ಶಿರಾ
ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಬರಗೂರು ಗ್ರಾಮ ಪಂಚಾಯ್ತಿಗೆ ಸೇರಿದ ಬೀರನಹಳ್ಳಿ ಗ್ರಾಮದಲ್ಲಿನ ಆಶ್ರಯ ನಿವೇಶನಕ್ಕೆಂದು ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯು ಗ್ರಾಮ ಪಂಚಾಯ್ತಿ ವಶಕ್ಕೆ ನೀಡದೆ ನಿರ್ಲಕ್ಷ್ಯ ತಾಳಿದ್ದು ಈ ಕೂಡಲೇ ಪಂಚಾಯ್ತಿ ವಶಕ್ಕೆ ನೀಡುವಂತೆ ಒತ್ತಾಯಿಸಿ ಬೀರನಹಳ್ಳಿ ಗ್ರಾಮದ ನಿರಾಶ್ರಿತ ಅರ್ಹ ಫಲಾನುಭವಿಗಳು ಸೋಮವಾರದಂದು ಶಿರಾದ ತಹಸೀಲ್ದಾರ್ ಕಚೆರಿಯ ಮುಂದೆ ಅನಿರ್ದಿಷ್ಟ ಕಾಲದ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೀರನಹಳ್ಳಿ ಗ್ರಾಮದಲ್ಲಿ ಪ.ಜಾತಿಯ ಜನಾಂಗದವರಿದ್ದು ಇದೇ ಗ್ರಾಮದಲ್ಲಿ ಕುಂಚಿಟಿಗರು ಹಾಗೂ ಇತರೆ ಜನಾಂಗದವರೂ ಇದ್ದಾರೆ. ಹಾಲಿ ವಾಸವಾಗಿರುವ ಗ್ರಾಮ ಠಾಣಾ ಜಾಗದಲ್ಲಿ ನಿವೇಶನಗಳ ಕೊರತೆ ಇದ್ದು ಜನಸಂಖ್ಯೆ ಜಾಸ್ತಿ ಇದೆ. 2010-11ರಲ್ಲಿ ನಿರಾಶ್ರಿತರಿಗೆ ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಮನವಿ ನೀಡಿದ ಹಿನ್ನೆಲೆಯಲ್ಲಿ ಹಾರೋಗೆರೆ ಸ.ನಂ. 24 ರಲ್ಲಿ ಸರ್ಕಾರಿ ಗೋಮಾಳದ ಜಮೀನಿನಲ್ಲಿ 32.29 ಎಕರೆ ಜಮೀನಿನ ಪೈಕಿ 11 ಎಕರೆ ಜಮೀನನ್ನು 1997-98 ರಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನಕ್ಕೆಂದು ಮಂಜೂರು ಮಾಡಲಾಗಿತ್ತು.
ಎಷ್ಟೇ ಮನವಿ ಸಲ್ಲಿಸಿದರೂ ಈ ತನಕವೂ ಈ ಜಮೀನಿನ ಆಕಾರ್ ಬಂದ್ ದುರಸ್ತ್ ಆಗಿಲ್ಲ. ಉಳಿಕೆ ಜಮೀನಿನಲ್ಲಿರುವ ನಿವೇಶನಗಳನ್ನು ಅರ್ಹರಿಗೆ ಮಂಜೂರು ಮಾಡುವಂತೆ ಸಲ್ಲಿಸಿದ ದೂರುಗಳೆಲ್ಲವೂ ವಿಫಲಗೊಂಡಿದ್ದರಿಂದ ಗ್ರಾಮಸ್ಥರು ವ್ಯಾಪಕ ಪ್ರತಿಭಟನೆಗೆ ಮುಂದಾಗಲು ಕಾರಣವಾಗಿದೆ ಎನ್ನಲಾಗಿದೆ.
ಈ ಹಿಂದೆ ತಹಸೀಲ್ದಾರ್ ಅವರು ಸರ್ವೇ ಅಧಿಕಾರಿಗಳೊಡನೆ ಸ್ಥಳ ತನಿಖೆ ಮಾಡಿ 2017-18ರಲ್ಲಿ 2.30 ಎಕರೆ ಜಮೀನಿನ ನಕ್ಷೆ ತಯಾರಿಸಿ ನಿವೇಶನ ಮಂಜೂರಾತಿಗೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು.
ಸರ್ಕಾರದಿಂದ ಆಶ್ರಯ ನಿವೇಶನಗಳಿಗೆ ನೀಡುವಂತೆ ಆದೇಶವೂ ಆಯಿತಾದರೂ ಈ ತನಕವೂ ಸದರಿ ಜಮೀನನ್ನು ಗ್ರಾಮ ಪಂಚಾಯ್ತಿಗೆ ವಹಿಸಿಯೇ ಇಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಡಿ.ಎಸ್.ಎಸ್. ಸಂಚಾಲಕ ಟೈರ್ ರಂಗನಾಥ್ ಮಾತನಾಡಿ, ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಸರ್ಕಾರ ಜಮೀನು ಮಂಜೂರು ಮಾಡಿದ್ದರೂ, ಕಂದಾಯ ಇಲಾಖೆ ಗ್ರಾಮ ಪಂಚಾಯ್ತಿಗೆ ನಿವೇಶನಗಳ ಜಮೀನನ್ನು ವರ್ಗಾವಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಬೀರನಹಳ್ಳಿ ಹನುಮಂತರಾಯಪ್ಪ ಮಾತನಾಡಿ, ಬೀರನಹಳ್ಳಿ ಗ್ರಾಮಸ್ಥರ ಬವಣೆಯನ್ನು ಯಾರೂ ಕೇಳದಂತಾಗಿದೆ. ನ್ಯಾಯ ಸಿಗುವವರೆಗೂ ತಹಸೀಲ್ದಾರ್ ಕಛೇರಿಯ ಮುಂದೆ ಅಡುಗೆ ತಯಾರಿಸಿಕೊಂಡು ಅಲ್ಲಿಯೇ ಅನಿರ್ದಿಷ್ಟ ಕಾಲದ ಧರಣಿ ನಡೆಸುತ್ತೇವೆ ಎಂದರು.
ಸ್ಥಳಕ್ಕೆ ಶಾಸಕ ಬಿ.ಸತ್ಯನಾರಾಯಣ್ ಭೇಟಿ ನೀಡಿ 2010-11 ರಿಂದಲೂ ಬೀರನಹಳ್ಳಿ ಗ್ರಾಮದ ನಿರಾಶ್ರಿತರ ಈ ಸಮಸ್ಯೆ ಬಗೆಹರಿದಿಲ್ಲ. ಈ ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ತಹಸೀಲ್ದಾರ್ ನಹಿದಾ ಜಮ್ ಜಮ್ ಭೇಟಿ ನೀಡಿ ಮಾತನಾಡಿ, ನಾನು ನೂತನವಾಗಿ ಅಧಿಕಾರ ವಹಿಸಿಕೊಂಡಿದ್ದು ಇದಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.ದಲಿತ ಮುಖಂಡರಾದ ರಾಜು ಕೆ., ಡಿ.ಸಿ.ರಾಜಣ್ಣ, ಕದುರಪ್ಪ, ಕೋರ್ಟ್ ಶಿವಣ್ಣ, ಕಳುವರಹಳ್ಳಿ ಶಿವಣ್ಣ, ಚಿರತಹಳ್ಳಿ ನಾಗರಾಜು, ಕಾರೆಹಳ್ಳಿ ರಂಗನಾಥ್ ಸೇರಿದಂತೆ ಬೀರನಹಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
