ಹುಳಿಯಾರು:
ಅಲೆಮಾರಿ ಸಮುದಾಯಗಳ ಮೂಲಭೂತ ಹಕ್ಕುಗಳಿಗೆ,ಸೌಲಭ್ಯಗಳಿಗೆ ಒತ್ತಾಯಿಸಿ ಹುಳಿಯಾರು ನಾಡಕಚೇರಿ ಎದುರು ಅಲೆಮಾರಿ ಬುಡಕಟ್ಟು ಮಹಾಸಭಾ ಚಿಕ್ಕನಾಯಕನಹಳ್ಳಿ ತಾಲ್ಲೂಕುವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಯ ಎರಡನೇ ದಿನವಾದ ಬುಧವಾರ ಖುದ್ದು ತಿಪಟೂರು ಉಪವಿಭಾಗದ ಉಪವಿಭಾಗಾಧಿಕಾರಿ ಉಮೇಶ್ ಚಂದ್ರ ಸಂಧಾನ ನಡೆಸಿದರೂ ಫಲಿಸದೇ ಧರಣಿನಿರತರು ಖುದ್ದು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬರಬೇಕು,ಜೊತೆಗೆ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಅಲೆಮಾರಿ, ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶದ ಅಧಿಕಾರಿಗಳು ಬಂದು ನಮ್ಮೊಂದಿಗೆ ಮಾತುಕತೆ ನಡೆಸಿದಾಗ ಮಾತ್ರವೇ ನಾವು ಪ್ರತಿಭಟನೆ ಕೊನೆಗೊಳಿಸಬಹುದೇ ಹೊರತು ಅವರ ಬದಲು ಇನ್ಯಾರೇ ಬಂದು ಏನೇ ಭರವಸೆ ನೀಡಿದರೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಪಟ್ಟು ಹಿಡಿದರು.ಹೀಗಾಗಿ ಪ್ರತಿಭಟನೆ ಗುರುವಾರಕ್ಕೆ ಮುಂದುವರಿಯಿತು.
ಅಲೆಮಾರಿ ಜನಾಂಗಕ್ಕೆ ಸೇರಿದ ಹಂದಿಜೋಗಿ,ದಕ್ಕಲಿಗ,ದೊಂಬಿದಾಸ,ಶಿಳ್ಳೇಕ್ಯಾತ,ಕೊರಮ,ದೊಂಬರ,ಕರಡಿ ಖಲಂದರ್ , ಪಿಂಜಾರ,ಶಿಳ್ಳೆಕ್ಯಾತ,ಆದಿ ಕರ್ನಾಟಕ,ಚನ್ನದಾಸ,ಪಿಂಜಾರ,ಸುಡುಗಾಡು ಸಿದ್ಧ ಮತ್ತಿತರ ಜಾತಿಯವರು ನಿವೇಶನಭಾಗ್ಯ,ಹಕ್ಕುಪತ್ರ ಸೇರಿದಂತೆ ಹತ್ತು ಹಲವಾರು ಬೇಡಿಕೆಗಳಿಗೆ ಒತ್ತಾಯಿಸಿ ಹುಳಿಯಾರಿನ ನಾಡ ಕಚೇರಿ ಎದುರು ಧರಣಿ ನಡೆಸಿದ್ದು ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಸೋಮಪ್ಪ ಕಡಕೋಳ ಆಗಮಿಸಿ ಧರಣಿ ನಿರತರೊಂದಿಗೆ ಮಾತುಕತೆ ನಡೆಸಿದರೂ ಕೂಡ ಖುದ್ದು ಜಿಲ್ಲಾಧಿಕಾರಿಗಳೇ ಬರ ಬೇಕೆಂದು ಪಟ್ಟು ಹಿಡಿದಿದ್ದರಿಂದ ಪ್ರತಿಭಟನೆ ಎರಡನೇ ದಿನವಾದ ಬುಧವಾರಕ್ಕೆ ಮುಂದುವರಿದಿತ್ತು.ಇಂದು ಮಧ್ಯಾಹ್ನ ಉಪವಿಭಾಗಾಧಿಕಾರಿ ಉಮೇಶ್ ಚಂದ್ರರವರು ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಆಗಮಿಸಿ ಪ್ರತಿಭಟನಾಕಾರರ ಅಹವಾಲು ಕೇಳಿದರು.ಸಮಸ್ಯೆ ಆಲಿಸಿದರು.
ನಿವೇಶನದ ಸಮಸ್ಯೆ ಬಗ್ಗೆ ಕಂದಾಯ ಇಲಾಖೆ ಗಮನಹರಿಸಿದ್ದು ಈಗಾಗಲೇ ಹುಳಿಯಾರು ಸಮೀಪದ ಗೌಡಗೆರೆ ಹಾಗೂ ಕಂಪನಹಳ್ಳಿ ಸಮೀಪ ಜಮೀನು ಗುರುತಿಸಲಾಗಿದ್ದು ನೀವುಗಳು ಒಪ್ಪಿದಲ್ಲಿ ಶೀಘ್ರವೇ ನಿವೇಶನ ಕೂಡಮಾಡಬಹುದು ಎಂದರು.ಜಿಲ್ಲೆಯಲ್ಲಿ ಹೇಮಾವತಿ ನೀರಿನ ಸಮಸ್ಯೆ ಬಿಗಡಾಯಿಸಿದ್ದು ಜಿಲ್ಲಾಧಿಕಾರಿಗಳು ಬರಲು ಸಮಸ್ಯೆಯಾಗುತ್ತದೆ.ನೀವು ಧರಣಿ ಹಿಂಪಡೆದಲ್ಲಿ ಒಂದು ವಾರದೊಳಗೆ ಜಿಲ್ಲಾಧಿಕಾರಿಗಳೊಂದಿಗೆ ನಿಮ್ಮನ್ನು ಸಭೆ ಸೇರಿಸುವ ಏರ್ಪಾಡು ಮಾಡುವೆ ಎಂದರು.
ಆದರೆ ಇದಕ್ಕೆ ಬಗ್ಗದ ಧರಣಿ ನಿರತರು ಈ ಹಿಂದೆ ಇದೇ ತಾಲ್ಲೂಕಿನಲ್ಲಿ ತಹಶೀಲ್ದಾರ್ ಆಗಿದ್ದಾಗಲೂ ಕೂಡ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಉತ್ತರವನ್ನು ನೀಡಿದ್ದಿರಿ.ಈಗ ಉಪ ವಿಭಾಗಾಧಿಕಾರಿಯಾಗಿ ಬಂದು ಮತ್ತೆ ಇದೇ ಮಾತನ್ನು ಆಡುತ್ತಿದ್ದರಿ.ನಮ್ಮದು ಹತ್ತು ಹಲವಾರು ಸಮಸ್ಯೆಗಳಿದ್ದು ಖುದ್ದು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬರಬೇಕು.ಅವರೊಂದಿಗೆ ನಾಲ್ಕು ಇಲಾಖೆಯ ಅಧಿಕಾರಿಗಳು ಕೂಡ ಬಂದು ನಮ್ಮ ಸಮಸ್ಯೆ ಆಲಿಸಿ ಪರಿಹಾರ ಸೂಚಿಸಬೇಕು ಅದುವರೆಗೂ ಸ್ಥಳ ಬಿಟ್ಟು ಕದಲುವ ಎಂದು ಪಟ್ಟು ಹಿಡಿದರು.
ಹೀಗಾಗಿ ಧರಣಿ ಮುಂದುವರೆದಿದೆ.ಈ ಸಂದರ್ಭದಲ್ಲಿ ತಹಸೀಲ್ದಾರ್ ಸೋಮಪ್ಪ ಕಡಗೋಳ,ವೃತ್ತ ನಿರೀಕ್ಷಕ ಸುರೇಶ್,ಪಿಎಸ್‍ಐ ವಿಜಯ್ ಕುಮಾರ್,ಕಂದಾಯ ತನಿಖಾಧಿಕಾರಿ ಮಂಜುನಾಥ್, ಅಲೆಮಾರಿ ಬುಡಕಟ್ಟು ಮಹಾಸಭಾದ ತಾಲ್ಲೂಕು ಅಧ್ಯಕ್ಷ ಹುಳಿಯಾರು ರಾಜಣ್ಣ,ಹನುಮಂತಪುರ ರಾಜಪ್ಪ ,ಜಯಚಂದ್ರ ನಗರ ಮಂಜಮ್ಮ,ನಾಸಿರ್ ಹುಸೇನ್,ಚಿಕ್ಕನಾಯಕನಹಳ್ಳಿಯ ರಂಗನಾಥ್, ಬಶೀರ್ ಸೇರಿದಂತೆ ಹನುಮಂತಪುರ,ಡಿಂಕನಹಳ್ಳಿ,ಜಯಚಂದ್ರ ನಗರ,ಹುಳಿಯಾರಿನ ಶಂಕರಪುರ,ಅಣೇಪಾಳ್ಯ ಮುಂತಾದ ಭಾಗಗಳಿಂದ ಅಲೆಮಾರಿ ಸಮುದಾಯದ ನೂರಾರು ಮಂದಿ ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
