ಚಿತ್ರದುರ್ಗ;
ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಐಡಿವೈಓ, ಎಐಡಿಎಸ್‍ಓ ಮತ್ತು ಎಐಎಂಎಸ್‍ಎಸ್ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾಯಿಸಿದ್ದ ಸಂಘಟನೆಗಳ ಕಾರ್ಯಕರ್ತರು, ಮಧು ಪತ್ತಾರ್ ಅವರ ಧಾರುಣ ಸಾವು ರಾಜ್ಯದ ಜನತೆಯ ಆತ್ಮಸಾಕ್ಷಿಯನ್ನು ಕಲಕಿಬಿಟ್ಟಿದೆ. ಅವಳ ಸಾವಿನ ಹಿಂದಿರುವ ಪಾತಕಿಗಳಿಗೆ ನಿದರ್ಶನನೀಯ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು
ಎಐಡಿವೈಓ ಜಿಲ್ಲಾಧ್ಯಕ್ಷರಾದ ಕಾ|| ರವಿಕುಮಾರ್ ಅವರು ಈ ಸಂದರ್ಭದಲ್ಲಿ ಮಾತನನಾಡಿ “ಇಂದು ಅತ್ಯಾಚಾರ-ಗುಂಪು ಅತ್ಯಾಚಾರ ನಡೆಸುವುದು, ಅನಂತರ ಪ್ರಕರಣ ಬೆಳಕಿಗೆ ಬರಬಾರದೆಂದು ಸಂತ್ರಸ್ತೆಯನ್ನು ಹತ್ಯೆಗೈಯುತ್ತಿರುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇವೆ. ಇವು ನಮ್ಮ ಸಮಾಜದ ಸ್ವಾಸ್ಥ್ಯ ಎಷ್ಟರಮಟ್ಟಿಗೆ ಅಧೋಗತಿಗಿಳಿದಿದೆ ಎಂಬುದನ್ನು ತೋರಿಸುತ್ತಿವೆ. ಮಧು ಪತ್ತಾರ್ ಅವರ ಸಾವಿನ ಪ್ರಕರಣವನ್ನು ಗಮನಿಸಿದರೆ ಮೇಲ್ನೋಟಕ್ಕೆ ಇದು ಪಾತಕಿಗಳ ಕೃತ್ಯವೆಂದು ತಿಳಿದು ಬರುತ್ತದೆ. ಈ ಪ್ರಕರಣದ ಹಿಂದಿರುವ ಪಾತಕಿಗಳನ್ನು ಬಂಧಿಸಿ ಅತ್ಯುಗ್ರವಾಗಿ ಶಿಕ್ಷಿಸಬೇಕೆಂದು ಒತ್ತಾಯಿಸಿದರು
ಅತ್ಯಚಾರದ ಕೃತ್ಯವೆಸಗುವಂತಹ ವಿಕೃತ ಮನಸ್ಥಿತಿ ಬೆಳೆಯುವಲ್ಲಿ ಕಾರಣವಾಗುತ್ತಿರುವ ಅಶ್ಲೀಲ ಸಿನಿಮಾ-ಸಾಹಿತ್ಯ ಮತ್ತು ಅಂತರ್ಜಾಲ ತಾಣಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತವೆ” ಎಂದರು.ಎಐಎಂಎಸ್‍ಎಸ್ ನ ತ್ರಿವೇಣಿ ಸೇನ್ ಮಾತನಾಡಿ “ಸರ್ಕಾರಗಳು ಮಹಿಳೆಯರ ಭದ್ರತೆಯ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತಳೆದಿವೆ. ನಮ್ಮ ಸಮಾಜದಲ್ಲಿ ವಿದ್ಯಾರ್ಥಿನಿಯರು-ಮಹಿಳೆಯರು ಯಾವ ರೀತಿಯಿಂದಲೂ ಸುರಕ್ಷಿತರಲ್ಲ ಎಂಬುದನ್ನು ಇತ್ತೀಚೆಗೆ ನಡೆಯುತ್ತಿರುವ ಪ್ರಕರಣಗಳು ಸಾಬೀತುಪಡಿಸುತ್ತಿವೆ.
ನಮ್ಮ ದೇಶದಲ್ಲಿ ಪ್ರತಿ ಅರ್ಧಗಂಟೆಗೆ ಒಂದು ಅತ್ಯಾಚಾರದ ಘಟನೆಗಳು ನಡೆಯುತ್ತಿವೆ. ಪೋಷಕರು ಹೆಣ್ಣುಮಕ್ಕಳನ್ನು ಹೆರುವುದೇ ತಪ್ಪೇನೋ ಎಂಬ ಭಾವನೆ ಸಮಾಜದಲ್ಲಿ ನಿರ್ಮಾಣವಾಗುತ್ತಿದೆ. ಸರ್ಕಾರ ಈ ಕೂಡಲೆ ಎಚ್ಚೆತ್ತುಕೊಂಡು ಅತ್ಯಚಾರದ ಪ್ರಕರಣಗಳನನ್ನು ತಡೆಗಟ್ಟುವಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಭೆಯನ್ನುದ್ದೇಶಿಸಿ ಸಂಘಟನೆಯ ಕಾರ್ಯಕರ್ತರಾದ ಸಂಜಯ್, ಕುಮುದಾ ಆಶಾ ಕಾರ್ಯಕರ್ತೆ ಮಂಜುಳ ಮಾತನಾಡಿದರು. ಎಲ್ಲ ಪ್ರತಿಭಟನಾಕಾರರು ಮೇಣದ ಬತ್ತಿ ಬೆಳಗಿಸಿ ಮಧು ಪತ್ತಾರ್‍ಗೆ ಶ್ರದ್ಧಾಂಜಲಿ ಸಲ್ಲಿಸಿದರು ಹಾಗೂ ಅವಳ ಸಾವಿಗೆ ನ್ಯಾಯ ಸಿಗಲೆಂದು ಒತ್ತಾಯಿಸಿದರು. ಸಭೆಯನ್ನು ವೀಕ್ಷಿಸಿದ ನಾಗರಿಕರು ಭಾವನಾತ್ಮಕವಾಗಿ ಸ್ಪಂದಿಸಿದರು.ಸಂಘಟನೆಯ ನಿಂಗರಾಜು, ವಿಜಯ್, ಪ್ರಕೃತಿ, ಸ್ಫೂರ್ತಿ, ಸ್ನೇಹ, ಸುಪ್ರಿಯ, ರಂಜಿತ, ಅಮರೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.