ದಾವಣಗೆರೆ:
ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ, ಜಿಲ್ಲಾ ವರದಿಗಾರರ ಕೂಟದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ವರದಿಗಾರರ ಕೂಟದಿಂದ ಬೈಕ್ ರ್ಯಾಲಿ ಮೂಲಕ ಎಸಿ ಕಚೇರಿಗೆ ತೆರಳಿದ ಪತ್ರಕರ್ತರು, ಉಪವಿಭಾಗಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್, ಸಂವಿಧಾನದ 4ನೇ ಆಧಾರ ಸ್ತಂಭವಾಗಿರುವ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಸುತ್ತಿರುವ ಪತ್ರಕರ್ತರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಛಾಯಾಗ್ರಾಹಕರ ಮೇಲೆ ಒಂದಿಲ್ಲೊಂದು ಕಾರಣಕ್ಕೆ ಪದೇ ಪದೇ ಹಲ್ಲೆ ಹಾಗೂ ದೌರ್ಜನ್ಯ ನಡೆಯುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಪತ್ರಕರ್ತರಿಗೆ ರಕ್ಷಣೆಯೇ ಇಲ್ಲವಾಗಿದೆ. ಮೊನ್ನೆಯಷ್ಟೇ ತುಮಕೂರು ಜಿಲ್ಲೆಯಲ್ಲಿರುವ ಬೇಳೂರು ಬಾಯ್ಲರ್ ಕಂಪನಿಯಿಂದ ವಿಷಾನಿಲ ಸೋರಿಕೆಯಾಗುತ್ತಿದ್ದು, ಅದರಿಂದ ಪರಿಸರಕ್ಕೆ ಹಾಗೂ ಸ್ಥಳೀಯ ಜನರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತಿದ್ದ ಬಗ್ಗೆ ವರದಿ ಮಾಡಲು ತೆರಳಿದ್ದ ಖಾಸಗಿ ವಾಹಿನಿಯ ವರದಿಗಾರರು ಹಾಗೂ ಕ್ಯಾಮೇರಾಮೆನ್‍ಗಳ ಮೇಲೆ ಕಂಪನಿಯ ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಮಾಧ್ಯಮ ಉಪಕರಣಗಳನ್ನು ಜಖಂ ಗೊಳಿಸಿದ್ದಾರೆಂದು ಆರೋಪಿಸಿದರು.
ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸೂಕ್ತ ಭದ್ರತೆ ಒದಗಿಸುವ ಮೂಲಕ ಮಾಧ್ಯಮ ಪ್ರತಿನಿಧಿಗಳ ಮೇಲೆ ದಾಳಿ, ಹಲ್ಲೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಎಸ್ ಬಡದಾಳ್, ಹಿರಿಯ ಪತ್ರಕರ್ತರಾದ ಕೆ.ಏಕಾಂತಪ್ಪ, ಜಿ.ಎಂ.ಆರ್. ಆರಾಧ್ಯ, ವೀರಪ್ಪ ಎಂ ಭಾವಿ, ಎನ್.ಆರ್.ನಟರಾಜ್, ರಮೇಶ್ ಜಹಗೀರ್‍ದಾರ್, ವಿವೇಕ್ ಎಲ್ ಬದ್ದಿ, ಸಿ.ವರದರಾಜ್, ರವಿಬಾಬು, ಕೆ.ಎಸ್.ಶಂಭು, ಮಂಜುನಾಥ್ ಕಾಡಜ್ಜಿ, ಶಿವಕುಮಾರ್, ಪ್ರವೀಣ್ ಬಾಡಾ, ದೇವಿಕಾ ಸುನೀಲ್, ತೇಜಸ್ವಿನಿ ಪ್ರಕಾಶ್, ಜಾಲಳ್ಳಿ ವೀರೇಶ್, ಎಚ್.ಎನ್.ಪ್ರಕಾಶ್, ಪ್ರಭುರುದ್ರೇಗೌಡ, ಪುನೀತ್, ಮಧು, ರಾಮ್ ಪ್ರಸಾದ್, ಕಿರಣ್ ಕುಮಾರ್, ರವಿರಾಜ್ ಸೊನ್ನದ್, ವಿದ್ಯಾನಾಯ್ಕ್, ವಿಜಯ್ ಜಾದವ್, ಶಾಂತಕುಮಾರ್, ರಮೇಶ್, ವಿಶ್ವನಾಥ್ ಟಿ.ಆರ್, ಹೇಮಂತ್ ಕುಮಾರ್, ಅಣ್ಣಪ್ಪ, ರಾಮು ಮತ್ತಿತರರು ಭಾಗವಹಿಸಿದ್ದರು.