ತುರ್ತು ಇತ್ಯರ್ಥಕ್ಕೆ ಆಗ್ರಹಿಸಿ 12ಕ್ಕೆ ಪ್ರತಿಭಟನೆ

ಚಿತ್ರದುರ್ಗ:

        ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಸಾಗುವಳಿದಾರರ ಸ್ವಾಧೀನದಲ್ಲಿರುವ ಭೂಮಿಯನ್ನು ಗಣಿ ಮತ್ತು ಇನ್ನಿತರೆ ವ್ಯವಸಾಯೇತರ ಉದ್ದೇಶಗಳಿಗಾಗಿ ಮಂಜೂರು ಮಾಡುವುದನ್ನು ತಕ್ಷಣವೇ ನಿಲ್ಲಿಸುವುದು ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನ.12 ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಸಮಿತಿ ಸದಸ್ಯ ಪ್ರಜಾಶಕ್ತಿ ಬೋರಯ್ಯ ತಿಳಿಸಿದರು.

         ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಅರಣ್ಯ ಹಕ್ಕು ಕಾಯಿದೆ ಮತ್ತು ಬಗರ್ ಹುಕುಂ ಭೂಮಂಜೂರಾತಿಗೆ ಸಂಬಂಧಿಸಿದ ಅನುಷ್ಟಾನಾ ಇಲಾಖಾ ಅಧಿಕಾರಿಗಳ ಮತ್ತು ಹೋರಾಟಗಾರರ ಸಭೆಯನ್ನು ಜಿಲ್ಲಾಧಿಕಾರಿಗಳು ಶೀಘ್ರವೇ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕು. ರಾಜ್ಯ ಸರ್ಕಾರ ಭೂಮಿ ಮತ್ತು ವಸತಿ ಸಮಸ್ಯೆಗಳ ಪರಿಹಾರಕ್ಕೆ ತೆಗೆದುಕೊಂಡಿರುವ ಕ್ರಮಗಳ ಪರಿಶೀಲನೆಗಾಗಿ ರಚಿಸಿರುವ ಉನ್ನತ ಮಟ್ಟದ ಸಮಿತಿಯ ತೀರ್ಮಾನಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

           ಚಿತ್ರದುರ್ಗ ಜಿಲ್ಲೆಯಲ್ಲಿನ ಭೂಮಿ ಮತ್ತು ವಸತಿ ಹಕ್ಕುಗಳ ಗಂಭೀರ ಪ್ರಕರಣಗಳನ್ನು ತುರ್ತಾಗಿ ಬಗೆಹರಿಸಲು ವಿಶೇಷ ಆದ್ಯತೆ ನೀಡಿ ಪರಿಹರಿಸಿಕೊಡಬೇಕು. ರಾಜ್ಯ ಸರ್ಕಾರ ಬಗರ್ ಹುಕುಂ ಸಾಗುವಳಿದಾರರ ಭೂಮಿಯ ಸಕ್ರಮಕ್ಕಾಗಿ ಹೊಸದಾಗಿ ಹೊರತಂದಿರುವ ಫಾರಂ ನಂ.57 ರ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ನೀಡಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು.

          ಜಿಲ್ಲೆಯ ಆರು ತಾಲೂಕುಗಳಲ್ಲಿ 1990-91-1998-99 ನೇ ಸಾಲುಗಳಲ್ಲಿ 112964 ಅರ್ಜಿಗಳನ್ನು ಬಗರ್‍ಹುಕುಂ ಸಮಿತಿಗಳಿಗೆ ಸಲ್ಲಿಸಿದ್ದು, ಎಲ್ಲಾ ಅರ್ಹತೆ ಇರುವ 53322 ಅರ್ಜಿಗಳನ್ನು ಪರಿಶೀಲನೆ ಮಾಡದೆ 28 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ಸಾಗುವಳಿ ಚೀಟಿ ವಿತರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.

         ಅರಣ್ಯ ಹಕ್ಕು ಕಾಯ್ದೆಯಲ್ಲಿ ಜಿಲ್ಲೆಯಲ್ಲಿ 5573 ಅರ್ಜಿಗಳನ್ನು ಸಲ್ಲಿಸಿದ್ದು, ಕೇವಲ 347 ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು, ಅರಣ್ಯ ಹಕ್ಕು ಕಾಯ್ದೆ ಉಲ್ಲಂಘಿಸಿ ತಿರಸ್ಕರಿಸಲು ಹುನ್ನಾರ ನಡೆಸಿ 5526 ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿರುವ ಅರ್ಜಿಗಳ ಹಕ್ಕು ಮಾನ್ಯತಾ ಪ್ರಕ್ರಿಯೆ ಪೂರ್ಣಗೊಳಿಸಿ ಹಕ್ಕು ನೀಡಲು ತುರ್ತು ಕ್ರಮ ಕೈಗೊಳ್ಳಬೇಕು.

       ಜಿಲ್ಲೆಯಲ್ಲಿ ಐದು ಎಕರೆಗಿಂತ ಕಡಿಮೆ ಸಾಗುವಳಿ ಮಾಡಿಕೊಂಡಿರುವ ಬಡ ಸಾಗುವಳಿದಾರರ ವಿರುದ್ದ ಭೂಕಬಳಿಕೆ ನಿಷೇಧ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳನ್ನು ರಾಜ್ಯ ಸರ್ಕಾರದ ಇತ್ತೀಚಿನ ತೀರ್ಮಾನದಂತೆ ಮರುಪರಿಶೀಲಿಸಿ ಹಿಂಪಡೆಯಲು ಮತ್ತು ಹೊಸದಾಗಿ ಪ್ರಕರಣಗಳನ್ನು ದಾಖಲಿಸಬಾರದೆಂದು ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದೇವೆ. ಜಿಲ್ಲೆಯ ಎಲ್ಲಾ ಭೂಮಿ ಮತ್ತು ವಸತಿ ಹಕ್ಕು ವಂಚಿತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.ಕರಿಯಪ್ಪ ಗುಡಮನಿ, ಶಿವಕುಮಾರ್ ಗುಳಗಟ್ಟ, ಶಫಿವುಲ್ಲಾ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link