ಬೆಂಗಳೂರು
ತಮಿಳುನಾಡು ಮೂಲದ ಪ್ರೇಮಿಗಳ ಮರ್ಯಾದೆ ಹತ್ಯೆಯ ಆರೋಪಿಗಳ ಗಡಿಪಾರಿಗೆ ಒತ್ತಾಯಿಸಿ ಬಿಡುಗಡೆಯ ಚಿರತೆಗಳು ಸಂಘಟನೆಯ ಕಾರ್ಯಕರ್ತರರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪುರಭವನದ ಮುಂಭಾಗ ಸೇರಿದ ತಮಿಳುನಾಡು ಮೂಲದ ಪ್ರೇಮಿಗಳಿಬ್ಬರನ್ನು ಕೊಲೆ ಮಾಡಿ ಶಿವಸಮುದ್ರ ಬಳಿ ಕಾವೇರಿ ನದಿಯಲ್ಲಿ ಶವಗಳನ್ನು ಎಸೆದು ಹೋಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
ಅಂತರ್ ಜಾತಿಯ ವಿವಾಹದ ಹಿನ್ನೆಲೆಯಲ್ಲಿ ಯುವತಿಯರ ಕುಟುಂಬದವರೇ ಇಬ್ಬರು ಪ್ರೇಮಿಗಳನ್ನು ಮರ್ಯಾದೆ ಹತ್ಯೆ ಮಾಡಿದ್ದು, ನಾಗರೀಕ ಸಾಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ ಎಂದು ಬಿಡುಗಡೆಯ ಚಿರತೆಗಳು ಸಂಘಟನೆಯ ಕಾರ್ಯದರ್ಶಿ ರಿಯಾಜ್ ತಿಳಿಸಿದರು.
ತಮಿಳುನಾಡು ಮೂಲದ ಹೊಸೂರು ತಾಲ್ಲೂಕಿನ ಚೋಡಗೌಡನಹಳ್ಳಿ ಗ್ರಾಮದ ದಲಿತ ಯುವಕ ನಂದೀಶ್ (26) ಅದೇ ಗ್ರಾಮದ ಮೇಲ್ಜಾತಿ ಯುವತಿ ಸ್ವಾತಿ (19) ಪರಸ್ಪರ ಪ್ರೀತಿಸಿ, ಮದುವೆಯಾಗಿದ್ದು, ಇವರ ಪ್ರೀತಿಗೆ ಯುವತಿ ಕುಟುಂಬದವರು ವಿರೋಧಿಸಿ ಹತ್ಯೆ ಮಾಡಿದ್ದಾರೆ.
ಯುವಕ- ಯುವತಿಯರನ್ನು ಪುಸಲಾಯಿಸಿ, ಅಪಹರಿಸಿ, ಮನಸೋ ಇಚ್ಛೆ ತಳಿಸಿ, ಕೈಕಾಲು ಕಟ್ಟಿ ಹತ್ಯೆಗೈದು ಮೃತದೇಹಗಳನ್ನು ಕಾವೇರಿ ನದಿಗೆ ಎಸೆದಿದ್ದಾರೆ ಎಂದು ದೂರಿದರು.
ದಂಪತಿ ಹತ್ಯೆ ಪ್ರಕರಣದಲ್ಲಿ ಯುವತಿಯ ತಂದೆ ದೊಡ್ಡಪ್ಪ ಸೇರಿದಂತೆ ಐವರನ್ನು ಬಂಧಿಸಿದ್ದು, ಮರ್ಯಾದೆ ಹತ್ಯೆಗೆ ಪ್ರೇರಣೆ ನೀಡಿದ ಎಲ್ಲರನ್ನು ಕೂಡಲೇ ಬಂಧಿಸಿ, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಅಂತರ್ ಜಾತಿ ಮತ್ತು ಪ್ರೇಮ ವಿವಾಹವಾದ ದಂಪತಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ಕಲ್ಪಿಸಬೇಕು. ಮರ್ಯಾದೆ ಹತ್ಯೆ ತನಿಖೆಯಲ್ಲಿ ವಿಳಂಬ ನೀತಿಯನ್ನು ಅನುಸರಿಸಿದ ಪೆಲೀಸರನ್ನು ಕೂಡಲೇ ಅಮಾನತ್ತು ಮಾಡಬೇಕು. ಹಾಗೂ ದಲಿತ ಯುವಕ ನಂದೀಶ್ ಕುಟುಂಬಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ