ನೀರಿಗಾಗಿ ಗ್ರಾ ಪಂ ಕಛೇರಿಗೆ ಬೀಗ ಜಡಿದು ಪ್ರತಿಭಟನೆ..!!

ಹೊನ್ನಾಳಿ:

     ನೀರು ಪೂರೈಕೆಯಲ್ಲಿನ ವ್ಯತ್ಯಯ ವಿರೋಧಿಸಿ ತಾಲೂಕಿನ ಎಚ್. ಕಡದಕಟ್ಟೆ ಗ್ರಾಪಂ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ ಬಡಾವಣೆಯ ಸಾರ್ವಜನಿಕರು ಬುಧವಾರ ಎಚ್. ಕಡದಕಟ್ಟೆ ಗ್ರಾಪಂ ಕಚೇರಿ ಎದುರು ಖಾಲಿ ಕೊಡಗಳನ್ನು ಇಟ್ಟುಕೊಂಡು, ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

    ಎಚ್. ಕಡದಕಟ್ಟೆ ಗ್ರಾಪಂ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ ಬಡಾವಣೆಯಲ್ಲಿ ನೂರಕ್ಕೂ ಅಧಿಕ ಮನೆಗಳಿವೆ. ಈ ಪ್ರದೇಶದಲ್ಲಿ ಬಹುತೇಕ ಕೂಲಿ-ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ನೀರಿನ ಕೊರತೆಯಿಂದ ಕಂಗಾಲಾಗಿದ್ದಾರೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

      ಕಳೆದ ಮೂರು ತಿಂಗಳಿಂದಲೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಗ್ರಾಪಂ ಕಚೇರಿ ಸಮೀಪ ಇರುವ ಗಡಿ ಚೌಡೇಶ್ವರಿ ದೇವಸ್ಥಾನದ ಬಳಿ ಇದ್ದ ಕೊಳವೆ ಬಾವಿಯಿಂದ ಈವರೆಗೆ ನೀರು ಪೂರೈಸಲಾಗುತ್ತಿತ್ತು. ಆದರೆ, ಅಲ್ಲಿ ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಳ್ಳಲಾರಂಭಿಸಿದ ಬಳಿಕ ಗ್ರಾಪಂ ಆಡಳಿತ ಟ್ಯಾಂಕರ್ ಮೂಲಕ ನೀರು ಪೂರೈಸಲು ಪ್ರಾರಂಭಿಸಿತು.

    ಆದರೆ, ಬಹುತೇಕ ಕೂಲಿ ಕಾರ್ಮಿಕರೇ ಈ ಬಡಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವುದರಿಂದ ನೀರು ಪೂರೈಕೆ ಟ್ಯಾಂಕರ್ ಬರುವುದನ್ನೇ ಕಾದು ಕುಳಿತುಕೊಳ್ಳಲು ತಮ್ಮಿಂದ ಆಗದು. ಆದ್ದರಿಂದ, ನಮಗೆ ಪೈಪ್‍ಲೈನ್ ಮೂಲಕವೇ ನೀರು ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಅಲ್ಲದೇ, ಟ್ಯಾಂಕರ್ ನೀರನ್ನು ಕೆಲವೇ ಕೆಲವರು ಪಡೆದುಕೊಳ್ಳುತ್ತಾರೆ. ನಿಗದಿತ ವ್ಯಕ್ತಿಗಳ ಮನೆ ಎದುರು ಟ್ಯಾಂಕರ್ ನಿಲ್ಲಿಸಿ ನೀರು ಒದಗಿಸಲಾಗುತ್ತದೆ. ಆದ್ದರಿಂದ, ಟ್ಯಾಂಕರ್ ನೀರು ನಮಗೆ ಬೇಡವೇ ಬೇಡ ಎಂದು ಪ್ರತಿಭಟನಾ ನಿರತರು ಹೇಳಿದರು.

    ಗ್ರಾಪಂ ಕಚೇರಿ ಸಮೀಪ ಕೊಳವೆಬಾವಿ ಕೊರೆಸಲು ಸ್ಥಳ ಗುರುತಿಸಿ, ಪೈಪ್‍ಲೈನ್ ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದೆ. ಆದರೆ, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ನಾಗಪ್ಪ ಅವರು ಅದಕ್ಕೆ ಸಹಿ ಹಾಕುತ್ತಿಲ್ಲ. ಇದರಿಂದಾಗಿ ಗ್ರಾಪಂ ಅಧಿಕಾರಿ-ಸಿಬ್ಬಂದಿ, ಉಪಾಧ್ಯಕ್ಷೆ, ಸದಸ್ಯರು ಅಸಹಾಯಕರಾಗಿದ್ದಾರೆ.

     ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಗ್ರಾಪಂ ವತಿಯಿಂದ ನಿರ್ವಹಿಸಲಾದ ಕಾಮಗಾರಿಗಳ ಯಾವುದೇ ಒಂದೇ ಒಂದು ಬಿಲ್‍ಗೂ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ನಾಗಪ್ಪ ಸಹಿ ಹಾಕುತ್ತಿಲ್ಲ. ತಮ್ಮನ್ನು ಗ್ರಾಪಂ ಅಧ್ಯಕ್ಷೆ ಸ್ಥಾನದಿಂದ ಅಲುಗಾಡಿಸಲು ಯಾರಿಗೂ ಆಗುವುದಿಲ್ಲ ಎಂಬ ಅಹಂನಿಂದ ಅವರು ಈ ರೀತಿ ವರ್ತಿಸುತ್ತಿದ್ದಾರೆ. ಅವರ ಈ ಧೋರಣೆಯಿಂದಾಗಿ ಗ್ರಾಪಂನ ಎಲ್ಲಾ ಅಭಿವೃದ್ಧಿ ಕಾಮಗಾರಿಗಳೂ ಸ್ಥಗಿತಗೊಂಡಿವೆ ಎಂದು ಗ್ರಾಪಂ ಸದಸ್ಯ ಬಿ.ಕೆ. ಮಾದಪ್ಪ ಬೇಸರ ವ್ಯಕ್ತಪಡಿಸಿದರು.

      ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ನಾಗಪ್ಪ ಸ್ಥಳಕ್ಕೆ ಆಗಮಿಸುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾ ನಿರತರು ಘೋಷಣೆಗಳನ್ನು ಕೂಗಿದರು.

      ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ತಾಪಂ ವ್ಯವಸ್ಥಾಪಕ ಮಹಮ್ಮದ್ ರಫಿ ಸಾರ್ವಜನಿಕರ ಅಹವಾಲು ಆಲಿಸಿದರು. ಪಿಡಿಒ ರವಿಕುಮಾರ್ ಅವರಿಂದ ನೀರು ಪೂರೈಕೆ ಸ್ಥಿತಿ-ಗತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಅವರು, ನೀರು ಅಲಭ್ಯತೆಯ ಸಂದರ್ಭದಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸಲು ಗ್ರಾಪಂ ಕ್ರಮ ಜರುಗಿಸುತ್ತದೆ.

        ಒಂದು ವೇಳೆ ಖಾಸಗಿ ಕೊಳವೆಬಾವಿಗಳ ಮಾಲೀಕರು ಇಲ್ಲವೇ ಜಮೀನುಗಳ ರೈತರು ನೀರು ಒದಗಿಸಲು ಒಪ್ಪದಿದ್ದರೆ ಅಂಥ ಕೊಳವೆಬಾವಿಗಳನ್ನು ಸರಕಾರ ವಶಕ್ಕೆ ಪಡೆದು ನೀರು ಪೂರೈಸುವ ಅಧಿಕಾರ ಇದೆ. ಆದ್ದರಿಂದ, ಯಾರೂ ಆತಂಕಪಡಬಾರದು. ಈ ವಿಷಯವನ್ನು ತಾವು ತಾಪಂ ಇಒ ಎಚ್.ವಿ. ರಾಘವೇಂದ್ರ ಅವರ ಗಮನಕ್ಕೆ ತರುವುದಾಗಿಯೂ ಮತ್ತು ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ನಾಗಪ್ಪ ಅವರೊಂದಿಗೆ ಶೀಘ್ರವೇ ಮಾತನಾಡಿ, ಸಮಸ್ಯೆ ಬಗೆಹರಿಸಲು ಕ್ರಮ ಜರುಗಿಸುವುದಾಗಿಯೂ ಭರವಸೆ ನೀಡಿದರು.

       ಅವರ ಈ ಭರವಸೆ ಹೊರತಾಗಿಯೂ ಪ್ರತಿಭಟನಾ ನಿರತರು ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ನಾಗಪ್ಪ ಸ್ಥಳಕ್ಕೆ ಆಗಮಿಸುವವರೆಗೂ ಪ್ರತಿಭಟನೆ ನಡೆಸುವುದಾಗಿ ತಿಳಿಸಿ ಪ್ರತಿಭಟನೆ ಮುಂದುವರೆಸಿದರು. ಎಚ್. ಕಡದಕಟ್ಟೆ ಗ್ರಾಪಂ ಸದಸ್ಯರಾದ ಬಿ.ಕೆ. ಮಾದಪ್ಪ, ರಾಜಪ್ಪ, ಸಂತೋಷ್, ಪಿಡಿಒ ರವಿಕುಮಾರ್ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap