ಪ್ರಿಯಾಂಕ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಪ್ರತಿಭಟನೆ

ಚಿತ್ರದುರ್ಗ

      ನಗರದ ಡಿ.ಸಿ ವೃತ್ತದಲ್ಲಿ ಇಂದು ಎಐಎಮ್‍ಎಸ್‍ಎಸ್, ಎಐಡಿಎಸ್‍ಓ ಮತ್ತು ಎಐಡಿವೈಓ ಜಿಲ್ಲಾ ಸಮಿತಿಗಳ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

     ಎಐಎಮ್‍ಎಸ್‍ಎಸ್‍ನ ಜಿಲ್ಲಾ ಸಂಚಾಲಕರಾದ ಶ್ರೀಮತಿ ಸುಜಾತ ರವರು ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಸಮಾಜದಲ್ಲಿ ದಿನೇದಿನೇ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಇದು ಸರ್ಕಾರಗಳ ಮತ್ತು ನ್ಯಾಯಾಲಯಗಳ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತದೆ. ನಿರ್ಭಯಾ ಘಟನೆ ನಡೆದ ನಂತರ ಜಸ್ಟೀಸ್ ವರ್ಮಾ ರವರು ಆಯೋಗದ ಶಿಫಾರಸ್ಸು ಮಾಡಿದಂತಹ ಸಲಹೆಗಳನ್ನು ಇನ್ನೂ ಜಾರಿಗೊಳಿಸಿಲ್ಲ. ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಇಂತಹ ಘಟನೆಗಳಿಂದ ನಮ್ಮ ಸಮಾಜ ಇನ್ನೂ ಅದೋಗತಿಗೆ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ನಂತರ ಮಾತನಾಡಿದ ಎಐಡಿವೈಓ ನ ಜಿಲ್ಲಾಧ್ಯಕ್ಷರಾದ ರವಿಕುಮಾರ್ ರವರು ಮಾತನಾಡುತ್ತಾ.., “ನಮ್ಮ ದೇಶದಲ್ಲಿ ಮಹಿಳೆಯರಿಗೆ ಭದ್ರತೆಯಿಲ್ಲ. ಅತ್ಯಾಚಾರ ನಡೆದ ನಂತರ ಆರೋಪಿಗಳಿಗೆ ರಕ್ಷಣೆ ಸಿಗುತ್ತಿದೆ. ಇದು ನಮ್ಮ ದೇಶದ ದುರಂತ. ಇಂತಹ ವ್ಯವಸ್ಥೆಯಲ್ಲಿ ನಮ್ಮ ಹೆಣ್ಣುಮಕ್ಕಳು ಬದುಕುತ್ತಿದ್ದಾರೆ. ಇಂತಹ ಕೊಳೆತ ಸಮಾಜವನ್ನು ಕಿತ್ತುಹಾಕಿ ಮಹಿಳೆಯರನ್ನು ಗೌರವಿಸುವಂತಹ ಸಮಾಜವನ್ನು ನಾವೆಲ್ಲರೂ ಸೇರಿ ಕಟ್ಟಬೇಕಿದೆ” ಎಂದು ಕರೆ ನೀಡಿದರು.

     ನಂತರ ಎಐಡಿಎಸ್‍ಓ ನ ಜಿಲ್ಲಾ ಕಾರ್ಯದರ್ಶಿಯಾದ ಸಂಜಯ್ ರವರು ಮಾತನಾಡಿದರು. “ಯುವಕರ ನೈತಿಕ ಬೆನ್ನೆಲುಬನ್ನು ಮುರಿಯುವ ದುರುದ್ದೇಶವನ್ನಿಟ್ಟುಕೊಂಡ ಸರ್ಕಾರಗಳು ಅಶ್ಲೀಲ ಸಿನಿಮಾ-ಸಾಹಿತ್ಯವನ್ನು ಹರಿಬಿಡುತ್ತಿವೆ. ಈ ಸರ್ಕಾರಗಳೇ ಇಂತಹ ಘಟನೆಗಳಿಗೆ ನೇರ ಹೊಣೆ, ಹೋರಾಟಕ್ಕೆ ಪ್ರೇರೇಪಿಸುವ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಕ್ಕೆ ನೇರ ಕಾರಣವನ್ನು ಸೂಚಿಸುವಂತಹ ಸಾಕ್ಷ್ಯಚಿತ್ರಗಳನ್ನು ನಿಷೇದ ಮಾಡುವ ಬದಲು ಸರ್ಕಾರಗಳು ಮೊದಲು ಅಶ್ಲೀಲ ವೆಬ್‍ಸೈಟ್‍ಗಳನ್ನು ನಿಷೇಧಿಸಲಿ” ಎಂದರು.

      ಈ ಪ್ರತಿಭಟನೆಯಲ್ಲಿ ಎಐಎಮ್‍ಎಸ್‍ಎಸ್‍ನ ಸಹಸಂಚಾಲಕರಾದ ಕುಮುದ,ತ್ರಿವೇಣಿ ಸೇನ್ ಮತ್ತು ಸದಸ್ಯರಾದ ಮೇಘನ, ಶಿಲ್ಪಾ ಎಐಡಿಎಸ್‍ಓ ನ ಕಾರ್ತಿಕ, ಸಲೀಂ ಎಐಡಿವೈಓನ ವಿಜಯ್, ಮಲ್ಲಿಕಾರ್ಜುನ್ ಮತ್ತಿತರರು ಹಾಗೂ ನೂರಾರು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link