ದಾವಣಗೆರೆ:
ಸಮಾಜದಲ್ಲಿ ನಡೆಯುವ ಅನ್ಯಾಯ, ಶೋಷಣೆ ಹಾಗೂ ಅತ್ಯಾಚಾರದ ವಿರುದ್ಧ ಮಾನವ ಹಕ್ಕುಗಳ ಮಹಿಳಾ ಜನ ಜಾಗೃತಿ ಸಮಿತಿಯವರು ಹೋರಾಟ ನಡೆಸಬೇಕೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.
ನಗರದ ರೋಟರಿ ಬಾಲಭವನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಮಹಿಳಾ ಜನ ಜಾಗೃತಿ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದಾವಣಗೆರೆ ಮಹಿಳಾ ವೇದಿಕೆ ಆರಂಭಿಸಿರುವುದು ಶ್ಲಾಘನೀಯವಾಗಿದೆ. ಈ ಸಂಘಟನೆಯಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಶೋಷಣೆಗಳ ವಿರುದ್ಧ ಹೋರಾಡಿ, ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕೆಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಮುಖಂಡ ಕೆ.ಜಿ.ಶಿವಕುಮಾರ್ ಮಾತನಾಡಿ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾದರೂ ಸಹ ಇನ್ನೂ ಅತ್ಯಾಚಾರ, ಶೋಷಣೆ ನಿಂತ್ತಿಲ್ಲ. ಮಹಿಳೆಯರು ನಿರಂತರ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ. ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಈ ಸಂಘಟನೆ ಮಾಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿ.ಆರ್.ಮೋಹನ್‍ರಾಜ್, ಅಧ್ಯಕ್ಷೆ ವಿಮಲಾ ಶಿವಕುಮಾರ್, ಕಲ್ಪನಾರಾಜ್, ಪ್ರಮೀಳಾ ಬಣಕಾರ್, ರೇಣುಕಾ, ಹೇಮಲತಾ, ವೀಣಾ, ಜಯಮ್ಮ, ಚಂದ್ರಕಲಾ, ಅನಿತಾ, ರವಿತಾ, ಹೊನ್ನಮ್ಮ ದೇವಬೆಳೆಕೆರೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ