ದಾವಣಗೆರೆ:
ಕ್ರಮಬದ್ಧವಾಗಿ ನಿರ್ವಹಣೆ ಮಾಡದೇ, ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಕೆಪಿಎಂ ಫೌಲ್ಟ್ರೀ ಫಾರ್‍ಂ(ಕೋಳಿ ಫಾರ್‍ಂ) ಅನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಶ್ರೀ ಜೈ ಹನುಮಾನ್ ನಾಗರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಶುಕ್ರವಾರ ದೇವರಬೆಳೆಕೆರೆ ರಸ್ತೆಯಲ್ಲಿ ವಿವಿಧ ಬಡಾವಣೆಗಳ ನಾಗರಿಕರು ರಸ್ತೆ ನಡೆಸಿ, ಪ್ರತಿಭಟಿಸಿದರು.
ನಗರದ ದೇವರ ಬೆಳಕೆರೆ ರಸ್ತೆಯಲ್ಲಿ ಜಮಾಯಿಸಿದ ಶಾಮನೂರು, ಡಾಲರ್ಸ್ ಕಾಲೋನಿ, ಜೆ.ಹೆಚ್.ಪಾಟೇಲ್ ಬಡಾವಣೆ, ವಾಜಪೇಯಿ ಬಡಾವಣೆ, ಎಸ್.ಎ.ರವೀಂದ್ರನಾಥ್ ಬಡಾವಣೆ, ಕರೂರು ಚನ್ನಪ್ಪ ಬಡಾವಣೆ, ಬನಶ್ರೀ ಬಡಾವಣೆಗಳ ನಾಗರಿಕರು ಕೆಪಿಎಂ ಫೌಲ್ಟ್ರೀ ಫಾರ್‍ಂ ಮಾಲೀಕರ ವರ್ತನೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಕೊಟ್ರೇಶ್ ನಿಲವಂಜಿ, ಈ ಮೇಲಿನ ಎಲ್ಲಾ ಬಡಾವಣೆಗಳ ನಾರೀಕರಿಗೆ ಕಳೆದ 20 ವರ್ಷಗಳಿಂದ ಕೆಪಿಎಂ ಫೌಲ್ಟ್ರೀ ಫಾರ್‍ಂ ಶಾಪವಾಗಿ ಪರಿಣಮಿಸಿದೆ. ಈ ಕೋಳಿ ಫಾರ್‍ಂ ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮಾಲೀಕರು ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ವಾಯು ಮಾಲಿನ್ಯ ಸೇರಿದಂತೆ ಇಡೀ ವಾತಾವರಣವೇ ಕಲುಷಿತಗೊಂಡಿದೆ ಎಂದು ಆರೋಪಿಸಿದರು.
ಈ ಫೌಲ್ಟ್ರೀ ಫಾರ್‍ಂನಲ್ಲಿ ಸರಿಯಾಗಿ ನಿರ್ವಣೆ ಮಾಡದಿರುವುದರಿಂದ ಇದು ನೋಣ ಉತ್ಪಾದನೆಯ ತಾಣವಾಗಿ ಮಾರ್ಪಟ್ಟಿದೆ. ಹೀಗಾಗಿ ಈ ಭಾಗದ ಜನರು ಜೀವನ ನಡೆಸುವುದೇ ದುಸ್ತರವಾಗಿದೆ. ಇಲ್ಲಿನ ನಿವಾಸಿಗಳಿಗೆ ನೆಮ್ಮದಿಯ ಬದುಕು ಮರಿಚಿಕೆಯಾಗಿದೆ. ವಯೋವೃದ್ದರು, ಮಕ್ಕಳು ಮಹಿಳೆಯರು ಪದೇ ಪದೇ ಖಾಯಿಲೆಗೆ ತುತ್ತಾಗುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಪರೀತ ನೊಣಗಳ ಹಾವಳಿಯಿಂದಾಗಿ ಶುದ್ಧ ಆಹಾರ ಸೇವಿಸುವುದು ಕಷ್ಟಕರವಾಗಿದೆ. ಜ್ವರ, ವಾಂತಿ-ಭೇದಿ, ಉಬ್ಬಸದಂತಹ ರೋಗಗಳಿಂದ ಈ ಭಾಗದ ಜನರು ನಿತ್ಯವೂ ಬಳಲುತ್ತಿದ್ದಾರೆ. ಹೀಗಾಗಿ ಪದೇ ಪದೇ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಇದೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇಲ್ಲಿಯ ಜನರ ಆರೋಗ್ಯ ಹಾಳಾಗುತ್ತಿರುವುದರಿಂದ ದುಡಿಯುವವರೆ ಇಲ್ಲದಂತ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು.
ಪಾಲಿಕೆ ಅಧಿಕಾರಿಗಳು ಕೋಳಿಫಾರ್ಮ್ ಮಾಲೀಕರ ನೆರವಿಗೆ ನಿಂತಿದ್ದಾರೆ. 10ವರ್ಷದಿಂದ ಮರುನವೀಕರಣ ಹಾಗೂ ಕಂದಾಯ ಪಾವತಿಸದೆ ಬಂಡವಾಳಶಾಹಿಗಳು ಗೆಲುವು ಸಾಧಿಸುತ್ತಿದ್ದಾರೆ. ಈ ಸಮಸ್ಯೆಯ ಬಗ್ಗೆ ಜಿಲ್ಲಾಡಳಿತ ಹಾಗೂ ನಗರ ಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು, ಬಡಾವಣೆ ನಿವಾಸಿಗಳ ಜೀವದ ಜೊತೆ ಆಟವಾಡದೇ, ಕೂಡಲೇ ಕೋಳಿಫಾರ್ಮ್ ಅನ್ನು ತೆರವು ಗೊಳಿಸಿ, ಈ ಭಾಗದ ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಕೃಷ್ಣೋಜಿರಾವ್, ಧನರಾಜ್, ಸಿ.ಅಮರೇಶ್, ವಿಶ್ವನಾಥ್, ಶಶಿಕುಮಾರ್, ಅಂಬುರಾಜ್, ಜಗದೀಶ್, ಗಣೇಶಾಚಾರಿ, ಶೇಷಾಚಾರಿ, ಛಾಯಾ ಬಾಯಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ