‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’
ದಾವಣಗೆರೆ:
ಹೊಸ ಪಿಂಚಣಿ ಯೋಜನೆ ರದ್ಧತಿಗಾಗಿ ಹಾಗೂ ಹಳೇ ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ನೇತೃತ್ವದಲ್ಲಿ ಎನ್‍ಪಿಎಸ್ ನೌಕರರು ನಗರದಲ್ಲಿ ಶುಕ್ರವಾರ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಘೋಷಣೆಯೊಂದಿಗೆ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಗರದ ಪ್ರೌಢಶಾಲಾ ಆವರಣದಲ್ಲಿ ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ನೂತನ ಪಿಂಚಣಿ ಯೋಜನೆ ರದ್ಧುಪಡಿಸಿ, ಹಳೆ ಪಿಂಚಣಿ ಯೋಜನೆ ಪುನಾ ಜಾರಿಗೊಳಿಸಿ, ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸಲಿ ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರ (ಮಹಿಳೆ ಮತ್ತು ಪುರುಷ) ಕೇಂದ್ರ ಸಂಘ ಸೇರಿದಂತೆ ಇತರೆ ನೌಕರರ ಸಂಘಗಳ ಬೆಂಬಲದೊಂದಿಗೆ ಹೈಸ್ಕೂಲ್ ಮೈದಾನದಿಂದ ಮೆರವಣಿಗೆ ಹೊರಟ ಎನ್‍ಪಿಎಸ್ ನೌಕರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಡಳಿತ ಭವನಕ್ಕೆ ತೆರಳಿ, ರಕ್ತ ದಾನ ಮಾಡುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಬಿ.ಶಿವಕುಮಾರ, 2006ರ ಏಪ್ರೀಲ್ 1ರಿಂದ ಸರ್ಕಾರಿ ಸೇವೆಗೆ ಸೇರಿದ ನೌಕರರು ಎನ್‍ಪಿಎಸ್ ಯೋಜನೆ ವ್ಯಾಪ್ತಿಗೆ ಬರಲಿದ್ದಾರೆ. ಈ ಯೋಜನೆಯಿಂದಾಗಿ ಸರ್ಕಾರ ನೌಕರರ ವೇತನದಲ್ಲಿ ಶೇ.10 ರಷ್ಟು ಕಟಾವಣೆ ಮಾಡಿಕೊಳ್ಳುವ ಮೊತ್ತಕ್ಕೆ ಸರಿಸಮಾನವಾಗಿ ಸರ್ಕಾರವು ವಂತಿಗೆ ರೂಪದಲ್ಲಿ ಪಾವತಿಸಲಿದೆ. ಹೀಗೆ ಶೇಖರಣೆ ಗೊಳ್ಳುವ ಮೊತ್ತವನ್ನು ವಿವಿಧ ಖಾಸಗಿ ಕಂಪನಿಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಸಿ, 30-35 ವರ್ಷಗಳ ನಂತರ ಬಂದ ಲಾಭದಲ್ಲಿ ಕಂಪನಿಗಳು ನೌಕರರಿಗೆ ಪಿಂಚಣಿ ನೀಡಬೇಕೆಂಬುದಾಗಿ ಅವೈಜ್ಞಾನಿಕ ನಿರ್ಧಾರ ಕೈಗೊಳ್ಳಲಾಗಿದೆ. ಹೀಗೆ ಸರ್ಕಾರ ನೌಕರರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಿಂಚಣಿಯು ನೌಕರರಿಗೆ ನೀಡುವ ಭಿಕ್ಷೆಯಲ್ಲ. ಆ ನೌಕರರು ದೀರ್ಘಾವದಿಗೆ ಮಾಡಿದ ಸೇವೆ, ಆ ಸೇವಾವದಿಯಲ್ಲಿ ನೌಕರರ ಶ್ರಮಕ್ಕೆ ಮಾರುಕಟ್ಟೆ ದರಕ್ಕಿಂತ ಕಡಿಮೆ ವೇತನ ನೀಡಿ, ಉಳಿದ ಮೊತ್ತವನ್ನು ಪಿಂಚಣಿ ರೂಪದಲ್ಲಿ ಇಳಿ ವಯಸ್ಸಿನ ಸಾಮಾಜಿಕ, ಆರ್ಥಿಕ ಭದ್ರತೆಗಾಗಿ ನೀಡುವಂತಹದ್ದು ಎಂಬುದಾಗಿ ಸುಪ್ರೀಂ ಕೋರ್ಟ್ ಸರ್ಕಾರಗಳಿಗೆ ತಿಳಿ ಹೇಳಿದ್ದರೂ ಸರ್ಕಾರಗಳು ಮಾತ್ರ ಅದನ್ನು ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.
ಎನ್‍ಪಿಎಸ್ ಯೋಜನೆ ಷೇರು ಮಾರುಕಟ್ಟೆ ಆಧರಿಸಿದ್ದು, ನಿವೃತ್ತ ನೌಕರರಿಗೆ ಕನಿಷ್ಟ ನಿಗದಿತ ಪಿಂಚಣಿ ಸಿಗುವ ಯಾವುದೇ ಭರವಸೆ ಇಲ್ಲ. ಎನ್‍ಪಿಎಸ್ ನೌಕರರು ಮರಣ ಹೊಂದಿದ ವೇಳೆ ಅವಲಂಭಿತ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವಂತಹ ಯಾವುದೇ ಅಂಶವನ್ನೂ ಕಾಯ್ದೆ ಒಳಗೊಂಡಿಲ್ಲ. ಎನ್‍ಪಿಎಸ್‍ಗೆ ಒಳಪಡುವ ನೌಕರರು ವೇತನದ ಶೇ.10 ವಂತಿಗೆ ನೀಡಬೇಕಾಗಿದ್ದು, ಒಟ್ಟು ಪಡೆಯಬೇಕಾದ ವೇತನ ಕಡಿಮೆಯಾಗಲಿದೆ. ಇದು ನೌಕರರ ಮಧ್ಯೆ ತಾರತಮ್ಯ ನೀತಿಯಾಗಿದೆ ಎಂದು ದೂರಿದರು.
ಎನ್‍ಪಿಎಸ್ ಯೋಜನೆಯು ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಗೆ ವಿರುದ್ಧವಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯು ನೌಕರರ ಹಣವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಯಾವುದೇ ಭರವಸೆ ಒದಗಿಸಿಲ್ಲ. ನೌಕರರಿಗೆ ಸಾಮಾನ್ಯ ಭವಿಷ್ಯ ನಿಧಿ(ಜಿಪಿಎಫ್)ಯಲ್ಲಿ ಉಳಿತಾಯ ಮಾಡಲು ಅವಕಾಶ ಒದಗಿಸಿಲ್ಲ.
ಸಾಮಾನ್ಯ ಭವಿಷ್ಯ ನಿಧಿಯಲ್ಲಿದ್ದಂತೆ ನೌಕರರು ತಮ್ಮ ಸಾಮಾಜಿಕ ಅಗತ್ಯಕ್ಕಗನುಗುಣವಾಗಿ ಹಣ ಹಿಂಪಡೆಯಲು ಅವಕಾಶವೇ ಇಲ್ಲ. ಆದ್ದರಿಂದ ಸರ್ಕಾರಿ ನೌಕರರಿಗೆ ಮಾರಕವಾಗಿರುವ ಎನ್‍ಪಿಎಸ್ ಯೋಜನೆಯನ್ನು ರದ್ದು ಪಡಿಸಿ, ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಬೇಕೆಂದು ಆಗ್ರಹಿಸಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಬಿ.ಪಾಲಾಕ್ಷಿ ಹೋರಾಟಕ್ಕೆ ಬೆಂಬಲ ಸೂಚಿಸಿ ಭಾಗವಹಿಸಿ, ಮಾತನಾಡಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಮೋಹನ್, ಸಂಘದ ರಾಜ್ಯ ಸಮಿತಿ ಸದಸ್ಯ ಜಿ.ಎನ್.ಮಂಜಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಜಿ.ಎಂ.ಬಸವರಾಜ, ರಾಜ್ಯ ಸರ್ಕಾರಿ ನೌಕರರ ಸಂಘದ ಬಿ.ಶಿವಣ್ಣ, ರಾಜ್ಯ ಪರಿಷತ್‍ನ ಮಾರುತಿ, ಪುನೀತ್, ಶಂಕರ್, ಸಿದ್ದಲಿಂಗ ಸ್ವಾಮಿ, ಶಿವಣ್ಣ, ಪುನೀತ್, ಶಂಕರ್, ಕೆ.ಎಸ್.ಗೋವಿಂದರಾಜ, ಸಿದ್ದಪ್ಪ, ಸಂಗಣ್ಣನವರ್, ತಿಪ್ಪೇಸ್ವಾಮಿ, ಮಂಜುನಾಥ, ಶಿವರಾಜ ಪಾಟೀಲ, ಪರಶುರಾಮ, ನಾಗರಾಜ, ವಿಶ್ವನಾಥ, ಸುಧಾಕರ, ಗುರುಮೂರ್ತಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
