ಚಳ್ಳಕೆರೆ
ಭೀಕರ ಬರದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಕ್ಷೀಣಿಸುತ್ತಿದ್ದು, ಪ್ರಸ್ತುತ ವರ್ಷವೂ ಸಹ ರೈತ ತನ್ನ ಜಮೀನಲ್ಲಿ ಬೆಳೆ ಬೆಳೆಯುವ ಆಸೆಯನ್ನು ಕೈಬಿಟ್ಟು, ನಿರಾಸೆಯಿಂದ ಆಕಾಶದತ್ತ ನೋಡುವ ದೃಶ್ಯ ಸಾಮಾನ್ಯವಾಗಿದೆ. ಇದು ಸಾಲದು ಎಂಬಂತೆ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದ್ದು, ನೀರು ಕೊಡಿ ಎಂದು ಆಗ್ರಹಿಸಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಧರಣಿ ನಡೆಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಡಿಹಳ್ಳಿ ಗ್ರಾಮದಲ್ಲಿ ಕಳೆದ ಸುಮಾರು ಎರಡು ತಿಂಗಳಿನಿಂದ ಒಂದು ಕೊಡ ಕುಡಿಯುವ ನೀರಿಗೂ ಅಲ್ಲಿನ ಜನತೆ ಪರಿತಪಿಸುತ್ತಿದ್ದು, ಗ್ರಾಮದಲ್ಲಿರುವ ಎಲ್ಲಾ ಬೋರ್‍ಗಳು ನೀರಿಲ್ಲದೆ ಒಣಗಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮ ಪಂಚಾಯಿತಿ ಆಡಳಿತ ವತಿಯಿಂದ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುತ್ತಿತ್ತು. ಆದರೆ, ಮೂರು ದಿನಗಳಿಗೆ ಒಮ್ಮೆ ಮಾತ್ರ ಇಡೀ ಗ್ರಾಮಕ್ಕೆ 5 ಟ್ಯಾಂಕರ್‍ಗಳಲ್ಲಿ ನೀರು ಪೂರೈಸುತ್ತಿದ್ದು, ಇದು ಸಾಕಾಗುತ್ತಿರಲಿಲ್ಲ.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಪೂರೈಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಆದರೆ, ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಖಾಸಗಿಯಾಗಿ ನೀರು ಪೂರೈಸುತ್ತಿದ್ದ ಮಾಲೀಕ ಶಿವಣ್ಣ, ನನಗೆ ನೀರು ಪೂರೈಸಿದ ಸುಮಾರು 2.25 ಲಕ್ಷ ಹಣ ಪಾವತಿ ಮಾಡಿಲ್ಲ, ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯಾನಿರ್ವಹಣಾಧಿಕಾರಿಗಳಾಲಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಲಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ನನಗೆ ನನ್ನ ಬಾಕಿ ಹಣ ಪಾವತಿ ಮಾಡುವ ತನಕ ನೀರು ಸರಬರಾಜು ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದ್ದಾನೆ.
ಇದರಿಂದ ನೊಂದ ನೂರಾರು ಗ್ರಾಮಸ್ಥರು ಸೋಮವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಆಗಮಿಸಿ ಕಚೇರಿಯ ಮುಂದೆ ಖಾಲಿ ಕೊಡಗಳನ್ನು ಇಟ್ಟು ಧರಣಿ ನಡೆಸಿದರು. ನಂತರ ಪ್ರಭಾರೆ ಅಧ್ಯಕ್ಷೆ ತಿಪ್ಪಮ್ಮನವರಿಗೆ ಮನವಿ ಪತ್ರ ನೀಡಿ, ಟ್ಯಾಂಕ್ ಮಾಲೀಕರಿಗೆ ಹಣ ಪಾವತಿ ಮಾಡಬೇಕು, ಗ್ರಾಮಕ್ಕೆ ದಿನಂಪ್ರತಿ 7 ಲೋಡ್ ನೀರು ಪೂರೈಸಬೇಕು, ಗ್ರಾಮದಲ್ಲಿ ಸ್ವಚ್ಚತೆ ಕಣ್ಮರೆಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಪ್ರಭಾರೆ ಅಧ್ಯಕ್ಷೆ ತಿಪ್ಪಮ್ಮ, ಹಣ ಪಾವತಿ ಮಾಡದೇ ಇರುವ ಬಗ್ಗೆ ಸಂಬಂಧಪಟ್ಟ ಪಿಡಿಒರವರಿಗೆ ವಿಚಾರಿಸಿ ಹಣ ಪಾವತಿಸುವ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಎಲ್ಲೆಡೆ ನೀರಿನ ಸಮಸ್ಯೆ ಇದ್ದು, ಲಭ್ಯವಾಗುವ ನೀರನ್ನೇ ಮಿತವಾಗಿ ಬಳಸಿ ಸಹಕರಿಸುವಂತೆ ಮನವಿ ಮಾಡಿದರು.
ಗ್ರಾಮದ ಮುಖಂಡ ಮಂಜುನಾಥ ಮಾತನಾಡಿ, ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳಿಗೆ ಗ್ರಾಮದ ಎಲ್ಲಾ ಬೋರ್‍ವೆಲ್‍ಗಳು ತಟಸ್ಥವಾಗಿವೆ, ಪ್ರತಿನಿತ್ಯ ಕುಡಿಯುವ ನೀರು ಪಡೆಯಲು ಗ್ರಾಮದ ಜನರು ಕಿಲೋಮೀಟರ್ ಗಟ್ಟಲೇ ಅಲೆಯಬೇಕಿದೆ. ಎಲ್ಲಿಯೂ ನೀರು ಸಿಗುತ್ತಿಲ್ಲ. ಗ್ರಾಮದ ಸುತ್ತಮುತ್ತಲಿರುವ ಕೆಲವೊಂದು ಕೊಳವೆ ಬಾವಿಗಳಲ್ಲೂ ನೀರಿಲ್ಲ. ನಮಗೆ ಟ್ಯಾಂಕರ್ ನೀರೇ ಆಧಾರವಾಗಿದ್ದು, ದಯಮಾಡಿ ನೀರು ಪೂರೈಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡ ಪಿ.ವಿಶ್ವನಾಥ, ತಿಪ್ಪಮ್ಮ, ಲಕ್ಷ್ಮಿದೇವಿ, ಶರಣಮ್ಮ, ಶಾರದಮ್ಮ, ಗೌರಮ್ಮ, ಸೌಂದರ್ಯ, ಟಿ.ಸಿದ್ದಮ್ಮ, ರೇಣುಕಮ್ಮ, ಶಾಂತಲಕ್ಷ್ಮಿ, ಲಕ್ಷ್ಮಕ್ಕ, ಗೋಪಮ್ಮ, ಎಂ.ಬೊಮ್ಮಲಿಂಗ ಮುಂತಾದವರು ಭಾಗವಹಿಸಿದ್ದರು.