ದಾವಣಗೆರೆ
ರೈತರಿಗೆ ಬೆಳೆ ವಿಮೆ ಹಣ ಕೊಡಿಸಲು, ಸಾಲ ಮನ್ನಾಕ್ಕಾಗಿ ಹಾಗೂ ಸ್ವಾಮಿನಾಥನ್ ವರದಿಯ ಶಿಫಾರಸ್ಸಿನಂತೆ ಬೆಂಬಲ ಬೆಲೆ ನಿಗದಿ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಹಂತ, ಹಂತವಾಗಿ ಹೋರಾಟ ರೂಪಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಸಂಘದ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ನಡೆದ ರೈತ ಸಂಘದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಾಗಲೇ ಕೃಷಿ ಉತ್ಪನಗಳಿಗೆ ನಿಗದಿ ಪಡಿಸಿರುವ ಬೆಂಬಲ ಬೆಲೆಯು ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಪರಿಷ್ಕರಿಸಬೇಕೆಂದು ಆಗ್ರಹಿಸಿದರು.
ಮೆಕ್ಕೆ ಜೋಳಕ್ಕೆ 3500 ರೂ, ರಾಗಿಗೆ 4500 ರೂ., ಜೋಳಕ್ಕೆ 5000 ರೂ., ಶೇಂಗಾ ಹಾಗೂ ಸೂರ್ಯಕಾಂತಿಗೆ 10 ಸಾವಿರ ರೂ, ಭತಕ್ಕೆ 4500 ಸಾವಿರ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಈಗಿನಿಂದಲೇ ಹಂತ, ಹಂತವಾಗಿ ಹೋರಾಟ ರೂಪಿಸಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಏಕೆಂದರೆ, ನಾವು ಬೆಳೆ ಕೋಯ್ಲಿನ ಸಂದರ್ಭದಲ್ಲಿ ಹೋರಾಡಿದರೆ, ಸರ್ಕಾರದ ಮೇಲೆ ಹೆಚ್ಚು ಪರಿಣಾಮ ಬಿರುವುದಿಲ್ಲ. ಆದ್ದರಿಂದ ಇಂದಿನಿಂದಲೇ ಹೋರಾಟದ ರೂಪರೇಷೆ ರೂಪಿಸಿ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಕಿವಿಮಾತು ಹೇಳಿದರು.
ಮೊದಲು ಇದ್ದ ಬೆಳೆ ವಿಮೆ ನೀತಿಯಿಂದ ರೈತರಿಗೆ ಅಷ್ಟು, ಇಷ್ಟಾದರೂ ಹಣ ಸಿಗುತಿತ್ತು. ಆದರೆ, ಕೇಂದ್ರ ಸರ್ಕಾರ ಫಸಲ್ ಬಿಮಾ ಯೋಜನೆ ಜಾರಿಗೆ ತಂದಾಗಿನಿಂದ ಅದುವು ಸಿಗುತ್ತಿಲ್ಲ. ಈ ಯೋಜನೆ ರೈತರಿಗಿಂತ ಹೆಚ್ಚು ಖಾಸಗಿ ವಿಮಾ ಕಂಪನಿಗಳಿಗೆ ವರದಾನವಾಗಿದೆ. ಅಲ್ಲದೇ, ಕೃಷಿ ಅಧಿಕಾರಿಗಳು ಸಹ ಕಂಪನಿಗೆ ಸಹಾಯ ಆಗುವ ರೀತಿಯಲ್ಲಿ ವರದಿ ನೀಡುತ್ತಿವೆ. ಆದ್ದರಿಂದ ರೈತ ಸಂಘದ ಕಾರ್ಯಕರ್ತರು ಅಧಿಕಾರಿಗಳು, ವಿಮಾ ಕಂಪನಿಯವರು ಬೆಳೆ ಕೋಯ್ಲಿಗೆ ಬಂದು ಇಳುವರಿಯನ್ನು ಪರೀಕ್ಷಿಸುವಾಗ ಸ್ಥಳದಲ್ಲಿದ್ದು, ಇಳುವರಿಯನ್ನು ಸರಿಯಾಗಿ ದಾಖಲಿಸುವಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.
ರೈತನೊಬ್ಬ ಮಾನ್ಸೆಂಟೋ ಕಂಪನಿಯ ಮೆಕ್ಕೆಜೋಳದ ಬೀಜ ಬಿತ್ತನೆ ಮಾಡಿದ್ದ. ಆ ಹೋಲದ ಅಕ್ಕಪಕ್ಕದ ಹೊಲಗಳಲ್ಲೂ ಬೇರೆ ಕಂಪನಿಯ ಬೀಜ ಬಿತ್ತನೆ ಮಾಡಿದ್ದರು. ಆದರೆ, ಆ ಎಲ್ಲ ಹೊಲಗಳಲ್ಲೂ ಬೀಜ ಮೊಳಕೆ ಒಡೆದಿತ್ತು. ಆದರೆ, ಮಾನ್ಸೆಂಟೋ ಕಂಪನಿಯ ಬೀಜ ಬಿತ್ತಿದ್ದ ರೈತ ಹೊಲದಲ್ಲಿ ಮೊಳಕೆಯೇ ಒಡೆದಿರಲಿಲ್ಲ.
ಈ ಬಗ್ಗೆ ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದೇ, ತೇವಾಂಶ ಕಡಿಮೆ ಇರುವುದರಿಂದ ಮೊಳಕೆ ಒಡೆದಿಲ್ಲ ಎಂಬುದಾಗಿ ಕಂಪೆನಿಯ ಪರವಾಗಿ ಕುರುಡಾಗಿ ವರದಿ ನೀಡುತ್ತಾರೆ. ಕಂಪನಿಯವರು ನಾವು ನೀಡಿರುವ ಬಿತ್ತನೆ ಬೀಜ ಕಳಪೆಯಾಗಿದೆ ಎಂಬುದಾಗಿ ಒಪ್ಪಿಕೊಂಡರೂ, ಕೃಷಿ ಅಧಿಕಾರಿಗಳು ಮಾತ್ರ ಕಂಪನಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಕೃಷಿ ಇಲಾಖೆಯ ವಿರುದ್ಧವೂ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ನಮ್ಮ ಸಂಘದ ಕಾರ್ಯಕರ್ತರು ಮನಸಾಕ್ಷಿಯ ಜೊತೆಗೆ ಬದ್ಧತೆಯನ್ನು ರೂಢಿಸಿಕೊಂಡು, ಹೋರಾಟ ರೂಪಿಸುವ ಮೂಲಕ ತಪ್ಪಿತಸ್ತ ಅಧಿಕಾರಿಗಳಿಗೆ ಮೂಗುದಾರ ಹಾಕುವ ಮೂಲಕ ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಿ, ನ್ಯಾಯ ಕೊಡಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಅರಸನಾಳು ಸಿದ್ದಪ್ಪ, ಮುಖಂಡರಾದ ಗುಮ್ಮನೂರು ಬಸವರಾಜ್, ಚಿಕ್ಕಮೆಗಳಗೆರೆ ಚಿರಂಜೀವಿ, ಕೋಲ್ಕುಂಟೆ ಬಸವರಾಜ್, ಕಾಡಜ್ಜಿ ಪ್ರಕಾಶ್, ಯಲೋದಹಳ್ಳಿ ರವಿ, ಸತೀಶ್, ಉಪ್ಪನಾಯಕನಹಳ್ಳಿ ಉಮೇಶ್, ಹುಚ್ಚವ್ವನಹಳ್ಳಿ ಪ್ರಕಾಶ್ ಮತ್ತಿತರರು ಹಾಜರಿದ್ದರು.