ಉಪನಾಲೆ 24 ಕ್ಕೆ ಹೇಮಾವತಿ ಹರಿಸಲು ಆಗ್ರಹ..!

ತುಮಕೂರು
    ಹೇಮಾವತಿ ಉಪನಾಲೆ 24 ಕ್ಕೆ ಈ ಕೂಡಲೇ ಹೇಮಾವತಿ ನೀರನ್ನು ಹರಿಸಬೇಕೆಂದು ಆಗ್ರಹಿಸಿ ಗುಬ್ಬಿ ತಾಲ್ಲೂಕು ಎಸ್.ಕೊಡಗೀಹಳ್ಳಿ, ಕುನ್ನಾಲ ಮತ್ತು ಚಂಗಾವಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರು ಮಂಗಳವಾರ ಬೆಳಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಯಕ್ಷ ಎ.ಗೋವಿಂದರಾಜು ಅವರ ನೇತೃತ್ವದಲ್ಲಿ ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ನಡೆಸಿದರು.
      ಹೇಮಾವತಿ ಮುಖ್ಯ ನಾಲೆಯ 152 ನೇ ಕಿಲೋಮೀಟರ್‍ನಲ್ಲಿ 24 ನೇ ಉಪನಾಲೆ ಇದೆ. ಕುಣಿಗಲ್ ಕೆರೆಗೆ ಮತ್ತು ಸಿ.ಎಸ್.ಪುರ ಕೆರೆಗೆ ನೀರು ಹರಿಸುವಾಗ ಮಾತ್ರ ಈ 24 ನೇ ಉಪನಾಲೆಗೆ ನೀರು ಬಿಡಲು ಸಾಧ್ಯ. ವಾಸ್ತವ ಹೀಗಿದ್ದರೂ ಪ್ರಸ್ತುತ ಕುಣಿಗಲ್ ಮತ್ತು ಸಿ.ಎಸ್.ಪುರ ಕೆರೆಗೆ ನೀರನ್ನು ಹರಿಸುತ್ತಿದ್ದು, ಮಧ್ಯ  ಇರುವ 24 ನೇ ಉಪನಾಲೆಗೆ ಮಾತ್ರ ನೀರು ಬಿಡುತ್ತಿಲ್ಲ. ಇದು ಸಹಜವಾಗಿ ಈ `Áಗದ ರೈತರಿಗೆ ಆತಂಕ ಉಂಟು ಮಾಡಿದೆ ಎಂದು ಈ ಸಂದರ್ಭದಲ್ಲಿ ವಿವರಿಸಲಾಯಿತು.
     ಪ್ರಸ್ತುತ 23 ಮತ್ತು 25 ನೇ ಉಪನಾಲೆಗೆ ನೀರು ಬಿಡಲಾಗುತ್ತಿದೆ. ಇವೆರಡರ ನಡುವೆ ಇರುವ 24 ನೇ ಉಪನಾಲೆಗೆ ಮಾತ್ರ ನೀರನ್ನು ಬಿಡದಿರುವುದು ಪ್ರಶ್ನಾರ್ಹವಾಗಿದೆ ಎಂದು ರೈತರು ಹೇಳಿದರು.ಈಗ ನೀರನ್ನು ಹರಿಸದಿದ್ದರೆ ಇದೊಂದೇ ನಾಲೆಗೆ ಪ್ರತ್ಯೇಕವಾಗಿ ನೀರನ್ನು ಹರಿಸಲು ಸಾಧ್ಯವೇ ಆಗುವುದಿಲ್ಲ ಎಂದು ರೈತರು ತಿಳಿಸಿದರು.
      ಕೂಡಲೇ ನೀರನ್ನು ಹರಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮುಂದುವರೆಸಬೇಕಾಗುತ್ತದೆ ಎಂದು ರೈತರು ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರು ಮನವಿ ಪತ್ರ ಸ್ವೀಕರಿಸಿದರು. ಬಳಿಕ ಗೋವಿಂದರಾಜು ಮತ್ತು ಇತರ ಮುಖಂಡರುಗಳು ಜಿಲ್ಲಾಧಿಕಾರಿ ಕಚೇರಿಯಲ್ಲೇ ಹೇಮಾವತಿ ನಾಲಾ ವಲಯದ ಇಂಜಿನಿಯರ್ ಜೊತೆಗೆ ಚರ್ಚಿಸಿದರು. “ನಮಗೆ ಹೇಮಾವತಿ ನೀರನ್ನು ಬಿಡಬೇಕು ಅಷ್ಟೇ. ಇಲ್ಲದಿದ್ದರೆ ಹೋರಾಟದ ಮಾರ್ಗವನ್ನು ನಾವು ಬಿಡಲಾಗದು” ಎಂದು ರೈತ ಮುಖಂಡರುಗಳು ಸ್ಪಷ್ಟಪಡಿಸಿದರು.
ನಾಲೆ ಅಗಲೀಕರಣಕ್ಕೆ ಆಗ್ರಹ
      ಈ ಸಂದರ್ಭದಲ್ಲಿ “ಪ್ರಜಾಪ್ರಗತಿ” ಜೊತೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು “ತುಮಕೂರು ಜಿಲ್ಲೆಗೆ ನಿಗದಿಪಡಿಸಲಾದ 24 ಟಿ.ಎಂ.ಸಿ. ಹೇಮಾವತಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಬೇಕಾದರೆ ಮೊದಲಿಗೆ ಹೇಮಾವತಿ ನಾಲೆಯನ್ನು ಅಗಲೀಕರಣಗೊಳಿಸಬೇಕು” ಎಂದು ಒತ್ತಿ ಹೇಳಿದರು.
 
     “ಕಳೆದ 25 ದಿನಗಳಿಂದ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿದು ಬರುತ್ತಿದೆ. ಆದರೆ ಹರಿದುಬಂದಿರುವ ನೀರಿನ ಪ್ರಮಾಣ 25 ದಿನಗಳಲ್ಲಿ ಕೇವಲ 2.5 ಟಿ.ಎಂ.ಸಿ.ಯಷ್ಟು ಮಾತ್ರ. ಇನ್ನು ಈ ನೀರು ಡಿಸೆಂಬರ್‍ವರೆಗೆ ಬಂದರೂ ಒಟ್ಟು 15 ಟಿ.ಎಂ.ಸಿ. ಆಗಬಹುದು” ಎಂದು ಅವರು ಉದಾಹರಿಸಿದರು. 

Recent Articles

spot_img

Related Stories

Share via
Copy link
Powered by Social Snap