ಬೆಂಗಳೂರು
ಜಾತಿ ಪ್ರಮಾಣ ಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜದವರು ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಫ್ರೀಡಂ ಪಾರ್ಕ್ನಲ್ಲಿ ಸೇರಿದ ಬೇಡ ಜಂಗಮ ಸಮಾಜದ ನೂರಾರು ಮಂದಿ ಪ್ರತಿಭಟನೆ ನಡೆಸಿ ಬೇಡ ಜಂಗಮ ಸಮುದಾಯಕ್ಕೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಕಂದಾಯ ಇಲಾಖೆ ಅಧಿಕಾರಿಗಳು ಪ್ರಮಾಣ ಪತ್ರ ನೀಡದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶ ನೀಡಿದರೂ, ಸರ್ಕಾರಿ ಅಧಿಕಾರಿಗಳು ಸುಳ್ಳು ಹೇಳಿ ಸಮಾಜಕ್ಕೆ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ದೊರೆಯುವ ಅವಕಾಶದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಬೇಡ ಜಂಗಮ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ವೀರೇಂದ್ರ ಪಾಟೀಲ್, ಬೇಡ ಜಂಗಮರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಸಂವಿಧಾನದ 341ನೇ ಪರಿಚ್ಛೇದ ಅಡಿ ಸೇರ್ಪಡೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರಕಾರಗಳೂ ರಾಜ್ಯಪತ್ರದಲ್ಲಿ ಈ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸಿವೆ ಎಂದು ತಿಳಿಸಿದರು.
ರಾಜ್ಯ ಸರಕಾರವು ಆಹಾರ ಪದ್ಧತಿ, ಆಚಾರ, ವಿಚಾರ ಸೇರಿದಂತೆ ನಾನಾ ಅಂಶಗಳನ್ನು ಮುಂದಿರಿಸಿಕೊಂಡು ಬೇಡ ಜಂಗಮರನ್ನು ಗುರುತಿಸುವ ಬಗ್ಗೆ ಸ್ಪಷ್ಟ ಸೂಚನೆ ನೀಡಿದೆ.ಈ ಬಗ್ಗೆ ಡಾ.ಸ್ವಾಮಿನಾಥನ್ ಕಾಮತ್ ಅವರ ಆಯೋಗವು ಸಮಗ್ರ ಅಧ್ಯಯನ ನಡೆಸಿ ವೀರಶೈವ ಧರ್ಮದ ಅನುಯಾಯಿಗಳಾದ ಜಂಗಮರೇ ಬೇಡ ಜಂಗಮರೆಂದು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆಂದು ತಿಳಿಸಿದರು.
ಅದೇ ರೀತಿ ರಾಜ್ಯ ಉಚ್ಚ ನ್ಯಾಯಾಲಯವು ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡಿಕೆ ವಿರೋಧಿಸಿ ದಾಖಲಾಗಿದ್ದ ಪ್ರಕರಣವನ್ನು 1995ರಲ್ಲಿಯೇ ತಿರಸ್ಕರಿಸಿದೆ. ಈ ನಂತರ ರಾಜ್ಯದ ಹೈ.ಕ.ಭಾಗದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಬೇಡ ಜಂಗಮರಿದ್ದಾರೆಂದು ಜನಗಣತಿಯಲ್ಲಿ ಗೊತ್ತಾಗಿದೆ. ಆದರೂ ಜಿಲ್ಲೆಯಲ್ಲಿ ಅಧಿಕಾರಿಗಳು ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿದ್ದಾರೆಂದು ಟೀಕಿಸಿದರು.