಿಯಲ್ಲಿ ಆಗಿರುವ ಲೋಪಗಳ ಬಗ್ಗೆ ಅಧ್ಯಯನ ನಡೆಸಲಿದೆ. ಈ ತಂಡದಲ್ಲಿ ಸಂಸದರಾದ ಪ್ರಹ್ಲಾದ್ ಜೋಷಿ, ಪ್ರತಾಪ್ ಸಿಂಹ, ನಳೀನ್ ಕುಮಾರ್ ಕಟೀಲ್ ಪಾಲ್ಗೊಳ್ಳಲಿದ್ದಾರೆ ಎಂದು ಅರವಿಂದ ಲಿಂಬಾವಳಿ ಮಾಹಿತಿ ನೀಡಿದರು.

        ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ಥರಿಗೆ ಇನ್ ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರು ಪರಿಹಾರ ಧನ ನೀಡಿದ್ದು, ಅವರ ನಿರೀಕ್ಷೆಯಂತೆ ಕಾಮಗಾರಿ ನಡೆಯುತ್ತಿಲ್ಲ. ಈ ವೈಫಲ್ಯದ ಬಗ್ಗೆ ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಸಂಸ್ಥೆ ನೀಡಿರುವ ಹಣವನ್ನು ವಾಪಸ್ ಪಡೆಯುವುದಾಗಿ ಹೇಳಿ, ಕಾಮಗಾರಿಯ ಉಸ್ತುವಾರಿಯನ್ನು ತಾವೇ ನೋಡಿಕೊಳ್ಳುವುದಾಗಿಯೂ ಸ್ಪಷ್ಟ ಪಡಿಸಿರುವುದರಿಂದ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದಂತಾಗಿದೆ.

         ಇದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದರು.ಬೆಳಗಾವಿಯಲ್ಲಿ ಡಿಸೆಂಬರ್ 10 ರಂದು ಅಧಿವೇಶನ ಆರಂಭವಾಗಲಿದ್ದು, ಅಂದು ಮಧ್ಯಾಹ್ನ ಸುವರ್ಣ ಸೌಧದ ಮುಂಭಾಗದಲ್ಲಿ ಬೃಹತ್ ರೈತ ಸಮಾವೇಶ ಆಯೋಜಿಸಲಾಗಿದೆ. ಬೆಳಗಾವಿ. ಬಾಗಲಕೋಟೆ, ವಿಜಾಪುರ, ಧಾರವಾಡ, ಗದಗ್ ಮತ್ತು ಹಾವೇರಿಯಿಂದ ಸಹಸ್ರಾರು ಜನ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

          ಅಧಿವೇಶನದಲ್ಲಿ ಯಾವ್ಯಾವ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳಬೇಕು ಹಾಗೂ ಡಿಸೆಂಬರ್ ನಲ್ಲಿ ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು ಎನ್ನುವ ಕುರಿತು ಶೀರ್ಘ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap