ಶಿರಾ:
2018-19ರ ಬಜೆಟ್ನಲ್ಲಿ ರಾಜ್ಯ ಎಸ್.ಸಿ/ಎಸ್.ಟಿ. ಸೇರಿದಂತೆ ಎಲ್ಲಾ ವರ್ಗದ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸುವಂತೆ ಭರವಸೆ ನೀಡಿದ್ದರೂ ಈವರೆವಿಗೂ ಉಚಿತ ಬಸ್ ನೀಡಿಲ್ಲ. ಈ ಕೂಡಲೇ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಬಸ್ ನೀಡುವಂತೆ ಒತ್ತಾಯಿಸಿ ಶಿರಾ ನಗರದಲ್ಲಿ ಎ.ಬಿ.ವಿ.ಪಿ. ವತಿಯಿಂದ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದ ವೃತ್ತದಿಂದ ಹೊರಟ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ತೆರಳಿ ಉಚಿತ ಬಸ್ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಎ.ಬಿ.ವಿ.ಪಿ. ತಾಲ್ಲೂಕು ಸಂಚಾಲಕ ಯೋಗೀಶ್ ಮಾತನಾಡಿ ಕಳೆದ ವರ್ಷ ರಾಜ್ಯ ಸರ್ಕಾರ ಉಚಿತ ಬಸ್ ಪಾಸ್ ನೀಡುವುದಾಗಿ ಬಜೆಟ್ನಲ್ಲಿ ಆದೇಶ ಹೊರಡಿಸಿ ನಂತರ ಕೊಟ್ಟ ಮಾತನ್ನು ನಡೆಸದೆ ವಿದ್ಯಾರ್ಥಿಗಳನ್ನು ವಂಚಿಸಿದೆ. ಸರ್ಕಾರ ಉಚಿತ ಬಸ್ ಪಾಸ್ ಘೋಷಣೆ ಮಾಡಿದಾಗ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಭವಿಷ್ಯದ ಬಗ್ಗೆ ಬೆಟ್ಟದಷ್ಟು ಕನಸು ಕಮಡಿದ್ದರಾದರೂ ಸರ್ಕಾರ ಕೊಟ್ಟ ಮಾತು ತಪ್ಪಿದಾಗ ಅನೇಕ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನೇ ರೂಪಿಸಿಕೊಳ್ಳಲಾಗಲಿಲ್ಲ. ಈ ವರ್ಷವಾದರೂ ಸರ್ಕಾರ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ನಗರ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ ಸರ್ಕಾರಿ ಸಾರಿಗೆ ಬಸ್ಸುಗಳ ಬಹಳಷ್ಟು ಲಾಭ ಲಭ್ಯವಾಗಬೇದ್ದು ಗ್ರಾಮೀಣ ವಿದ್ಯಾರ್ಥಿಗಳಿಗೆ. ಇಂದಿಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅಗತ್ಯವಿದ್ದು ಸಣ್ಣಪುಟ್ಟ ಹಳ್ಳಿಗಳಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು ಸರ್ಕಾರ ಕೂಡಲೇ ಉಚಿತ ಪಾಸ್ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಶಿರಾ ಭಾಗದ ಗ್ರಾಮೀಣ ಭಾಗದಲ್ಲಿ ಕೆಲವೆಡೆ ಸಾರಿಗೆ ಬಸ್ಗಳು ಇದ್ದರೂ ಶಾಲಾಕಾಲೇಜುಗಳ ಸಮಯಕ್ಕೆ ಸರಿಯಾಗಿ ಬಂದು ಹೋಗುತ್ತಿಲ್ಲ. ಅಮರಾಪುರ, ಕರೇಮಾದನಹಳ್ಳಿ, ಹುಯಿಲ್ದೊರೆ, ಮದಲೂರು ಭಾಗಗಳಿಂದ ಶಿರಾ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ಗಳು ಲಭ್ಯವಾಗುತ್ತಿಲ್ಲ. ಈ ಕೂಡಲೇ ಸರ್ಕಾರ ಗಮನಹರಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಉಮೇಶ್, ಸಿದ್ದಾರ್ಥ, ಚಂದನ, ಕವಿತ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಿ ನಂತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ತಮ್ಮ ಬೇಡಿಕೆಯ ಮೂಲಕ ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








