ವೈದ್ಯಕೀಯ ಶಿಕ್ಷಣ ಶುಲ್ಕ ಏರಿಕೆ ಪ್ರಸ್ತಾಪಕ್ಕೆ ವಿರೋಧ

ದಾವಣಗೆರೆ:

        ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‍ಆರ್‍ಐ ಕೋಟಾ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣ ಶುಲ್ಕ ಏರಿಕೆ ಪ್ರಸ್ತಾಪ ವಿರೋಧಿಸಿ, ನಗರದಲ್ಲಿ ಶುಕ್ರವಾರ ಮೆಡಿಕಲ್ ಸರ್ವಿಸ್ ಸೆಂಟರ್ (ಎಂಎಸ್‍ಸಿ) ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್‍ಒ) ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

          ನಗರದ ಮೋದಿ ವೃತ್ತದಲ್ಲಿ ಜಮಾಯಿಸಿದ ಎಂಎಸ್‍ಸಿ ಹಾಗೂ ಎಐಡಿಎಸ್‍ಒ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ವೈದ್ಯಕೀಯ ಶಿಕ್ಷಣದ ಶುಲ್ಕ ಹೆಚ್ಚಳ ಮಾಡಲು ಮುಂದಾಗಿರುವ ಕರ್ನಾಟಕ ಸರ್ಕಾರದ ಕ್ರಮ ಖಂಡಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

          ಈ ಸಂದರ್ಭದಲ್ಲಿ ಮಾತನಾಡಿದ ಎಂಎಸ್‍ಸಿ ಮುಖಂಡ ಡಾ.ಚಂದನ್, ರಾಜ್ಯ ಸರ್ಕಾರವು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‍ಆರ್‍ಐಕೋಟಾ (ಅನಿವಾಸಿ ಭಾರತೀಯರಿಗಾಗಿಕೋಟಾ) ಅಡಿಯಲ್ಲಿ ಪ್ರವೇಶ ಪಡೆಯುವ ಮತ್ತು ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‍ಗಳ ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾಪ ಅತ್ಯಂತ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

          ಎಂಎಸ್‍ಸಿ ಸಂಘಟನೆಯ ಡಾ.ಇಳಾ ಮಾತನಾಡಿ, ಸರ್ಕಾರಿ ಕಾಲೇಜುಗಳ ವೈದ್ಯಕೀಯ ಶುಲ್ಕ ಏರಿಸುತ್ತಾ ಹೋದರೆ, ಸಾರ್ಕಾರಿ ಕಾಲೇಜುಗಳಲ್ಲೂ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುವುದೂ ಗಗನ ಕುಸುಮವಾಗಲಿದೆ. ಹೀಗೆ ಶುಲ್ಕ ಹೆಚ್ಚಿಸುತ್ತಾ ಹೋದರೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಕೊರತೆ ಎದುರಾಗಿ, ಕಾಲೇಜುಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

         ಎಂಎಸ್‍ಸಿ ರಾಜ್ಯ ಕಾರ್ಯದರ್ಶಿ ಡಾ.ವಸುಧೇಂದ್ರ ಮಾತನಾಡಿ, ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಕೈಗೆಟುಕುವದರದಲ್ಲಿ ಉನ್ನತ ಶಿಕ್ಷಣ ಕೊಡುವುದು ಸರ್ಕಾರದ ಜವಾಬ್ದಾರಿಯಾಗಬೇಕು. ಆದರೆ, ದುಂದು ವೆಚ್ಚದಲ್ಲಿ ಮುಳುಗಿರುವ ಸರ್ಕಾರಕ್ಕೆ ಬಡ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವುದಕ್ಕೆ ಹಣವಿಲ್ಲವೇ? ಇದರ ಹಿಂದೆ ಸರ್ಕಾರಿ ಕಾಲೇಜುಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ಅಡಗಿದೆ. ತಕ್ಷಣವೇ ರಾಜ್ಯ ಸರ್ಕಾರ ವೈದ್ಯಕೀಯ ಶಿಕ್ಷಣದ ಶುಲ್ಕ ಏರಿಸುವ ಪ್ರಸ್ತಾಪವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

          ಪ್ರತಿಭಟನೆಯಲ್ಲಿ ಎಐಡಿಎಸ್‍ಒ ಸಂಘಟನೆಯ ಸೌಮ್ಯ, ನಾಗಜ್ಯೋತಿ, ರೇಣುಕಾ, ಪ್ರಸನ್ನ, ಪೂಜಾ, ಎಂಎಸ್‍ಸಿ ಸಂಘಟನೆಯ ಯತೀಂದ್ರ, ವಿನಯ್, ಡಾ.ಅನುಶ್ರೀ, ಡಾ.ಅರುಣ್, ಡಾ.ಸಂಗಮ್ ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap