ಪಾಕಿಸ್ತಾನ ಪರ ಜೈಕಾರ ಘೋಷಣೆ; ಅಮೂಲ್ಯ ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ

ಚಿತ್ರದುರ್ಗ:

      ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ವಿದ್ಯಾರ್ಥಿನಿ ಅಮೂಲ್ಯ ಲಿಯೋನ್ ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ ಕೂಗಿದ್ದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‍ಕುಮಾರ್‍ಶೆಟ್ಟಿ ಬಣದ ಕಾರ್ಯಕರ್ತರು ಶುಕ್ರವಾರ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

     ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಎಸ್.ಕೆ.ಮಹಂತೇಶ್ ಮಾತನಾಡಿ ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ ಕೂಗುವ ಮೂಲಕ ಭಾರತಕ್ಕೆ ದ್ರೋಹವೆಸಗುವ ಮನಸ್ಥಿತಿಯುಳ್ಳ ಅಮೂಲ್ಯ ಲಿಯೋನ್‍ರವನ್ನು ಕೂಡಲೆ ಬಂಧಿಸಿ ದೇಶದಿಂದ ಗಡಿಪಾರು ಮಾಡಬೇಕು. ಇದೊಂದು ನಾಚಿಕೆಗೇಡಿನ ಸಂಗತಿಯಾಗಿದ್ದು, ನಮ್ಮ ದೇಶದಲ್ಲಿರಲು ಅಮೂಲ್ಯ ಲಿಯೋನ್ ಅನರ್ಹಳು ಎಂದು ಕಿಡಿ ಕಾರಿದರು.

      ಅಕ್ರಮವಾಗಿ ನಮ್ಮ ದೇಶದೊಳಗೆ ನುಸುಳ್ಳುತ್ತಿರುವ ಭಯೋತ್ಪಾದನೆಯನ್ನು ತಡೆಯುವುದಕ್ಕಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‍ಷಾ ಇವರುಗಳು ಪೌರತ್ವ ಕಾಯಿದೆ ತಿದ್ದುಪಡಿ ತಂದಿರುವುದನ್ನು ಸಹಿಸಿಕೊಳ್ಳಲು ಆಗದವರು ಅಮೂಲ್ಯ ಲಿಯೋನ್‍ಗೆ ಕುಮ್ಮಕ್ಕು ನೀಡಿ ದೇಶದ್ರೋಹದ ಘೋಷಣೆಗಳನ್ನು ಕೂಗುವಂತೆ ಪ್ರೇರಿಪಸಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವುದರ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ತಕ್ಕ ಶಾಸ್ತಿ ಮಾಡದಿದ್ದರೆ ದೇಶದ್ರೋಹಿಗಳ ಸಂಖ್ಯೆ ಇನ್ನು ಜಾಸ್ತಿಯಾಗಲಿದೆ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

    ನಮ್ಮ ದೇಶದಲ್ಲಿದ್ದುಕೊಂಡು ಅನ್ನ, ನೀರು, ಗಾಳಿ ಬೆಳಕನ್ನು ಸೇವಿಸಿಸುತ್ತಿರುವ ಅಮೂಲ್ಯ ಲಿಯೋನ್ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳಿ ಭಾರತಕ್ಕೆ ಅವಮಾನ ಮಾಡಿದ್ದಾರೆ. ತಡ ಮಾಡದೆ ಕೂಡಲೆ ದೇಶದಿಂದ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

     ಪ್ರತಿಭಟನೆಯಲ್ಲಿ ತಿಪ್ಪೇಸ್ವಾಮಿ(ಬಂಗಾರದ ಅಂಗಡಿ) ದಯಾನಂದ, ರಾಘವೇಂದ್ರ, ಮಾರುತಿ ಸಿರಿಗೆರೆ, ನಾಗರಾಜು, ಓಬಳೇಶ್ ಯಾದವ್, ರಂಜಿತ್‍ಗೌಡ, ವೆಂಕಟೇಶರೆಡ್ಡಿ ಬೆಳಗಟ್ಟ, ರವಿ ಎಂ.ಕೆ.ಹಟ್ಟಿ, ವೆಂಕಟೇಶ್ ಜಾಲಿಕಟ್ಟೆ, ಬಸವರಾಜಪ್ಪ, ಭೀಮರಾಜ್, ಹೆಚ್.ಟಿ.ಸುರೇಶ್, ವೆಂಕಟೇಶ್ ವೇದಿಕೆ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link