ಬೆಂಗಳೂರು
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ದಾಖಲಿಸಲಾಗಿರುವ ದೂರು ಹಿಂಪಡೆಯಬೇಕು ಎಂದು ಆಗ್ರಹಿಸಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ಎದುರು ಕೆಪಿಸಿಸಿ ಮಹಿಳಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.ಇತ್ತೀಚೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ನಿಯಮ ಉಲ್ಲಂಘಿಸಿದ ಆರೋಪದಡಿ ಕುಸುಮಾ ಅವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದರು.
ಶುಕ್ರವಾರ ಠಾಣೆಯ ಎದುರು ನಾಮ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಮಹಿಳಾ ಕಾರ್ಯಕರ್ತೆಯರು, ಬೇಕೆ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಡಿಸಿಪಿ ಸಂಜೀವ್ ಪಾಟೀಲ್ ಅವರಿಗೆ ಕಾಂಗ್ರೆಸ್ ಶಾಸಕಿಯರಾದ ಸೌಮ್ಯಾ ರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವೆ ಉಮಾಶ್ರೀ ಅವರು ಮನವಿ ಸಲ್ಲಿಸಿದರು. ಈ ವೇಳೆಯಲ್ಲಿ ಪ್ರತಿಭಟನಾಕಾರರು, ಸಂಜೀವ್ ಪಾಟೀಲ್ ಅವರ ಮಧ್ಯೆ ವಾಕ್ಸಮರವು ನಡೆಯಿತು.
ಯಾರದ್ದೋ ಒತ್ತಡಕ್ಕೆ ಒಳಗಾಗಿ ಕುಸುಮಾ ಅವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ದೂರು ದಾಖಲಿಸಿದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು. ಅಲ್ಲಿಯವರೆಗೂ ತಾವು ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ. ಇಲ್ಲಿ ನ್ಯಾಯ ದೊರಕದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ದೂರು ವಾಪಸ್ಸು ಪಡೆಯುವವರೆಗೂ ತಾವು ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನೆಕಾರರು
ಪಟ್ಟುಹಿಡಿದು ಠಾಣೆ ಮುಂದೆ ಕುಳಿತರು.
ಮಹಿಳೆಯರು ರಾಜಕೀಯ ಪ್ರವೇಶಿಸುವುದು ಅತಿವಿರಳ. ನಮ್ಮ ಅಭ್ಯರ್ಥಿ ಕುಸುಮಾ ವಿರುದ್ಧ ದೂರು ದಾಖಲಿಸಿರುವುದು ಸರಿಯಲ್ಲ. ಇಲ್ಲಿನ ಠಾಣಾಧಿಕಾರಿ ಆರ್‍ಎಸ್‍ಎಸ್ ಪರ ಇದ್ದು, ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಠಾಣೆಯಿಂದ ಅಮಾನತು ಮಾಡಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








