ಪರ್ಯಾಯ ಉದ್ಯೋಗ, ಪರಿಹಾರ ನೀಡಲು ಬೀಡಿ ಕಾರ್ಮಿಕರ ಆಗ್ರಹ

ತುಮಕೂರು

     ಧೂಮಪಾನ ನಿಷೇಧ ಹಾಗೂ ತಂಬಾಕು ನಿಷೇಧ ನೀತಿಯಿಂದಾಗಿ ಕೆಲಸ ಕಳೆದುಕೊಳ್ಳುತ್ತಿರುವ ಎಲ್ಲ ಕಾರ್ಮಿಕರಿಗೆ ಸೂಕ್ತ ಪರ್ಯಾಯ ಉದ್ಯೋಗ ಹಾಗೂ ಕನಿಷ್ಠ 5 ಲಕ್ಷ ರೂಪಾಯಿ ಪರಿಹಾರ, ಮಾಸಿಕ 5 ಸಾವಿರ ರೂಪಾಯಿ ಪಿಂಚಣಿಯನ್ನು ನಿಗದಿಗೊಳಿಸಬೇಕು ಎಂದು ಆಗ್ರಹಿಸಿ ಬೀಡಿ ಕಾರ್ಮಿಕರ ಸಂಘ ಸಿಐಟಿಯು ನೇತೃತ್ವದಲ್ಲಿ ಕುಣಿಗಲ್‍ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

     ಕುಣಿಗಲ್‍ನ ವೃತ್ತದಲ್ಲಿ ಸೇರಿದ ಬೀಡಿ ಕಾರ್ಮಿಕರು ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಬೀಡಿ ಕಾರ್ಮಿಕರಿಗೆ ರಾಷ್ಟ್ರೀಯ ಸಮಾನ ಕನಿಷ್ಠ ಕೂಲಿ 350 ರೂಗಳನ್ನು ನಿಗದಿಗೊಳಿಸಬೇಕು. ಕಾರ್ಮಿಕರ ಭವಿಷ್ಯನಿಧಿ ಪಿಂಚಣಿಯನ್ನು ಕನಿಷ್ಠ 6000 ರೂಗಳಿಗೆ ನಿಗದಿಗೊಳಿಸಿ ತುಟ್ಟಿಭತ್ಯೆಯನ್ನು ಜಾರಿಗೊಳಿಸಬೇಕು ಹಾಗೂ ಎಲ್ಲಾ ಪಿಂಚಿಣಿದಾರರು ಮತ್ತು ಅವಲಂಬಿತರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು. 

       ಬೀಡಿ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್ ಮಾತನಾಡಿ ದೇಶದಲ್ಲಿ ಸರಿಸುಮಾರು 2.5 ಕೋಟಿ ತಂಬಾಕು ಆಧಾರಿತ ಕಾರ್ಮಿಕರಿದ್ದಾರೆ. ಅದರಲ್ಲಿ ಬೀಡಿ ಸುತ್ತುವ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಈ ಮಹಿಳೆಯರು, ಒಂಟಿ ಮಹಿಳೆಯರು, ವಿಧವೆಯರು ಕುಟುಂಬದ ನಿರ್ವಹಣೆಯ ಹೊಣೆಯನ್ನು ಹೊತ್ತವರಾಗಿರುತ್ತಾರೆ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

        ಸರ್ಕಾರದ ಧೂಮಪಾನ ನಿಷೇಧ ಹಾಗೂ ತಂಬಾಕು ನಿಷೇಧ ನೀತಿಯಿಂದಾಗಿ ಕೆಲಸ ಕಳೆದುಕೊಳ್ಳುತ್ತಿರುವ ಎಲ್ಲ ಕಾರ್ಮಿಕರಿಗೆ ಸೂಕ್ತ ಪರ್ಯಾಯ ಉದ್ಯೋಗ ಹಾಗೂ ಕನಿಷ್ಠ 5 ಲಕ್ಷ ರೂಪಾಯಿ ಪರಿಹಾರ, ಮಾಸಿಕ 5 ಸಾವಿರ ರೂಪಾಯಿ ಪಿಂಚಣಿಯನ್ನು ನಿಗದಿಗೊಳಿಸಬೇಕು.

        ಬೀಡಿ ಕಾರ್ಮಿಕರ ಚಿಕಿತ್ಸಾಲಯದಲ್ಲಿ ನಡೆಸುತ್ತಿರುವ ಸರ್ವೇಕ್ಷಣೆ ಕ್ರಮವನ್ನು ವ್ಯಾಪಕಗೊಳಿಸಿ ಎಲ್ಲಾ ಬೀಡಿ ಕಾರ್ಮಿಕರನ್ನು ಒಳಗೊಳ್ಳಲು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಕಾರ್ಯ ಯೋಜನೆಗಳನ್ನು ರೂಪಿಸಬೇಕು. ಬೀಡಿ ಕಾರ್ಮಿಕರ ಹುಟ್ಟಿದ ದಿನಾಂಕ, ಕಡ್ಡಾಯ ಆಧಾರ್ ಕಾರ್ಡ್ ಮತ್ತು ಕಡ್ಡಾಯ ಆನ್‍ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳನ್ನು ಬದಲು ಮಾಡಲು ಸರ್ಕಾರ ವಿಶೇಷ ಕಾರ್ಯ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.

        ಬೀಡಿ ಕಾರ್ಮಿಕರಿಗೆ ವಾರದಲ್ಲಿ 6 ದಿನದ ಕೆಲಸ, ಗುಣಮಟ್ಟದ ಕಚ್ಚಾ ವಸ್ತುಗಳನ್ನು ನೀಡಬೇಕು. ಕೆಲಸ ನೀಡದೇ ಇರುವ ದಿನಗಳಲ್ಲಿ ಗ್ಯಾರೆಂಟೆಡ್ ವೇತನವನ್ನು ನೀಡಲು ಕ್ರಮವಹಿಸಬೇಕು. ಎಲ್ಲಾ ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಚಿಕಿತ್ಸಾ ಸೌಲಭ್ಯ, ಕ್ಷೇಮಾಭಿವೃದ್ಧಿ ಯೋಜನೆಯ ವಿವಿಧ ಸೌಲಭ್ಯಗಳನ್ನು ನೀಡುವಲ್ಲಿನ ವಿಳಂಬವನ್ನು ಸರಿಪಡಿಸಬೇಕು ಹಾಗೂ ಚಿಕಿತ್ಸಾಲಯದಲ್ಲಿ ಎಲ್ಲಾ ಔಷಧಿಗಳು ದೊರೆಯುವಂತೆ ಕ್ರಮವಹಿಸಬೇಕು ಎಂದರು.

        ಆನ್‍ಲೈನ್ ಪ್ರಕ್ರಿಯೆಯನ್ನು ಕೈಬಿಡಬೇಕು. ಕರ್ನಾಟಕ ರಾಜ್ಯ ಸರ್ಕಾರ ನಿಗದಿಗೊಳಿಸಿರುವ ಕನಿಷ್ಠ ಕೂಲಿಯನ್ನು 1000 ಬೀಡಿಗೆ 210 ರೂಪಾಯಿ ಹಾಗೂ ತುಟ್ಟಿಭತ್ಯೆ 10ರೂಪಾಯಿ 52 ಪೈಸೆಯನ್ನು ದಿನಾಂಕ 01-04-2019 ರಿಂದ ಬಾಕಿ ಸಮೇತ ನೀಡಬೇಕು. 2015 ರಿಂದ ನೀಡಬೇಕಾದ ಬಾಕಿ ತುಟ್ಟಿಭತ್ಯೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ತಾಲೂಕು ಕಾರ್ಯದರ್ಶಿ ಅಬ್ದುಲ್ ಮುನಾಫ್, ಉಪಾಧ್ಯಕ್ಷೆ ನಸೀಮಾ ಬಾನು ಮೊದಲಾದವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap