ಬಾಕಿ ಪ್ರೋತ್ಸಾಹ ಧನ ಬಿಡುಗಡೆಗೆ ಆಶಾ ಕಾರ್ಯಕರ್ತೆಯರ ಆಗ್ರಹ

ದಾವಣಗೆರೆ :

      ಕಳೆದ 9 ತಿಂಗಳುಗಳಿಂದ ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

     ನಗರದ ಹೊರವಲಯದ ಜಿಲ್ಲಾ ಪಂಚಾಯತ್ ಎದುರು ಜಮಾಯಿಸಿದ ಆಶಾ ಕಾರ್ಯಕರ್ತೆಯರು ಕಳೆದ 9 ತಿಂಗಳುಗಳಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮುಖಂಡ ಮಂಜುನಾಥ ಕುಕ್ಕುವಾಡ, ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅತ್ಯಲ್ಪ ಪ್ರೋತ್ಸಾಹ ಧನ ಪಡೆದು ಗರ್ಭಿಣಿಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ, ಆರೋಗ್ಯ, ಪೌಷ್ಟಿಕತೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಕ್ಷಯ, ಕುಷ್ಟರೋಗ, ಮಲೇರಿಯಾ, ಡೆಂಘಿ, ಚಿಕುನ್ ಗುನ್ಯಾ ಇತ್ಯಾದಿ ಸಾಂಕ್ರಾಮಿಕ ರೋಗಗಳ ತಡೆಗೆ ಶ್ರಮಿಸುತ್ತಿದ್ದಾರೆ. ಇಂತಹ ಮಹತ್ತರ ಸೇವೆ ನೀಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕಳೆದ 9 ತಿಂಗಳಿನಿಂದ ಪ್ರೋತ್ಸಾಹ ಧನ ನೀಡದೇ ದುಡಿಸಿಕೊಳ್ಳುತ್ತಿರುವ ಅಧಿಕಾರಿಗಳ ಕ್ರಮ ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಕುಟುಂಬ ಕಲ್ಯಾಣ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿ ಕುರಿತು ಗ್ರಾಮೀಣ ಆರೋಗ್ಯ ಬದಲಾವಣೆಗೆ ಆಶಾ ಕಾರ್ಯಕರ್ತೆಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಪ್ರತಿ ತಿಂಗಳಿಗೊಮ್ಮೆ ವೇತನವಿಲ್ಲದೇ ಆಶಾ ಮಹಿಳೆಯರು ಪರದಾಡುವಂತಾಗಿದೆ. ರಾಜ್ಯದಲ್ಲಿ ಕೇಂದ್ರದ ಪ್ರೋತ್ಸಾಹಧನ ನೀಡುವ ಆಶಾ ಸಾಫ್ಟ್ ವೇತನ ಮಾದರಿಯಿಂದಾಗಿ ಕಳೆದ 3 ವರ್ಷದಿಂದ ಸಹಸ್ರಾರು ರು.ಗಳ ಆರ್ಥಿಕ ನಷ್ಟವನ್ನು ಆಶಾ ಮಹಿಳೆಯರು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಸರ್ಕಾರ ಜಾರಿಗೆ ತಂದಿರುವ ನೂತನ ವೇತನ ಪಾವತಿ ವಿಧಾನವೇ ವಿಳಂಬವಾಗಿದೆ ಎಂದು ಆರೋಪಿಸಿದರು.

       ಒಟ್ಟು 9 ತಿಂಗಳ ಬಾಕಿ ಎಂಸಿಟಿಎಸ್ ಸೇವೆಗಳ ವೇತನವನ್ನು, 1 ಸಾವಿರ ಜನಸಂಖ್ಯೆಗೆ ಕಾರ್ಯ ನಿರ್ವಹಿಸುವ ಪ್ರತಿ ಆಶಾಗೆ ಮಾಸಿಕ 3 ಸಾವಿರ ರು. ನೀಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಗೌರವಧನ ಹೆಚ್ಚಿಸಬೇಕು ಅಥವಾ 9 ತಿಂಗಳಲ್ಲಿ ಪ್ರತಿ ಆಶಾ ಕಾರ್ಯಕರ್ತೆಯರು ಮಾಡಿದ ಮ್ಯಾನುವಲ್ ವರದಿ ಸಂಗ್ರಹಿಸಿ, ವೇತನ ಪಾವತಿಸಬೇಕು. ಒಂದೇ ಬಾರಿಗೆ ಬಾಕಿ ವೇತನ ನೀಡಬೇಕು. ಆಶಾ ಸಾಫ್ಟ್ ಅಥವಾ ಆರ್‍ಸಿಎಚ್ ಪೋರ್ಟಲ್‍ಗೆ ಆಶಾ ಕಾರ್ಯಕರ್ತೆಯರ ವೇತನ ಜೋಡಣೆಯನ್ನು ಮೊದಲು ರದ್ಧುಪಡಿಸಬೇಕೆಂದು ಆಗ್ರಹಿಸಿದರು.

       ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವೇತನ ಸೇರಿಸಿ ಮಾಸಿಕ ಕನಿಷ್ಟ 12 ಸಾವಿರ ರೂ. ಗೌರವಧನ ನೀಡಬೇಕು. ಹಿಂದಿನ ಆರೋಗ್ಯ ಸಚಿವರ ಭರವಸೆಯಂತೆ, ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗಿರುವಂತೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ, ಆಶಾ ಕಾರ್ಯಕರ್ತೆಯರ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ, ಆಶಾ ಮರಣ ಹೊಂದಿದಲ್ಲಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕಾರ್ಪಸ್ ಫಂಡ್ ಮೀಸಲಿಟ್ಟು, ಪರಿಹಾರ ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಿವೃತ್ತಿ ಹೊಂದುವ ಆಶಾ ಕಾರ್ಯಕರ್ತೆಯರಿಗೆ ಪಿಂಚಣಿ ನೀಡಬೇಕು. ನಿವೃತ್ತಿ ಪರಿಹಾರದ ಇಡುಗಂಟು ಕೊಡಬೇಕು. ಹೆರಿಗೆ ರಜೆ ನೀಡಿ, ರಜೆಯಲ್ಲಿ ಮಾಸಿಕ ಗೌರವ ಧನ ನೀಡಬೇಕೆಂದು ಒತ್ತಾಯಿಸಿದರು.

       ಪ್ರತಿ ತಿಂಗಳು ನಿಗದಿತ ದಿನದೊಳಗೆ ವೇತನ ಬಿಡುಗಡೆ ಮಾಡಬೇಕು. ಯಾವ ತಿಂಗಳ ವೇತನ ವಿಳಂಬವಾಗ್ತುದೆ ಆ ತಿಂಗಳ ವೇತನವೆಂದು ಆಶಾ ಪಾಸ್ ಬುಕ್‍ನಲ್ಲಿ ನಮೂದಿಸಬೇಕು. ತಿಂಗಳಿಗೆ 2 ಬಾರಿ ಲಾರ್ವಾ ಸರ್ವೇ ಮತ್ತು ವಿವಿಧ ಸರ್ವೇಗೆ ಅನೇಕ ವರ್ಷಗಳಿಂದ ಬಹುತೇಕ ಕಡೆ ಪ್ರೋತ್ಸಾಹಧನವನ್ನು ಪ್ರತಿ ದಿನದ ಸರ್ವೇ, ಜಾಥಾ ಅಥವಾ ಜಿಲ್ಲಾ, ತಾಲೂಕು ಕೇಂದ್ರದ ಸಭೆಗೆ ಕನಿಷ್ಟ 300 ರು. ನಿಗದಿಪಡಿಸಿ, ಅಂದೇ ಆ ದಿನದ ಟಿಎ, ಡಿಎ ಇತರೆ ಭತ್ಯೆ ನೀಡಬೇಕು. ಆಶಾ ಕಾರ್ಯಕರ್ತೆಯರಿಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯದ ವ್ಯವಸ್ಥೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರು ಒತ್ತಾಯಿಸಿದರು.

        ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಡಿ.ನಾಗಲಕ್ಷ್ಮಿ, ಅಣಬೇರು ತಿಪ್ಪೇಸ್ವಾಮಿ, ನೀಲಾವತಿ, ಶೋಭಾ, ಮಂಜುಳಮ್ಮ, ಭಾಗ್ಯ, ರುಕ್ಕಮ್ಮ, ಅನಿತಾ, ಲಕ್ಷ್ಮೀಬಾಯಿ, ರೇಖಾ, ಪರ್ವೀನ್ ಬಾನು, ಮಧು ತೊಗಲೇರಿ, ಭಾರತಿ, ಶಿವಾಜಿರಾವ್, ವಸಂತ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap