ಚಿತ್ರದುರ್ಗ:
ವಿಜ್ಞಾನಿಗಳ ಜೊತೆ ದೇಶದ ಪ್ರಧಾನಿ ಮೋದಿ ಇದ್ದದ್ದು, ನಮಗೆ ಸಂತೋಷ. ಆದರೆ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಸಾವು-ನೋವು ಸಂಭವಿಸಿ ಆಸ್ತಿ, ಬೆಳೆನಷ್ಟದಿಂದ ನಿರಾಶ್ರಿತರಾಗಿರುವವರಿಗೆ ಧೈರ್ಯ ತುಂಬಿ ಸಾಂತ್ವನ ಹೇಳುವ ಕೆಲಸವನ್ನು ಮೋದಿ ಮಾಡಲಿಲ್ಲ ಅದು ನಮಗೆ ವೇದನೆಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನೆರೆ ಹಾವಳಿಯಿಂದ ಎಲ್ಲವನ್ನು ಕಳೆದುಕೊಂಡು ನಿರ್ಗತಿಕರಾಗಿರುವವರಿಗಾಗಿ ತೆರೆದಿರುವ ಗಂಜಿ ಕೇಂದ್ರಗಳು ಮುಚ್ಚುವ ಸ್ಥಿತಿ ತಲುಪಿವೆ. ಹಾಗಾಗಿ ಉತ್ತರ ಕರ್ನಾಟಕದ ನೆರೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಅಗತ್ಯ ನೆರವು ನೀಡದಿರುವುದು ಇನ್ನು ದುರಂತ ಎಂದು ಆಪಾದಿಸಿದರು.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜೊತೆ ಈಗಾಗಲೆ ಸಭೆ ನಡೆಸಿ ಅಲ್ಲಿನ ಪರಿಸ್ಥಿತಿ ಕುರಿತು ಪೂರ್ಣವಾಗಿ ಮನವರಿಕೆ ಮಾಡಿದ್ದೇವೆ. ರಾಜ್ಯ ಸರ್ಕಾರ ಎಲ್ಲವನ್ನು ಸಮರ್ಥವಾಗಿ ನಿಭಾಯಿಸಬೇಕು. ಅಲ್ಲಿನ ರೈತರ ಹೊಲಗಳೆಲ್ಲಾ ಪ್ರವಾಹಕ್ಕೆ ಕೊಚ್ಚಿ ಹೋಗಿ ಹೊಲಗಳಲ್ಲಿ ಐದಾರು ಅಡಿ ಮಣ್ಣಿನ ರಾಶಿ ಬಿದ್ದಿದೆ.ನೆರೆ ಹಾವಳಿಯಿಂದ 24 ಸಾವಿರ ಕೋಟಿ ರೂ.ನಷ್ಟವಾಗಿದೆ. ನಾಲ್ಕು ಸಾವಿರ ಕೋಟಿ ಪರಿಹಾರ ಕೊಡಿ ಎಂದು ಮುಖ್ಯಮಂತ್ರಿ ಕೇಂದ್ರಕ್ಕೆ ಕೇಳಿರುವುದು ಯಾವ ನ್ಯಾಯ. ಕೇಂದ್ರ ಸರ್ಕಾರಕ್ಕೆ ಇಡುವ ಬೇಡಿಕೆ ಲೆಕ್ಕಾಚಾರ ವಾಗಿರಬೇಕು. ಊಹಾಪೋಹದ ಲೆಕ್ಕ ಬೇಡ. ವಾಸ್ತವಕ್ಕೆ ಹತ್ತಿರವಿರಬೇಕು. ನೆರೆ ಪರಿಹಾರ ಯಾವ ಕಾರಣಕ್ಕೆ ಕೊಡಲ್ಲ ಎಂದು ಕೇಂದ್ರಕ್ಕೆ ಕೇಳುವ ನೈತಿಕತೆ ರಾಜ್ಯಕ್ಕೆ ಇರಬೇಕು ಎಂದರು.
ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿ ಅಲ್ಲಿನ ಸಂಸದರು ಜನರ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರದ ಮೇಲೆ ಬಿಗಿ ಒತ್ತಡ ಏರಿ ಸವಲತ್ತುಗಳನ್ನು ಪಡೆದುಕೊಂಡಂತೆ ಕರ್ನಾಟಕದ ಸಂಸದರು ರಾಜ್ಯದ ಅಭಿವೃದ್ದಿಗೆ ಹೆಚ್ಚಿನ ಗಮನ ಕೊಡಬೇಕು. ಜನ ಬೀದಿಗೆ ಬರುವ ಸಂದರ್ಭ ಎದುರಾಗಿದೆ. ರಾಯಭಾಗ ಗಡಿನಾಡಿನ ತಾಲೂಕು ಅಥಣಿಯಲ್ಲಿ ಪ್ರವಾಹ ಬರುವ ಎರಡು ದಿನ್ನ ಮುನ್ನ ಕೃಷ್ಣ ನದಿಯಲ್ಲಿ ಕುಳಿತು ನೀರಿಗಾಗಿ ಪ್ರತಿಭಟನೆ ಮಾಡಿದೆವು.
ಆಗ ಮಹಾರಾಷ್ಟ್ರ ಸರ್ಕಾರ ಸ್ಪಂದಿಸಲಿಲ್ಲ. ಕುಡಿಯುವ ನೀರು ಬಿಡಲಿಲ್ಲ. ಕೃಷ್ಣ ನದಿಗೆ ನೀರು ನಿರ್ವಹಣಾ ಮಂಡಳಿ ರಚಿನೆಯಾಗಬೇಕು. ಕಾವೇರಿ ನದಿಗೆ ಮಂಡಳಿ ರಚಿಸುವಾಗ ನಾವುಗಳು ವಿರೋಧಿಸಿದ್ದರಿಂದ ಪೊಲೀಸರು ಬಂಧಿಸಿದರು. ನದಿ ನೀರನ್ನು ನಂಬಿಕೊಂಡು ಪ್ರಾಣಿ, ಪಕ್ಷಿ, ರೈತ ಇರುವುದರಿಂದ ಕೃಷ್ಣ ನದಿಯಲ್ಲಿ ನೀರನ್ನು ಸ್ಟೋರೇಜ್ ಮಾಡುವ ಸಾಮಥ್ರ್ಯವಿಲ್ಲ. ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸಬೇಕಿದೆ. ಇದರಿಂದ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಒಂದು ಸಾವಿರ ಟಿ.ಎಂ.ಸಿ.ನೀರನ್ನು ಉಳಿಸಬೇಕು.
ಅದಕ್ಕಾಗಿ ಪ್ರಧಾನಿಯನ್ನು ಭೇಟಿ ಮಾಡಿ ಒಪ್ಪಿಗೆ ಪಡೆದುಕೊಳ್ಳಿ ಎಂದು ರಾಜ್ಯದ ಮುಖ್ಯಮಂತ್ರಿಯನ್ನು ಆಗ್ರಹಿಸಿದ ಕೋಡಿಹಳ್ಳಿ ಚಂದ್ರಶೇಖರ್ ಈ ಬಾರಿಯ ಬಜೆಟ್‍ನಲ್ಲಿ ಭದ್ರಾಮೇಲ್ದಂಡೆ ಯೋಜನೆ ಹಾಗೂ ಉತ್ತರ ಕರ್ನಾಟಕ ನೆರೆ ಪರಿಹಾರಕ್ಕಾಗಿ ಒಂದು ಲಕ್ಷ ಕೋಟಿ ರೂ. ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರುಗಳಾದ ರೆಡ್ಡಿಹಳ್ಳಿ ವೀರಣ್ಣ, ಹಿಟ್ಟೂರು ರಾಜು, ನಾಗಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣಸ್ವಾಮಿ, ಭಕ್ತರಹಳ್ಳಿ ಭೈರೇಗೌಡ, ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಜಿಲ್ಲಾಧ್ಯಕ್ಷ ಚಿಕ್ಕಬ್ಬಿಗೆರೆ ನಾಗರಾಜ್ ಇನ್ನು ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
