ವೈ.ಎನ್.ಹೊಸಕೋಟೆ
ಬಿತ್ತನೆ ಶೇಂಗಾದ ಬೆಲೆ ಏರಿಕೆಯಿಂದಾಗಿ ಬುಧವಾರ ಹೋಬಳಿಯ ರೈತರು ರೈತ ಸಂಪರ್ಕ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರದೇಶದಲ್ಲಿ ಮಿತಿಮೀರಿದ ಬರಗಾಲ ತಲೆದೋರಿಜe. ಈ ಹಿಂದೆ ಅಲ್ಪಸ್ವಲ್ಪ ಮಳೆಯಿಂದ ಇಲ್ಲಿನ ರೈತ ನಿಟ್ಟುಸಿರು ಬಿಟ್ಟಿದ್ದನು. ಬಿತ್ತನೆ ಮಾಡಲು ಸಿದ್ದಗೊಂಡಿದ್ದ ರೈತ ಸರ್ಕಾರದಿಂದ ನೀಡುತ್ತಿರುವ ಬಿತ್ತನೆ ಶೇಂಗಾಗಾಗಿ ಹರಸಾಹಸ ಪಡುತ್ತಿದ್ದಾನೆ. ಅದಕ್ಕೆ ಪೂರಕವಾಗಿ ಕಚೇರಿಗಳಿಗೆ ಅಲೆದು ದಾಖಲೆಗಳನ್ನು ಹೊಂದಿಸಿ ಬಿತ್ತನೆ ಶೇಂಗಾ ಪಡೆಯುತ್ತಿದ್ದಾನೆ.
ಮಾರುಕಟ್ಟೆಯಲ್ಲಿ ಬಿತ್ತನೆ ಶೇಂಗಾದ ಬೆಲೆ ಹೆಚ್ಚಾಗಿದ್ದರಿಂದ ರೈತರು ಸರ್ಕಾರ ನೀಡುವ ಬಿತ್ತನೆಯ ಮೇಲೆ ಹೆಚ್ಚು ಅವಲಂಬಿತರಾದರು. ಸರ್ಕಾರ ಎಸ್ಸಿ, ಎಸ್‍ಟಿ ರೈತರಿಗೆ 30 ಕೆ.ಜಿ.ಶೇಂಗಾಕ್ಕೆ 1320 ರೂ.ಗಳನ್ನು ಮತ್ತು ಸಾಮಾನ್ಯ ವರ್ಗದವರಿಗೆ 1590 ರೂ.ಗಳನ್ನು ನಿಗದಿ ಮಾಡಿ ವಿತರಣೆ ಮಾಡುತ್ತಿತ್ತು.
ಈಗಾಗಲೇ ಸುಮಾರು ಶೇ. 30 ರೈತರಿಗೆ ಬಿತ್ತನೆ ಶೇಂಗಾ ವಿತರಣೆಯಾಗಿದೆ. ಆದರೆ ಈಗ ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆ ಶೇಂಗಾದ ಬೆಲೆ ಹೆಚ್ಚಾಗಿದೆ ಎಂದು ತಿಳಿಸುತ್ತಾ ಎಸ್ಸಿ, ಎಸ್‍ಟಿ ರೈತರಿಗೆ 30 ಕೆ.ಜಿ.ಶೇಂಗಾಕ್ಕೆ 1530 ರೂ.ಗಳು ಮತ್ತು ಸಾಮಾನ್ಯ ವರ್ಗದವರಿಗೆ 1800 ರೂ.ಗಳ ದರವನ್ನು ನಿಗದಿ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತಾಪಿವರ್ಗ ಧರಣಿ ಕೂತು ಪ್ರತಿಭಟನೆ ನಡೆಸಿದ್ದಾರೆ.
ಈ ಹಿಂದೆ ನಿಗದಿಪಡಿಸಿದ ದರದಲ್ಲೇ ಶೇಂಗಾ ವಿತರಣೆ ಆಗಬೇಕು ಎಂದು ರೈತರು ಒತ್ತಾಯಿಸಿದರು. ಧರಣಿಯ ಸ್ಥಳಕ್ಕೆ ಆಗಮಿಸಿದ ಸಿಪಿಐ ಶ್ರೀಶೈಲಮೂರ್ತಿ ರೈತರ ಮನವೊಲಿಸಲು ಯತ್ನಿಸಿದರೂ ಪಟ್ಟುಬಿಡದ ರೈತರು ಹಳೆಯ ಬೆಲೆಗೆ ಶೇಂಗಾ ನೀಡುವವರೆಗೆ ಧರಣಿ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕೃಷಿ ಅಧಿಕಾರಿ ಪಿ.ಎನ್.ಜಗನ್ನಾಥ ಮೇಲಧಿಕಾರಿಗಳೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದರು. ಈಗಿರುವ ದಾಸ್ತಾನನ್ನು ಹಳೆಯ ಬೆಲೆಗೆ ನೀಡಲಾಗುತ್ತದೆ ಮತ್ತು ಹೊಸದಾಗಿ ಬರುವ ಶೇಂಗಾಕ್ಕೆ ಸರ್ಕಾರ ನಿಗದಿ ಮಾಡಿದ ಬೆಲೆ ನೀಡಬೇಕಾಗುತ್ತದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಯ್ಯ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/07/03-ynh-01.gif)