ತುಮಕೂರು

ತುಮಕೂರು ನಗರದಲ್ಲಿ ಸ್ಮಾರ್ಟ್‍ಸಿಟಿ ಕಂಪನಿ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳ ಅವ್ಯವಸ್ಥೆ ಬಗ್ಗೆ ಗುರುವಾರ ಸಮಾವೇಶಗೊಂಡಿದ್ದ ತುಮಕೂರು ಮಹಾನಗರ ಪಾಲಿಕೆಯ ಮುಂದುವರೆದ ಸಾಮಾನ್ಯ ಸಭೆಯ ಐದನೇ ದಿನದಂದು ಪಾಲಿಕೆ ಸದಸ್ಯರಿಂದ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಯಿತು.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಈ ಸಭೆಗೆ ಆಗಮಿಸಿದ್ದ ಸ್ಮಾರ್ಟ್‍ಸಿಟಿ ಅಧಿಕಾರಿಗಳ ಮೇಲೆ ಮುಗಿಬಿದ್ದರು. ಆದರೆ ಸ್ಮಾರ್ಟ್‍ಸಿಟಿ ಕಂಪನಿಗೆ ಹೊಸ ವ್ಯವಸ್ಥಾಪಕ ನಿರ್ದೇಶಕರು ನಿಯುಕ್ತಿಗೊಂಡಿರುವುದರಿಂದ ಅವರು ಅಧಿಕಾರ ಸ್ವೀಕರಿಸಿದ ಬಳಿಕ ದಿನಾಂಕ ನಿಗದಿಪಡಿಸಿಕೊಂಡು ಈ ಬಗೆಗೇ ಪ್ರತ್ಯೇಕ ಸಭೆ ನಡೆಸಲು ಅಂತಿಮವಾಗಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕಾಂಗ್ರೆಸ್‍ನ ಜೆ.ಕುಮಾರ್ (7 ನೇ ವಾರ್ಡ್-ಅಗ್ರಹಾರ) ಸ್ಮಾರ್ಟ್‍ಸಿಟಿ ಕಾಮಗಾರಿಗಳ ಬಗೆಗೇ ಚರ್ಚೆಗಾಗಿ ಅಧಿಕೃತವಾಗಿ ವಿಷಯ ಮಂಡಿಸಿದ್ದರು. ಪ್ರಜಾಪ್ರಗತಿ ಒಳಗೊಂಡು ವಿವಿಧ ಪತ್ರಿಕಾ ಸುದ್ದಿಗಳ ತುಣುಕುಗಳು ಮತ್ತು ವಿವಿಧ ದಾಖಲಾತಿಗಳ ಜೊತೆಗೆ ಚರ್ಚೆ ಆರಂಭಿಸಿದ ಅವರು, ನಗರಾದ್ಯಂತ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಆಗುತ್ತಿದ್ದು, ಎಲ್ಲವೂ ಅಸ್ಪಷ್ಟವಾಗಿವೆ.
ಏನು ನಡೆಯುತ್ತಿದೆಯೆಂಬುದೇ ಗೊತ್ತಾಗದಷ್ಟು ಗೊಂದಲಗಳಿವೆ. ಕೋಟ್ಯಂತರ ರೂ.ಗಳ ಕಾಮಗಾರಿ ಬಗ್ಗೆ ಸ್ಪಷ್ಟತೆಯೇ ಇಲ್ಲ ಎನ್ನುತ್ತ, ತುಮಕೂರು ಅಮಾನಿಕೆರೆಯ ಒತ್ತುವರಿಯನ್ನೇ ತೆರವುಗೊಳಿಸದೆ, ಅದನ್ನು ಅಭಿವೃದ್ಧಿಪಡಿಸಲಾಗಿದ್ದು ಈಗ ಮತ್ತೆ ಇನ್ನಷ್ಟು ಕಾಮಗಾರಿಗಳು ನಡೆಯುತ್ತಿವೆ. ಈ ಅಮಾನಿಕೆರೆಯ ರಾಜಗಾಲುವೆಗಳ ಒತ್ತುವರಿಯನ್ನು ತೆರವು ಮಾಡದೆ, ಒಮ್ಮೆ 38 ಲಕ್ಷ ಹಾಗೂ ಇನ್ನೊಮ್ಮೆ 16 ಲಕ್ಷ ರೂ.ಗಳನ್ನು ರಾಜಗಾಲುವೆ ಕಾಮಗಾರಿಗಳಿಗಾಗಿ ವ್ಯಯಿಸಲಾಗಿದೆ. ಈಗ ಕೇವಲ ಎರಡು ದಿನಗಳ ಸತತ ಮಳೆಗೇ ತುಮಕೂರು ನಗರದಲ್ಲಿ ಯದ್ವಾತದ್ವಾ ಮಳೆ ನೀರು ಹರಿದು, ಫಜೀತಿಗಳಾಗಿವೆ. ಇನ್ನು ಭಾರಿ ಮಳೆ ಬಂದರೆ ಗತಿ ಏನಾದೀತು? ಇನ್ನು ನಗರದಲ್ಲಿ ಬೀಳುವ ಮಳೆ ನೀರು ಎಲ್ಲಿಗೆ ಹರಿದು ಹೋಗುತ್ತಿದೆ? ಎಂದು ಪ್ರಶ್ನಿಸಿದರು.
ಸ್ಮಾರ್ಟ್‍ಸಿಟಿ ಕಂಪನಿಯ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ರಶ್ಮಿ ಇದಕ್ಕೆ ಉತ್ತರ ನೀಡುತ್ತ, ಸರ್ವೆ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ಅಮಾನಿಕೆರೆಯ ಕಾಮಗಾರಿಗಳು ನಡೆದಿವೆ. ಟೂಡಾ ವತಿಯಿಂದ ಮತ್ತು ಸ್ಮಾರ್ಟ್‍ಸಿಟಿ ಕಂಪನಿ ವತಿಯಿಂದ ಇಲ್ಲಿ ಕಾಮಗಾರಿಗಳು ನಡೆದಿವೆ. ಕೆಲವೊಂದು ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆದರೆ ಈ ಉತ್ತರಕ್ಕೆ ಜೆ.ಕುಮಾರ್ ಸಮಾಧಾನಗೊಳ್ಳಲಿಲ್ಲ. ಕೆರೆಯ ವಿಸ್ತೀರ್ಣ 700 ಎಕರೆಯಷ್ಟಿದ್ದು, ಈಗ ಕೇವಲ 500 ಎಕರೆಯಷ್ಟು ಮಾತ್ರ ಅಭಿವೃದ್ಧಿಪಡಿಸಲಾಗಿದೆ. ಇನ್ನು ರಾಜಕಾಲುವೆಗಳ ಒತ್ತುವರಿಯನ್ನು ತೆರವು ಮಾಡಿಯೇ ಇಲ್ಲ. ಸಾರ್ಟ್‍ಸಿಟಿ ಕಂಪನಿಯಲ್ಲಿ ಅನಿರುದ್ಧ ಶ್ರವಣ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ ಇದೇ ಕಾರಣದಿಂದ ಇದಕ್ಕೆ ಸಂಬಂಧಿಸಿದ ಬಿಲ್‍ಗಳನ್ನು ಬಾಕಿ ಇರಿಸಿದ್ದರು ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‍ನ ಟಿ.ಎಂ.ಮಹೇಶ್ (5 ನೇ ವಾರ್ಡ್-ಶ್ರೀರಾಮ ನಗರ) ಅಮಾನಿಕೆರೆಯ ವಿಸ್ತೀರ್ಣ ಸುಮಾರು 800 ಎಕರೆಯಷ್ಟಿದೆ ಎಂದರು. ಬಿಜೆಪಿಯ ಎಚ್.ಮಲ್ಲಿಕಾರ್ಜುನಯ್ಯ ಅಮಾನಿಕೆರೆಯ ವಿಸ್ತೀರ್ಣ ದೊಡ್ಡದಾಗಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆಯ ಪ್ರಭಾರ ಆಯುಕ್ತ ಯೋಗಾನಂದ್, ಅಮಾನಿಕೆರೆಯ ವಿಸ್ತೀರ್ಣ 512 ಎಕರೆ ಮಾತ್ರ. ಕಂದಾಯ ಇಲಾಖೆಯು ಅದರ ಅಳತೆಯನ್ನು ನಿಗದಿಪಡಿಸಿದೆ. ಅದನ್ನು ಆಧರಿಸಿ ಟೂಡಾದಿಂದ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಆದರೆ ಕೆಲ ಸದಸ್ಯರು ಈ ಅಳತೆಯನ್ನು ಒಪ್ಪಲಿಲ್ಲ.
ಡಸ್ಟ್ ಬಿನ್ ಹಗರಣ
ಮತ್ತೆ ಮಾತು ಮುಂದುವರೆಸಿದ ಜೆ.ಕುಮಾರ್, ಸ್ಮಾರ್ಟ್‍ಸಿಟಿ ಕಂಪನಿಯು ನಗರದಲ್ಲಿ ಸ್ಟೀಲ್ ಕಸದ ಡಬ್ಬಿ ಇರಿಸಿದ್ದು, ಇದರಲ್ಲೂ ಹಗರಣವಾಗಿದೆ. ಒಂದಕ್ಕೆ 12000 ರೂ.ಗಳಾಗಿವೆ. ಇವುಗಳಲ್ಲಿ ಕೆಲವು ಹಾಳಾಗಿವೆ. ಕೆಲವು ಕಳುವಾಗಿವೆ. ಇದರಿಂದ ಸಾರ್ವಜನಿಕರ ತೆರಿಗೆ ಹಣ ದುರ್ವಿನಿಯೋಗವಾದಂತಾಗಿದೆ. ಆದರೆ ರೈಲು ನಿಲ್ದಾಣದಲ್ಲಿ ಇದೇ ಮಾದರಿಯ ಫೈಬರ್ ಕಸದ ಡಬ್ಬಿಗಳನ್ನು ಇರಿಸಿದ್ದು, ಒಂದಕ್ಕೆ ಕೇವಲ 3500 ರೂ. ವ್ಯಯವಾಗಿದೆ. ಜೊತೆಗೆ ಇವುಗಳನ್ನು ಇಡುವ ಸ್ಥಳದ ಬಗ್ಗೆ ಸದಸ್ಯರಿಗೇ ಮಾಹಿತಿ ಇಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಮಾರ್ಟ್ ಸಿಟಿಯ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ರಶ್ಮಿ, ಪ್ರಸ್ತುತ ನಗರದ 48 ಸ್ಥಳಗಳಲ್ಲಿ ಪಾಲಿಕೆಯ ಪರಿಸರ ಇಂಜಿನಿಯರ್‍ಗಳ ಸಲಹೆಯಂತೆ ಮಾತ್ರ ಡಸ್ಟ್ ಬಿನ್ ಅಳವಡಿಸಲಾಗಿದೆ. ಈಗ ಸ್ಮಾರ್ಟ್ ರಸ್ತೆ ಕಾಮಗಾರಿಗಳು ನಡೆಯುತ್ತಿರುವುದರಿಂದ ಕೆಲವೆಡೆ ಇವುಗಳನ್ನು ತೆಗೆಯುವಂತೆ ಗುತ್ತಿಗೆದಾರರಿಗೆ ನಾವೇ ಸೂಚಿಸಿದ್ದೇವೆ. ಅಲ್ಲದೆ ಇದನ್ನು ನಿಗದಿತ ಕಾಲಾವಧಿಯಲ್ಲಿ ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ಗುತ್ತಿಗೆದಾರರಿಗೆ ಇದ್ದೇ ಇರುತ್ತದೆ ಎಂದು ಹೇಳಿದರು.
ಈ ಮಧ್ಯ ಕಾಂಗ್ರೆಸ್‍ನ ಫರೀದಾ ಬೇಗಂ, ಬಿಜೆಪಿಯ ದೀಪಶ್ರೀ ಮಹೇಶ್ ಬಾಬು , ಕಾಂಗ್ರೆಸ್‍ನ ಇನಾಯತ್ ಉಲ್ಲಾ ಖಾನ್ , ಬಿಜೆಪಿಯ ಎಚ್.ಮಲ್ಲಿಕಾರ್ಜುನಯ್ಯ ಮೊದಲಾದವರು ತಮ್ಮ ವಾರ್ಡ್‍ಗಳಲ್ಲಿ ಆಗುತ್ತಿರುವ ಕೆಲ ಕಾಮಗಾರಿಗಳ ವಿಳಂಬದಿಂದ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿದರು. ಜೊತೆಗೆ ಯಾವುದೇ ಕಾಮಗಾರಿಯ ಮಾಹಿತಿಯೇ ಇಲ್ಲದೆ ಗೊಂದಲ ಉಂಟಾಗುತ್ತಿದೆಯೆಂದೂ ದೂರಿದರು.
ಬಿಜೆಪಿಯ ವಿ.ಎಸ್.ಗಿರಿಜಾ ಮಾತನಾಡಿ, ತಮ್ಮ ವಾರ್ಡ್‍ನಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಯ ಬಗ್ಗೆ ಸಮರ್ಪಕ ಮಾಹಿತಿಯೇ ಇಲ್ಲದಿರುವುದರಿಂದ ಪಾಲಿಕೆಯಿಂದ ಹೊಸ ಕಾಮಗಾರಿ ಕೈಗೊಳ್ಳಲಾಗದೆ ಭಾರಿ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಮಾರ್ಟ್‍ಸಿಟಿ ಕಂಪನಿಯ ಮತ್ತೋರ್ವ ಅಧಿಕಾರಿ, ಪ್ರತಿಯೊಂದು ಕಾಮಗಾರಿಯೂ ಸಲಹಾ ಸಮಿತಿ ಸೂಚನೆ ಮೇಲೆ ನಡೆಯುತ್ತಿದೆ. ಈ ಸಮಿತಿಯಲ್ಲಿ ಪಾಲಿಕೆಯನ್ನು ಪ್ರತಿನಿಧಿಸುವವರೂ ಇರುತ್ತಾರೆ ಎಂದರು.
ಬೇರೆ ಸದಸ್ಯರುಗಳೂ ಏಕ ಕಾಲದಲ್ಲಿ ಸ್ಮಾರ್ಟ್‍ಸಿಟಿ ಅಧಿಕಾರಿಗಳ ವಿರುದ್ಧ ಮುಗಿಬಿದ್ದರು. ಕೆಲ ಕ್ಷಣ ಯಾರೇನು ಹೇಳುತ್ತಿದ್ದಾರೆಂಬುದೇ ಗೊತ್ತಾಗದಂತಾಯಿತು. ಒಂದು ಹಂತದಲ್ಲಿ ಸ್ವತಃ ಮೇಯರ್ ಲಲಿತಾ ರವೀಶ್ (ಜೆಡಿಎಸ್) ಸದಸ್ಯರೇ, ನನಗೂ ಮಾತನಾಡೋದಕ್ಕೆ ಸ್ವಲ್ಪ ಅವಕಾಶ ಕೊಡಿ ಎಂದು ಉದ್ಗರಿಸಿದ ಪ್ರಸಂಗವೂ ಜರುಗಿತು.
ಕೊನೆಗೆ ಪ್ರಭಾರ ಆಯುಕ್ತ ಯೋಗಾನಂದ್ ಮಧ್ಯಪ್ರವೇಶಿಸಿ, ಸ್ಮಾರ್ಟ್‍ಸಿಟಿ ಕಂಪನಿಗೆ ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ಆದರ್ಶಕುಮಾರ್ ನಿಯುಕ್ತರಾಗಿದ್ದು, ಅವರಿನ್ನೂ ಅಧಿಕಾರ ಸ್ವೀಕರಿಸಿಲ್ಲ. ಅವರು ಬಂದ ನಂತರ ಅವರೊಡನೆ ಮಾತನಾಡಿ, ದಿನಾಂಕ ನಿಗದಿಪಡಿಸಿ ವಿಶೇಷ ಸಭೆಯನ್ನು ಮಾಡಲಾಗುವುದು. ಆಗ ಇಂದು ಪ್ರಸ್ತಾಪಿಸಿರುವ ಎಲ್ಲ ವಿಷಯಗಳ ಜೊತೆಗೆ ಒಟ್ಟಾರೆಯಾಗಿ ಸ್ಮಾರ್ಟ್‍ಸಿಟಿ ಬಗ್ಗೆ ಚರ್ಚಿಸಬಹುದಾಗಿರುತ್ತದೆ ಎಂದಾಗ ಎಲ್ಲ ಸದಸ್ಯರೂ ಬೇಸರದಿಂದಲೇ ಒಪ್ಪಿಗೆ ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
