ಚಿತ್ರದುರ್ಗ:
ಬಾಕಿ ವೇತನ ಕೇಳಿದರೆ ಪಂಚಾಯಿತಿ ಅಧಿಕಾರಿಗಳು ದಿನಗೂಲಿ ನೌಕರರ ಹಾಗೂ ಪೌರ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರದಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಹಿರಿಯೂರಿನಿಂದ ಕಾಲ್ನಡಿಗೆ ಜಾಥ ಮೂಲಕ ಚಿತ್ರದುರ್ಗಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ನೌಕರರು ಹಾಗೂ ಪೌರ ಕಾರ್ಮಿಕರು ಪಂಚಾಯಿತಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವತನಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲವೆಂದು ಮಧ್ಯಾಹ್ನದಿಂದ ನಡು ರಸ್ತೆಯಲ್ಲಿಯೇ ಧರಣಿ ಕುಳಿತರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಜಿಲ್ಲಾ ಸಮಿತಿಯ ಮುಖ್ಯ ಸಂಚಾಲಕ ಡಿ.ಎಂ.ಮಲಿಯಪ್ಪ ಮಾತನಾಡಿ ಗ್ರಾಮ ಪಂಚಾಯಿತಿ ನೌಕರರ ಜ್ವಲಂತ ಸಮಸ್ಯೆಗಳ ನಿವಾರಣೆಗಾಗಿ ಕಳೆದ 3 ಮತ್ತು ನಾಲ್ಕರಂದು ಜಿ.ಪಂ.ಎದುರು ಧರಣಿ ನಡೆಸಿ ಹದಿನಾಲ್ಕನೇ ಹಣಕಾಸಿನಲ್ಲಿ ಶೇ.10 ರಷ್ಟು ಕಂದಾಯ ವಸೂಲಾತಿಯ ಶೇ.40 ರಷ್ಟು ನಿವೃತ್ತಿ ವೇತನ, ಜಿ.ಪಂ.ನಿಂದ ಅನುಮೋದನೆಯಾಗದೆ ಹೊರಗೆ ಉಳಿದಿರುವ ನೌಕರರಿಗೆ ಕೆಲಸದ ಭದ್ರತೆ, ಪಂಚಾಯಿತಿಗಳಿಂದ ತೆಗೆದು ಹಾಕಿರುವ ನೌಕರರನ್ನು ಮರುನೇಮಕ ಮಾಡುವಂತೆ ಒತ್ತಾಯಿಸಿದರೂ ಯಾವ ಪ್ರಯೋಜನವಾಗಿಲ್ಲ. ಅಬ್ಬಿನಹೊಳೆ ಗ್ರಾ.ಪಂಚಾಯಿತಿಯಲ್ಲಿ ರಜಾ ದಿನದಲ್ಲಿಯೂ ಕೆಲಸಕ್ಕೆ ಹೋಗಿದ್ದ ನೀರಗಂಟಿ ನಾಗರಾಜ ಅಪಘಾತಕ್ಕೀಡಾಗಿ ಕೋಮಸ್ಥಿತಿಗೆ ಹೋಗಿದ್ದಾನೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು ಸರ್ಕಾರ ಅನುಕಂಪದ ಆಧಾರದಲ್ಲಿ ಪಂಚಾಯಿತಿ ವತಿಯಿಂದ ಐದು ಲಕ್ಷ ರೂ.ಪರಿಹಾರ ನೀಡುವಂತೆ ಪಟ್ಟು ಹಿಡಿದರು.
ಪ್ರತಿ ಪಂಚಾಯಿತಿಯಲ್ಲಿಯೂ ಎಸ್.ಆರ್.ಪುಸ್ತಕ ತೆರೆಯಬೇಕು. ಅಪಘಾತಕ್ಕೀಡಾಗಿ ಕೋಮಾದಲ್ಲಿರುವ ನಾಗರಾಜ್ ಕುಟುಂಬದವರಿಗೆ ಪಂಚಾಯಿತಿಯಲ್ಲಿ ಅನುಕಂಪ ಆಧಾರದ ಮೇಲೆ ಸರ್ಕಾರ ನೌಕರಿ ನೀಡಬೇಕು. ಯರಬಳ್ಳಿ ಗ್ರಾಮ ಪಂಚಾಯಿತಿಯ ಮೂವರು ಸಿಬ್ಬಂದಿಗಳನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಬೇಕು. ವಸತಿ ಯೋಜನೆಯಲ್ಲಿ ಅಕ್ರಮ ನಡೆಸಲಾಗಿದೆಯೆಂದು ಪಿ.ಡಿ.ಓ.ಗಳ ಹಾಗೂ ಗಣಕ ಯಂತ್ರ ನಿರ್ವಾಹಕರುಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿರುವುದನ್ನು ಹಿಂದಕ್ಕೆ ಪಡೆದು ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ಅಮಾಯಕ ಡಿ.ಇ.ಓ.ಗಳ ಮೇಲೆ ಕ್ರಮ ಕೈಗೊಂಡಿರುವುದು ಅತ್ಯಂತ ಖಂಡನಾರ್ಹ ಎಂದು ಪಂಚಾಯಿತಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ವಸತಿ ಯೋಜನೆಯಲ್ಲಿ ಜಿ.ಪಿ.ಎಸ್.ಮಾಡಿದ ಸಿಬ್ಬಂದಿ ಮತ್ತು ವಸತಿ ಯೋಜನೆಯ ತಾಲೂಕು ಸಂಯೋಜಕರು ವಸತಿ ನಿಗಮದಲ್ಲಿ ಬೇರೆ ಫಲಾನುಭವಿಯ ಉಳಿತಾಯ ಖಾತೆ ಸಂಖ್ಯೆಯನ್ನು ಈ ಹಿಂದೆ ತೆರೆದಿದ್ದು, ಕಾಣದ ಕೈಗಳ ವಿರುದ್ದ ಇದುವರೆವಿಗೂ ಕ್ರಮ ಕೈಗೊಳ್ಳದಿರುವುದು ನಾನಾ ರೀತಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಡಿ.ಎಂ.ಮಲಿಯಪ್ಪ ಕಿಡಿ ಕಾರಿದರು.ಗ್ರಾಮ ಪಂಚಾಯಿತಿ ನೌಕರರ ಸಂಘ ರಾಜ್ಯ ಸಮಿತಿಯ ಓ.ಶಶಿಕುಮಾರ್, ರಾಜ್ಯ ಉಪಾಧ್ಯಕ್ಷ ಎಂ.ಬಿ.ನಾಗೇಗೌಡ, ಡಿ.ದೇವರಾಜ, ಸಿ.ಟಿ.ಮನೋಹರ, ಫೈರೋಜ್, ನವೀನ್‍ಕುಮಾರ್, ಎ.ಮಾರಪ್ಪ, ರವಿ, ಮಹೇಶ್, ಡಿ.ಎಂ.ಪುರಂದರ ಸೇರಿದಂತೆ ಗ್ರಾ.ಪಂ.ನೌಕರರು ಹಾಗೂ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
