ತಿಪಟೂರು:
ಭೂಸ್ವಾಧೀನಕ್ಕೆ ನೀಡುವ ಪರಿಹಾರಕ್ಕೆ ಸಂಬಂಧಿಸಿದ 2013ರ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ವಾಪಸ್ ಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ-206 ಸಂತ್ರಸ್ತರ ಹೋರಾಟ ಸಮಿತಿ, ರೈತ-ಕೃಷಿಕಾರ್ಮಿಕರ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಉಪ ವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಗಳ ಮುಖಂಡರು ರಾಜ್ಯ ಸರ್ಕಾರಕ್ಕೆ ಬರೆದಿರುವ ಮನವಿ ಪತ್ರದಲ್ಲಿ ತಿದ್ದುಪಡಿಯನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ರೈತ ಮುಖಂಡ ದೇವರಾಜು ಈ ಸಂದರ್ಭ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆದ್ದಾರಿ ರಸ್ತೆ ನಿರ್ಮಾಣ, ವಿಶೇಷ ಆರ್ಥಿಕ ವಲಯ, ನೀರಾವರಿ ಯೋಜನೆಗಳ ಹೆಸರಿನಲ್ಲಿ ರೈತರ ಭೂಮಿಯನ್ನು ಬಂಡವಾಳಿಗರ ಮಡಿಲಿಗೆ ಹಾಕುತ್ತವೆ. ಸರ್ಕಾರವೇ ಏಜೆಂಟರಂತೆ ನಿಂತು ರೈತರಿಗೆ ಪುಡಿಗಾಸಿನ ಪರಿಹಾರ ನೀಡಿ ಭೂಮಿಯನ್ನು ಕಸಿದು ಬಂಡವಾಳಗಾರರಿಗೆ ಧಾರೆ ಎರೆಯುತ್ತವೆ.
ಸ್ವಾಧೀನದಿಂದ ರೈತರಿಗೆ ಆಗುವ ತೊಂದರೆ ವಿರುದ್ಧ ರಾಷ್ಟ್ರಾದ್ಯಂತ ಹೋರಾಟ ನಡೆದಿದ್ದರ ಪರಿಣಾಮ ಭೂಸ್ವಾಧೀನದಲ್ಲಿ ನ್ಯಾಯಬದ್ಧ ಪರಿಹಾರ ಮತ್ತು ಪಾರದರ್ಶಕತೆ, ಪುನರ್ವಸತಿ ಹಾಗೂ ಮರುವ್ಯವಸ್ಥೆಯ ಹಕ್ಕು ಕಾಯ್ದೆ 2013 ಜಾರಿಗೆ ಬಂದಿತ್ತು. ವಿವಿಧ ಸರ್ಕಾರಿ ಯೋಜನೆಗಳಿಗೆ ಭೂಮಿ, ಮನೆ, ನಿವೇಶನ ವಶ ಪಡಿಸಿಕೊಳ್ಳುವಾಗ ಸಂಬಂಧಿಸಿದ ರೈತರಿಗೆ ಹಾಗೂ ನಾಗರಿಕರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ದೊರಕಿಸಲು ಸೂಕ್ತ ನಿರ್ದೇಶನ ನೀಡಿದ್ದ 2013ರ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸಂತ್ರಸ್ತರನ್ನು ಶೋಷಿಸುವ ಉದ್ದೇಶ ಹೊಂದಿದೆ.
ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ಕ್ರಮ ರೈತ ವಿರೋಧಿ, ಬದುಕು ವಿರೋಧಿ ನಿರ್ಧಾರವಾಗಿದೆ ಎಂದು ದೂರಿದರು.
ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ಎಸ್.ಎನ್. ಸ್ವಾಮಿ ಮಾತನಾಡಿ, ಸರ್ಕಾರದ ಯೋಜನೆಗಳಲ್ಲಿ ನಿಜಕ್ಕೂ ಸಾರ್ವಜನಿಕ ಹಿತಾಸಕ್ತಿ ಇದ್ದಿದ್ದರೆ ರೈತರು ಭೂಸ್ವಾಧೀನಕ್ಕೆ ಅಡ್ಡಿಪಡಿಸುತ್ತಿರಲಿಲ್ಲ. ಶಾಲೆ, ಆಸ್ಪತ್ರೆ ಮತ್ತು ರಸ್ತೆಗಳಿಗೆ ರೈತರು ಸ್ವಯಂಪ್ರೇರಣೆಯಿಂದ ಜಮೀನನ್ನು ಉಚಿತವಾಗಿ ನೀಡಿರುವ ಉದಾಹರಣೆಗಳಿವೆ.
ಆದರೆ ಈಗ ತೀವ್ರವಾದ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಬಂಡವಾಳಿಗರನ್ನು ಕಾಪಾಡಲು, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಹೆದ್ದಾರಿ ರಸ್ತೆ, ನೀರಾವರಿ, ಕುಡಿಯುವ ನೀರಿನ ಯೋಜನೆಗಳನ್ನು ಮಾಡಿ ಕೃತಕ ಮಾರುಕಟ್ಟೆಯನ್ನು ಸೃಷ್ಟಿಸಲಾಗುತ್ತಿದೆ. ಅದಕ್ಕೆ ಈ ಯೋಜನೆಗಳ ಹಿಂದೆ ಬಂಡವಾಳ ಹೂಡಿ ಲಾಭಗಳಿಸುವ ಬಂಡವಾಳಿಗರ, ಕಂಟ್ರಾಕ್ಟರ್‍ಗಳ ಹಿತಾಸಕ್ತಿ ಅಡಗಿದೆ ಎಂದು ಟೀಕಿಸಿದರು.
ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 206ರ ಅಗಲೀಕರಣ ಮತ್ತು ಬೈಪಾಸ್ ಯೋಜನೆಯಲ್ಲಿ ಜಮೀನು, ಮನೆ, ಕಟ್ಟಡ, ನಿವೇಶನ ಕಳೆದುಕೊಳ್ಳುತ್ತಿರುವ ರೈತರು ಹಾಗೂ ನಾಗರೀಕರು ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಅವರು ತಮ್ಮ ಬದುಕು ಕಟ್ಟಿಕೊಳ್ಳಲು ಕೇಳುತ್ತಿರುವ ನ್ಯಾಯಬದ್ಧ, ಮಾನವೀಯ ಪರಿಹಾರದ ಕೂಗಿಗೆ ಸರ್ಕಾರ ಕಿವಿಗೊಟ್ಟಿಲ್ಲ. ಆ ಆತಂಕದ ಜತೆಗೆ ಈ ಹೊಸ ತಿದ್ದುಪಡಿಯಿಂದಾಗಿ ರೈತರು ಆತಂಕಗೊಡಿದ್ದಾರೆ. ಈ ತಿದ್ದುಪಡಿ ಅಂಗೀಕಾರದ ಸಂದರ್ಭ ಒಬ್ಬ ಶಾಸಕರೂ ಧ್ವನಿ ಎತ್ತದೇ ಹೋದದ್ದು ದೊಡ್ಡ ದುರಂತ. ಈ ತಿದ್ದುಪಡಿ ರೈತರ ಪಾಲಿಗೆ ಆತಂಕಕಾರಿ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿ ಆ ತಿದ್ದು ಪಡಿಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ತಪ್ಪಿದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. ಆರ್‍ಕೆಎಸ್ ರಾಜ್ಯ ಉಪಾಧ್ಯಕ್ಷ ಎಂ. ಶಶಿಧರ್, ಮನೋಹರ್ ಮನವಿ ಸಲ್ಲಿಸುವ ತಂಡದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
