ಅಂಬೇಡ್ಕರ್‍ಗೆ ಅವಮಾನ : ಉಮಾಶಂಕರ್ ವಿರುದ್ದ ಕ್ರಮಕ್ಕೆ ಆಗ್ರಹ

ಚಿತ್ರದುರ್ಗ

     ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‍ರವರು ಒಬ್ಬರೇ ಸಂವಿಧಾನ ರಚಿಸಿಲ್ಲವೆಂದು ಅವಮಾನಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಅಂಬೇಡ್ಕರ್ ಸೇನೆ(ರಿ.) ವತಿಯಿಂದ ಬೃಹತ್ ಪ್ರತಿಭಟನೆ ಮೆರವಣಿಗೆಯನ್ನು ನಡೆಸಲಾಯಿತು.

     ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಕ್ಕೂ ಹೆಚ್ಚು ಅಂಬೇಡ್ಕರ್ ಸೇನೆ ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಎಸ್.ಆರ್.ಉಮಾಶಂಕರ್ ವಿರುದ್ದ ಧಿಕ್ಕಾರ ಕೂಗಿದರು.ಬಾಬಾ ಸಾಹೇಬರ ಸತತ ಪರಿಶ್ರಮ ಹಾಗೂ ಪ್ರಯತ್ನದಿಂದ ರೂಪುಗೊಂಡ ವಿಶ್ವಶ್ರೇಷ್ಠ ಸಂವಿಧಾನವನ್ನು ಇಡೀ ವಿಶ್ವವೇ ಮೆಚ್ಚಿರುವಾಗ ಕೆಲವು ಮನುವಾದಿಗಳು ಹಾಗೂ ಫ್ಯಾಶಿಸ್ಟರು ತಮಗೆ ಬೇಕಾದಂತೆ ಸಂವಿಧಾನವನ್ನು ತಿರುಚುವ ಹುನ್ನಾರ ನಡೆಸುತ್ತಿದ್ದಾರೆ.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಸಂವಿಧಾನದ ವಿರುದ್ಧ ಒಳಸಂಚು ನಡೆಸುತ್ತಿದೆ. ಇಂತಹ ಸಂಚುಗಳಿಗೆ ಜಗ್ಗುವ ಮಾತೇ ಇಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾದರೇ ದೇಶದ ಪ್ರತಿಯೊಬ್ಬ ದಲಿತನೂ ಒಗ್ಗೂಡಿ ಹೋರಾಡುತ್ತೇವೆ. ಯಾವ ಶಕ್ತಿಗಳು ಬಾಬಾಸಾಹೇಬರ ಆಶಯಗಳನ್ನು ಅಳಿಸಲು ಸಾಧ್ಯವಿಲ್ಲ. ಸೂರ್ಯ-ಚಂದ್ರರಿರುವವರೆಗೂ ಸಂವಿಧಾನ ಶಾಶ್ವತ.

     ಸಂವಿಧಾನದ ಆಶಯಗಳಿಗೆ ಧಕ್ಕೆಯಾದರೆ ಸಹಿಸುವ ಮಾತಿಲ್ಲ. ಶಿಕ್ಷಣ ಸಚಿವ ಸುರೇಶ್‍ಕುಮಾರ್‍ರವರು ಈ ಕೂಡಲೇ ಗಮನಹರಿಸಿ ಸಂಪೂರ್ಣ ಪ್ರಕಣದ ತನಿಖೆಯನ್ನು ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ಕೆಲಸ ಮಾಡಬೇಕಿದೆ ಹಾಗೂ ಎಸ್.ಆರ್.ಉಮಾಶಂಕರ್ ಹಾಗೂ ಇವರ ಹಿಂದಿರವ ಕಾಣದ ಕೈಗಳನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

     ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್.ಎ ತಾಳಿಕೆರೆ ಮಾತನಾಡಿ, ಸಂವಿಧಾನದ ಬಗ್ಗೆ ತಪ್ಪು ಸಂದೇಶ ರವಾನಿಸುವ ಕೆಲಸ ಮಾಡಿರುವುದು ದುರಂತದ ಸಂಗತಿ. ಡಾ.ಬಿ.ಆರ್.ಅಂಬೇಡ್ಕರ್‍ರವರು ಕಟ್ಟಿಕೊಟ್ಟ ಪವಿತ್ರ ಸಂವಿಧಾನವನ್ನು ಸಂರಕ್ಷಿಸುವ ಹೊಣೆ ಭಾರತದ ಪ್ರತಿಯೊಬ್ಬ ನಾಗರೀಕನ ಹೊಣೆ, ವಿಶ್ವವೇ ಮೆಚ್ಚಿದ ಭಾರತದ ಕಾನೂನು ವ್ಯವಸ್ಥೆಯನ್ನು ಪ್ರಶ್ನಿಸುವುದು ನಾಚಿಕೆಗೇಡಿನ ಸಂಗತಿ. ಶಿಕ್ಷಣ ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಿ ಮುಂದೆ ಇಂತಹ ಅಪರಾದಗಳು ಮರುಕಳಿಸದಂತೆ ತಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟಗಳನ್ನು ರೂಪಿಸಲಾಗುವುದು ಎಂದು ಎಚ್ಚರಿಸಿದರು.

    ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ್.ಟಿ, ಸುರೇಶ್, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅನಂತ್‍ಕುಮಾರ್, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ರೇವಣ್ಣಸಿದ್ದಪ್ಪ.ಬಿ ಕಲ್ಕುಂಟೆ, ಪ್ರಧಾನ ಕಾರ್ಯದರ್ಶಿ ಎನ್.ಹಾಲೇಶ್, ಹಿರಿಯೂರು ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ.ಎಂ. (ಜಿಮ್), ಹಿರಿಯೂರು ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಸ್ತಾಫ್, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಗಿರೀಶ್, ಕೋಟಿ, ಪುನೀತ್, ಮಲ್ಲಿಕಾರ್ಜುನ್ ಶಿವು, ನರಸಿಂಹಮೂರ್ತಿ, ಸುನೀಲ್, ನವೀನ್, ಧನುಶ್, ವಿಶ್ವನಾಥ್, ಸ್ವಾಮಿ, ಅಂಜಿನಿ, ಮಂಜುಬೆಳ್ಳಿ, ಶ್ರೀಧರ್, ಶ್ರೀನಿವಾಸ್ ಹಾಗೂ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap