ದಾವಣಗೆರೆ :
ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಡಿಸಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ ಮಾತನಾಡಿ, ಕೇಂದ್ರ ಸರ್ಕಾರವು ಹಿಂದಿ ಹೇರಿಕೆಯ ಮೂಲಕ ದೇಶದಲ್ಲಿರುವ ಸಾವಿರಾರು ಭಾಷೆಗಳನ್ನು ನಿರ್ನಾಮ ಮಾಡಿದೆ. ಇನ್ನು ಅಳಿದು ಉಳಿದ ಭಾಷೆಗಳನ್ನು ಮುಗಿಸಿ ಒಂದು ದೇಶ ಒಂದೇ ಭಾಷೆ ಎನ್ನುವ ಕೊನೆಯ ಇತ್ಯರ್ಥಕ್ಕಾಗಿ ಸ್ವಾತಂತ್ರ್ಯದ ನಂತರ ಸಂಚು ನಡೆಯುತ್ತಲೇ ಬರುತ್ತಿದೆ. ಇದರ ಅಂಗವಾಗಿ ಮಕ್ಕಳ ಹಕ್ಕು, ಪೋಷಕರ ಹಕ್ಕು ಎಂದು ನ್ಯಾಯಲಯದ ಆದೇಶ ತೋರಿಸಿ ಎಲ್ಲವನ್ನು ಆಂಗ್ಲಮಯ ಮಾಡಲಾಗುತ್ತಿದೆ. ಅಲ್ಲದೇ ಆರ್‍ಟಿಇ ಮೂಲಕ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿ ವ್ಯವಸ್ಥಿತವಾಗಿ ಸರಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸದೇ, ಶಿಕ್ಷಣದ ಗುಣಮಟ್ಟ ಹೆಚ್ಚಿಸದೇ ಬಡ ಮಕ್ಕಳಿಗೆ ಅನ್ಯಾಯ ಮಾಡಲಾಗಿದೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಶೌಚಾಲಯ, ಲ್ಯಾಬ್, ಆಟಿಕೆ ಸಾಮಗ್ರಿಗಳು, ಸರಿಯಾದ ಬೋಧನಾ ಸಿಬ್ಬಂದಿ ನೇಮಿಸದೆ ಇರುವ ಒಬ್ಬ ಶಿಕ್ಷಕರೇ ಸಭೆಗಳು, ಬಿಸಿಯೂಟ ವ್ಯವಸ್ಥೆ ಜೊತೆಗೆ ಬೋಧನೆಯನ್ನು ಮಾಡಬೇಕಾಗಿದೆ. ಹತ್ತು ಹಲವು ಕೆಲಸಗಳ ಜೊತೆ ಭೋದನಾ ಜವಾಬ್ದಾರಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಸರ್ಕಾರದ ಕೆಲ ನೀತಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಸರಿಯಾದ ಬೋಧನಾ ಸಿಬ್ಬಂದಿ ನೇಮಿಸಿ ಗುಣಮಟ್ಟದ ಶಿಕ್ಷಣ ಒದಗಿಸಿದರೆ ಶಾಲೆಗಳನ್ನು ಮುಚ್ಚುವ ಪ್ರಮೇಯವೇ ಒದಗಿ ಬರುವುದಿಲ್ಲ. ತಕ್ಷಣವೇ ವಿಲೀನ ಪ್ರಕ್ರಿಯೆಯನ್ನು ಸರ್ಕಾರ ಕೈಬಿಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಎಲ್.ಸಿ. ನೀಲಗಿರಿ, ರಾಜ್ಯ ಕಾರ್ಯಾಧ್ಯಕ್ಷ ರಾಧಾಕೃಷ್ಣ, ಪ್ರಧಾನ ಕಾರ್ಯದರ್ಶಿ ರಾಮಚಂದ್ರಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








