ಟ್ರಸ್ಟ್ ಸೇವೆಗಳ ಬಗ್ಗೆ ಮಾಹಿತಿ ನೀಡಲು ಒತ್ತಾಯಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ತಿಪಟೂರು

         ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಖಾಸಗಿಯವರ ಸುಪರ್ದಿಗೆ ಬಿಟ್ಟುಕೊಡುತ್ತಾರೆಂಬ ವದಂತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟಿಸಿ ಶಾಸಕರು ಸ್ಥಳಕ್ಕೆ ಆಗಮಿಸಿದ ನಂತರ ಹಸ್ತಾಂತರ ಪ್ರಕ್ರಿಯ ನಡೆಸಲು ಒತ್ತಾಯಿಸಿದರು.

       ಕರ್ನಾಟಕ ರಾಜ್ಯ ಸರ್ಕಾರವು ಪರಿಷ್ಕøತ ಆರೋಗ್ಯ ಬಂದು ಯೋಜನೆಯಡಿಯಲ್ಲಿ ಹಾಲ್ಕುರಿಕೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬೆಂಗಳೂರು ಡಾ.ಸುದರ್ಶನ್ ನೇತೃತ್ವದ ಕರುಣಾ ಟ್ರಸ್ಟ್‍ಗೆ ಸುಪರ್ದಿಗೆ ತೆಗೆದುಕೊಳ್ಳಬೇಕೆಂಬ ಆದೇಶದ ಮೇರೆಗೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಟ್ರಸ್ಟ್‍ನ ವೈದ್ಯರು ಸೇರಿದಂತೆ ಸಿಬ್ಬಂದಿ ವರ್ಗದವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಗ್ರಾಮಸ್ಥರು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು.
   

          ಸಾರ್ವಜನಿಕರಿಗೆ ಮಾಹಿತಿ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್, ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ವೈದ್ಯರು ಆಗಮಿಸುತ್ತಿಲ್ಲ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರ ದೂರಿನನ್ವಯ ಸರ್ಕಾರವು ಕರುಣಾ ಟ್ರಸ್ಟ್‍ಗೆ ಎರಡು ವರ್ಷಗಳ ಅವಧಿಗೆ ವೈದ್ಯಕೀಯ ಸೇವೆಗಾಗಿ ನೀಡಿದೆ. ಟ್ರಸ್ಟ್‍ನವರು ಸರ್ಕಾರದ ನಿಮಯದಂತೆ ಉಚಿತವಾಗಿ ದಿನದ 24ಗಂಟೆಗಳ ಕಾಲ ಸೇವೆ ನೀಡಲು ಟ್ರಸ್ಟ್‍ನ ವೈದ್ಯರು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಒಂದು ವೇಳೆ ಟ್ರಸ್ಟ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಬಗ್ಗೆ ಸಾರ್ವಜನಿಕರ ದೂರುಗಳು ಬಂದರೆ ಕೂಡಲೆ ಹಿಂಪಡೆಯಲಾಗುವುದು. ಯಾವುದೇ ಕಾರಣಕ್ಕೂ ಖಾಸಗೀಕರಣಕ್ಕೆ ಒಳಪಡಿಸುತ್ತಿಲ್ಲ ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಗ್ರಾಮಸಭೆಯಲ್ಲಿ ಈ ಬಗ್ಗೆ ಶಾಸಕರು ಸ್ಪಷ್ಟ ಮಾಹಿತಿ ನೀಡದ ಕಾರಣ ಸಾರ್ವಜನಿಕರಲ್ಲಿ ಗೊಂದಲ ಏರ್ಪಟ್ಟಿವೆ. ಶಾಸಕರ ಮುಖಾಂತರವೇ ಆಸ್ಪತ್ರೆಯನ್ನು ಹಸ್ತಾಂತರಿಸಿ ಟ್ರಸ್ಟ್‍ನ ಸೇವೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಲಿ ಎಂದರು.

           ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು ಮಾತನಾಡಿ ಹಾಲ್ಕುರಿಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಅವ್ಯವಸ್ಥೆಗಳ ಆಗರವಾಗಿತ್ತು. ವೈದ್ಯರು ಸಕಾಲಕ್ಕೆ ಆಸ್ಪತ್ರೆಗೆ ಆಗಮಿಸದೆ ಈ ಭಾಗದ ಜನರಿಗೆ ತೀವ್ರವಾದ ತೊಂದರೆಯಾಗಿತ್ತು. ಸಾರ್ವಜನಿಕರ ಮನವಿ ಮೇರೆಗೆ ಉತ್ತಮ ಹಾಗೂ ಉಚಿತ ವೈದ್ಯಕೀಯ ಸೇವೆ ನೀಡಲು ಖಾಸಗಿ ಸಹಭಾಗಿತ್ವದಡಿ ಸೇವೆ ನೀಡಲು ನಮ್ಮೂರ ಆಸ್ಪತ್ರೆಯನ್ನು ಕರುಣಾ ಟ್ರಸ್ಟ್ ಬೆಂಗಳೂರು ಇವರಿಗೆ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ. ರಾಜ್ಯದಾದ್ಯಂತ ಉತ್ತಮ ಸೇವೆ ಸಲ್ಲಿಸುತ್ತಿರುವ ಕಾರಣ ಈ ಆಸ್ಪತ್ರೆಯನ್ನ ಅವರ ಜವಾಬ್ದಾರಿಗೆ ಶಾಸಕರು ವಹಿಸುತ್ತಿದ್ದಾರೆ. ಇದರಿಂದ ಇನ್ನೂ ಹೆಚ್ಚಿನ ಸೇವೆ ಸಿಗಲಿದೆ. ಆದರೆ ಕೆಲವರ ತಪ್ಪು ಕಲ್ಪನೆಯಿಂದ ಆಸ್ಪತ್ರೆ ಖಾಸಗೀಕರಣವಾಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಶಾಸಕರೆ ಖುದ್ದಾಗಿ ಬಂದು ಸಮಸ್ಯೆಯನ್ನು ಬಗೆಹರಿಸಲಿದ್ದಾರೆ ಎಂದರು.

            ಗ್ರಾ.ಪಂ ಸದಸ್ಯ ಉಮಾಮಹೇಶ್ ಮಾತನಾಡಿ ಹಾಲ್ಕುರಿಕೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಖಾಸಗಿ ಟ್ರಸ್ಟ್‍ಗೆ ವಹಿಸುವುದು ಸರಿಯಲ್ಲ. ವಿಶೇಷ ಗ್ರಾಮಸಭೆಯಲ್ಲಿ ಕರುಣಾಟ್ರಸ್ಟ್‍ಗೆ ನೀಡುವ ಬಗ್ಗೆ ಸಭೆಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಶಾಸಕರೇ ಖುದ್ದಾಗಿ ಟ್ರಸ್ಟ್‍ನ ಆರೋಗ್ಯ ಸೇವೆಯ ಬಗ್ಗೆ ಮಾಹಿತಿ ನೀಡಿಲ್ಲ, ಸರ್ಕಾರದ ಅಧೀನದಲ್ಲಿರುವ ಆಸ್ಪತ್ರೆಯನ್ನು ಸರ್ಕಾರವೇ ಉಳಿಸಿಕೊಂಡರೆ ಉತ್ತಮ. ಜನರಲ್ಲಿ ಅನೇಕ ಗೊಂದಲಗಳಿವೆ, ಇತರ ಖಾಸಗಿ ಆಸ್ಪತ್ರೆಗಳು ಜನರನ್ನ ಸುಲಿಗೆ ಮಾಡಿದಂತೆ ಆಗಬಾರದು. ಜನರ ಆತಂಕ ದೂರವಾಗಲು ಸರಿಯಾದ ಮಾಹಿತಿ ನೀಡಬೇಕು.

            ಶಾಸಕರು ಸ್ಥಳಕ್ಕೆ ಬರುವವರೆಗೆ ಹಸ್ತಾಂತರಕ್ಕೆ ಅವಕಾಶ ನೀಡುವುದಿಲ್ಲ. ಆಸ್ಪತ್ರೆಯನ್ನು ಕರುಣಾ ಟ್ರಸ್ಟ್‍ಗೆ ಒಪ್ಪಿಸುವ ಬಗ್ಗೆ ಪರ ವಿರೋಧ ಎರಡೂ ಇದ್ದದ್ದರಿಂದ ಕೆಲ ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಮಾತಿನ ಚಕಮುಖಿ ನಡೆಯಿತು. ನಂತರ ಕರುಣಾ ಟ್ರಸ್ಟ್‍ನ ಸಿಬ್ಬಂದಿಗಳು ಮತ್ತು ಆರೋಗ್ಯಾಧಿಕಾರಿಗಳು ಘಟನೆಯ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಅವರ ನಿರ್ದೇಶನದಂತೆ ಕ್ರಮವಹಿಸುವುದಾಗಿ ಮತ್ತು ಸಮಸ್ಯೆ ಬಗೆಹರಿಸುವವರೆಗೂ ರೋಗಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿ ಅಲ್ಲಿಂದ ಹೊರಟು ಹೋದರು. 

             ಪ್ರತಿಭಟನೆಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷೆ ದೊಡ್ಡಮ್ಮ, ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಬಿ.ಟಿ. ಕುಮಾರ್, ಮುಖಂಡರಾದ ಸತೀಶ್, ನಟರಾಜು, ಗ್ರಾ.ಪಂ ಸದಸ್ಯ ದೊಡ್ಡಯ್ಯ, ಸೋಮಶೇಖರ್, ಮರುಳಪ್ಪ, ಹಾಲ್ಕುರಿಕೆ ಕೃಷಿ ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕ ಮೋಹನ್‍ನಾಯ್ಕ, ದಲಿತ ಸಂಘಟನೆಯ ಕರಿಯಪ್ಪ, ಘಟಕ ಸಂಜು, ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಹಾಲ್ಕುರಿಕೆ ಗ್ರಾಮಸ್ಥರು, ಗ್ರಾ.ಪಂ ಸದಸ್ಯರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap