ಕೇಂದ್ರ ಗೃಹ ಸಚಿವರನ್ನು ಸಂಪುಟದಿಂದ ಕೈಬಡುವಂತೆ ಕೋರಿ ಕಾಂಗ್ರೆಸ್ ಪ್ರತಿಭಟನೆ..!

ಬೆಂಗಳೂರು
     ಅಪರೇಷನ್ ಕಮಲ ನಡೆಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ  ನಡೆಸಿದರು.
      ಎಂಜಿ ರಸ್ತೆಯ ಟ್ರಿನಿಟಿ ವೃತ್ತದ ಬಳಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಸೇರಿದ ನೂರಾರು ಕಾರ್ಯಕರ್ತರು ವಾಮ ಮಾರ್ಗವಾಗಿ ಬಂದಿರುವ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಈ ಹಿಂದೆ ರಾಜ್ಯದಲ್ಲಿ ಸುಭದ್ರವಾಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ, ಶಾಸಕರನ್ನು ಕುದುರೆ ವ್ಯಾಪಾರದಂತೆ ಖರೀದಿಸಿ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಬಂಧಿಸಿಟ್ಟಿದ್ದ ಬಿಜೆಪಿ ಪ್ರಜಾಪ್ರಭುತ್ವಕ್ಕೆ ಮಾರಕ ನೀತಿ ಅನುಸರಿಸಿತು. ಆ ಮೂಲಕ ರಾಜ್ಯದಲ್ಲಿ ಅನೈತಿಕವಾಗಿ ಸರ್ಕಾರ ರಚಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.
 
      ಮಾಧ್ಯಮಗಳ ಮುಂದೆ ಅನರ್ಹ ಶಾಸಕರಿಗೂ ಹಾಗೂ ತಮಗೂ ಸಂಬಂಧವೇ ಇಲ್ಲ ಎಂದು ವಾದಿಸುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರ ಭಂಡತನ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಯಲಾಗಿದೆ.
೧೭ ಶಾಸಕರನ್ನು ರಾಜೀನಾಮೆ ಕೊಡಿಸಿ ಅನರ್ಹಗೊಳಿಸಿದರು. ಅದರಿಂದ ಹಿಂದಿನ ಸಮ್ಮಿಶ್ರ ಸರ್ಕಾರವನ್ನು ಕೆಡವಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಅನೈತಿಕ ಮಾರ್ಗ ಅನುಸರಿಸಿತು. ಇದರ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾತ್ರವಿದೆ ಎಂದು ಮುಖ್ಯಮಂತ್ರಿ ಯಡಿಯುರಪ್ಪನವರೇ ತಾವೇ ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜಿ.ಶೇಖರ್ ಜರಿದರು.
ಚಡಪಡಿಕೆ-ಚೀರಾಟ
       ಆಪರೇಷನ್ ಕಮಲದ ಆಡಿಯೋ ಬಹಿರಂಗಗೊಳ್ಳುತ್ತಿದ್ದಂತೆ ‘ಸಂತೆಯಲ್ಲಿ ಬೆತ್ತಲಾದ ಕಳ್ಳ’ನಂತೆ ಬಿಜೆಪಿ ಪಕ್ಷದ ನಾಯಕರು ಚಡಪಡಿಕೆ-ಚೀರಾಟ ಮಾಡುತ್ತಿದ್ದಾರೆ ನೀವೆಷ್ಟೇ ಸುಳ್ಳುಗಳನ್ನೇಳಿದ್ದರೂ ಮಾನ ಮುಚ್ಚುವ ಬಟ್ಟೆಯಾಗಲಾರದು. ರಾಜ್ಯದ ಜನತೆ ಎದುರು ನಿಮ್ಮ ಅಧಿಕಾರ ಲಾಲಸೆ ಕಪಟತನ, ಅನೈತಿಕ ರಾಜಕಾರಣ ಬಯಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಟ್ವಿಟ್ಟರ್‌ನಲ್ಲಿ ಆರೋಪಿಸಿದೆ.ಆಪರೇಷನ್ ಕಮಲದ ಸಂಚು ಬಹಿರಂಗಗೊಂಡಿರುವ ವಿಫಲತೆಯನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರ ಮತ್ತು ನಾಯಕರು ಲಜ್ಜೆಗೇಡಿತನದ ದಾರಿಗಿಳಿದಿದ್ದಾರೆ ಎಂದು ದೂರಿದೆ.
 
       ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಳ್ಳುವಂತೆ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಅಂಗೈ ಹುಣ್ಣಿಗೆ ಕನ್ನಡಿಬೇಕೆ ಎನ್ನುವಂತಾಗಿದೆ ಎಂದು ಪಕ್ಷ ತಿಳಿಸಿದೆ.
ಸಂಪೂರ್ಣ ವಿಫಲ
         ರಾಜ್ಯದಲ್ಲಿ ಸಂಭವಿಸಿದ ಬರ ಮತ್ತು ನೆರೆಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ತರುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಆ ವಿಫಲತೆಯನ್ನು ಮುಚ್ಚಿಕೊಳ್ಳಲು ಅಡ್ಡದಾರಿ ಹಿಡಿಯುತ್ತಿದೆ ಎಂದು ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ಪಕ್ಷ ಆರೋಪಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap